RRR Movie: ರಾಜಮೌಳಿ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ಚಿಕ್ಕಬಳ್ಳಾಪುರದಲ್ಲಿ ವೇದಿಕೆ ಸಜ್ಜು!

By Suvarna NewsFirst Published Mar 18, 2022, 2:54 PM IST
Highlights

ನಗರದ ಹೊರವಲಯದ ಅಗಲಗುರ್ಕಿ ಬಳಿ 5 ಭಾಷೆಯಲ್ಲಿ ರಿಲೀಸ್ ಆಗುತ್ತಿರುವ 'ಆರ್‌ಆರ್‌ಆರ್'  ಸಿನಿಮಾದ ದೇಶದ ಅತಿದೊಡ್ಡ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ.

ಚಿಕ್ಕಬಳ್ಳಾಪುರ (ಮಾ.18): ನಗರದ ಹೊರವಲಯದ ಅಗಲಗುರ್ಕಿ ಬಳಿ 5 ಭಾಷೆಯಲ್ಲಿ ರಿಲೀಸ್ ಆಗುತ್ತಿರುವ 'ಆರ್‌ಆರ್‌ಆರ್' (RRR) ಸಿನಿಮಾದ ದೇಶದ ಅತಿದೊಡ್ಡ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ 1-2 ಲಕ್ಷ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸುಮಾರು 50 ಕ್ಕೂ ಹೆಚ್ಚು  ಎಕರೆ ಪ್ರದೇಶದಲ್ಲಿ ಭವ್ಯ ವೇದಿಕೆ ತಲೆ ಎತ್ತಿದೆ. ಬಾಹುಬಲಿ ನಿರ್ದೇಶಕ ರಾಜಮೌಳಿಯವರ ಬಹುನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್'. ರಾಮ್ ಚರಣ್ ತೇಜ್, ಜೂನಿಯರ್ ಎನ್‌ಟಿಆರ್ , ಆಲಿಯಾ ಭಟ್, ಅಜಯ್ ದೇವಗನ್, ಜಗಪತಿಬಾಬು ಸೇರಿದಂತೆ ಹಲವು ಘಟಾನುಘಟಿಗಳು ನಟಿಸಿರುವ ಚಿತ್ರವಿದು. ಇದೇ ತಿಂಗಳ 25ರಂದು ಸಿನಿಮಾ ಬಿಡುಗಡೆಯಾಗಲಿದ್ದು, ರಿಲೀಸ್‌ಗೂ ಮುನ್ನ ಇಡೀ ದೇಶದಲ್ಲೇ ಅತಿದೊಡ್ಡ ಕಾರ್ಯಕ್ರಮ ಇದಾಗಿದೆ.
 
ಎಲ್ಲಿ ಕಾರ್ಯಕ್ರಮ: ಈಗಾಗಲೇ ನಗರ ಹೊರವಲಯದ ಅಗಲಗುರ್ಕಿ ಬಳಿ ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವೇದಿಕೆಗೆ ಸಿದ್ಧತೆಯಾಗಿದೆ. ಇನ್ನೊಂದೆಡೆ 1-2ಲಕ್ಷ ಅಭಿಮಾನಿಗಳು ಸೇರುವ ಹಿನ್ನೆಲೆ ಭದ್ರತೆ, ಸಂಚಾರ ನಿಯಂತ್ರಣಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮದ ದಿನ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಚಿಕ್ಕಬಳ್ಳಾಪುರದಲ್ಲೇ ಏಕೆ?: ಸಾಮಾನ್ಯವಾಗಿ ರಾಜಮೌಳಿ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್‌ಗಳು ಹೈದ್ರಾಬಾದ್‌ನಲ್ಲೇ ಹೆಚ್ಚಾಗಿ ನಡೆದಿವೆ. ಆದರೆ ಈ ಬಾರಿ ತಮಿಳುನಾಡು, ಕರ್ನಾಟಕ, ಆಂಧ್ರ ಗಡಿಭಾಗದ ಚಿಕ್ಕಬಳ್ಳಾಪುರದಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. 'ಆರ್‌ಆರ್‌ಆರ್' ಸಿನಿಮಾ ಬಹು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಮೂರು ರಾಜ್ಯಗಳು ಸೇರಿದಂತೆ ಇಡೀ ದೇಶದ ಗಮನ ಸೆಳೆಯುವ ಸಲುವಾಗಿ ಚಿಕ್ಕಬಳ್ಳಾಪುರದಲ್ಲಿ ಅತಿದೊಡ್ಡ ಕಾರ್ಯಕ್ರಮ ಮಾಡಲಾಗುತ್ತಿದೆ.

Latest Videos

RRR Movie: ರಾಜಮೌಳಿ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ!

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮಾಡಿದರೆ ಟ್ರಾಫಿಕ್ ಕಿರಿಕಿರಿಯಾಗಲಿದೆ. ಹೀಗಾಗಿ ಆಂಧ್ರಘಿ, ತಮಿಳುನಾಡು, ಕರ್ನಾಟಕ ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇರೆ ಚಿಕ್ಕಬಳ್ಳಾಪುರಕ್ಕೆ ಸಮೀಪವಿರುವ ಹಿನ್ನೆಲೆ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ  ಕೆಂಪೇಗೌಡ ಏರ್ಪೋರ್ಟ್ ಕೂಡ ಚಿಕ್ಕಬಳ್ಳಾಪುರ ಸಮೀಪದಲ್ಲಿ ಇರೋದ್ರಿಂದ ಬರೋ ವಿವಿಧ ರಾಜ್ಯಗಳಿಂದ ಬರೋರಿಗೆ ಅನುಕೂಲ ಆಗಲಿದೆ. 

ರಾಜಕೀಯ ಗಣ್ಯರು ಕೂಡ ಸಾಕ್ಷಿ: ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ಸುಧಾಕರ್, ಎಂಟಿಬಿ ನಾಗರಾಜ್ ಭಾಗವಹಿಸುವ ನಿರೀಕ್ಷೆ ಇದೆ. 

ಇನ್ನೂ 'ಆರ್‌ಆರ್‌ಆರ್'  ಚಿತ್ರದ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್ ತೇಜ್, ಜೂನಿಯರ್ ಎನ್ಟಿಆರ್, ಆಲಿಯಾ ಭಟ್, ಜಗಪತಿ ಬಾಬು, ಮೆಗಸ್ಟಾರ್ ಚಿರಂಜೀವಿ, ಸಂಗೀತ ನಿರ್ದೇಶಕ ಕೀರವಾಣಿ ಸೇರಿದಂತೆ ಹಲವು ನಟ - ನಟಿಯರು ಭಾಗವಹಿಸಲಿದ್ದಾರೆ. ಒಂದೇ ವೇದಿಕೆಯಲ್ಲಿ ಕನ್ನಡ ಮತ್ತು ತೆಲುಗು ಕಾರ್ಯಕ್ರಮ ನಡೆಯಲಿದ್ದು, ಅನುಶ್ರೀ ಕನ್ನಡ ನಿರೂಪಣೆ ಮಾಡಿದರೆ, ತೆಲುಗಿನಲ್ಲಿ ಸುಮಾ ನಿರೂಪಣೆ ಮಾಡಲಿದ್ದಾರೆ.

ಅಪ್ಪುಗೆ ವಿಶೇಷ  ನಮನ: ಕಾರ್ಯಕ್ರಮದ ಆರಂಭದಲ್ಲೇ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಕೆಯಾಗಲಿದೆ. ಇಡೀ ದೇಶದ ಸಿನಿಮಾ ರಂಗದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅಪ್ಪು ಎಂದರೆ ಜೂನಿಯರ್ ಎನ್ಟಿಆರ್, ರಾಮ್ ಚರಣ್, ರಾಜಮೌಳಿ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು

ಎನ್‌ಟಿಆರ್, ಚರಣ್ ಕನ್ನಡದಲ್ಲೇ ಡಬ್: 'ಆರ್‌ಆರ್‌ಆರ್‌' ಸಿನಿಮಾ ಬಗ್ಗೆ ದಿನದಿಂದ ದಿನಕ್ಕೇ ಕ್ರೇಜ್ ಹೆಚ್ಚಾಗುತ್ತಿದೆ. ವಿಶೇಷ ಎಂದರೆ ಆರ್ ಆರ್ ಆರ್ ಕನ್ನಡ ಅವತರಣಿಕೆಯಲ್ಲಿ ರಾಮ್ ಚರಣ್ ತೇಜ್ ಹಾಗೂ ಜೂನಿಯರ್ ಎನ್ಟಿಆರ್ ಅವರೇ ಕನ್ನಡ ಭಾಷೆಯಲ್ಲಿ ಡಬ್ ಮಾಡಿರುವುದು. ಹೀಗಾಗಿ ಈ ಬಾರಿ ಕನ್ನಡ ಭಾಷೆಯಲ್ಲೂ ಆರ್ ಆರ್ ಆರ್ ಸಿನಿಮಾ ಸದ್ದು ಮಾಡುವ ನಿರೀಕ್ಷೆ ಇದೆ.

RRR Trailer: ರಾಜಮೌಳಿ ದೃಶ್ಯ ವೈಭವದಲ್ಲಿ ಅಬ್ಬರಿಸಿದ ಜ್ಯೂ.ಎನ್​ಟಿಆರ್-ರಾಮ್​ ಚರಣ್

ಯಾವಾಗ ಕಾರ್ಯಕ್ರಮ: ಇದೇ ಮಾ.19 ಶನಿವಾರ (ನಾಳೆ )ಸಂಜೆ 6 ಗಂಟೆಯಿಂದ 9 ಗಂಟೆಯವರೆಗೂ ಈ ಕಾರ್ಯಕ್ರಮ ನಡೆಯಲಿದೆ. ಸ್ಟಾರ್ ನಟರ  ಮಾತುಗಳ ಜೊತೆಗೆ ಕೀರವಾಣಿಯವರ ತಂಡ ಮನರಂಜನೆಯ ರಸದೌತಣ ನೀಡಲಿದೆ. ಹೀಗಾಗಿ ಅಂದು ನಡೆಯುವ ಕಾರ್ಯಕ್ರಮ ಜಗಮಗಿಸುವುದು ಪಕ್ಕಾ.

ಎಲ್ಲರಿಗೂ ಮುಕ್ತ ಅವಕಾಶ: ಯಾರೂ ಬೇಕಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆದರೆ ಕೆವಿಎನ್ ಪ್ರೊಡಕ್ಷನ್ ವೆಬ್ ಸೈಟ್ ನಲ್ಲಿ ಪಾಸ್ಗಾಗಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ವೇದಿಕೆ ಮುಂಭಾಗದಲ್ಲಿ ವಿಐಪಿಗಳಿಗೆ ಮಾಡಿರುವ ವ್ಯವಸ್ಥೆ ಇರಲಿದ್ದು, ಉಳಿದೆಡೆ ಯಾರೂ ಬೇಕಾದರೂ ಬಂದು ಕಾರ್ಯಕ್ರಮ ವೀಕ್ಷಣೆ ಮಾಡಬಹುದು.

ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ರಾಮ್ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಬಳ್ಳಾಪುರ.

click me!