Bengaluru ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್, ಕನ್ನಡಿಗರು ಓಕೆ! ಹಿಂದಿಗರು ಯಾಕೆ?

Published : Jul 15, 2026, 11:57 AM IST
street vendors

ಸಾರಾಂಶ

ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರವನ್ನು ನಿಯಂತ್ರಿಸಲು ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಈ ಯೋಜನೆಯಡಿ, ಕರ್ನಾಟಕದ ಗುರುತಿನ ಚೀಟಿ ಹೊಂದಿರುವ ಸ್ಥಳೀಯ ಕನ್ನಡಿಗರಿಗೆ ಮಾತ್ರ ಆದ್ಯತೆ ನೀಡಿ, ಹೊರ ರಾಜ್ಯದ ವ್ಯಾಪಾರಿಗಳಿಗೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ. ಅಲ್ಲದೆ, ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗಾಗಿ ಪ್ರತ್ಯೇಕ 'ವೆಂಡಿಂಗ್ ಝೋನ್'ಗಳನ್ನು ಸ್ಥಾಪಿಸಲಾಗುವುದು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಹಾಗೂ ಫುಟ್‌ಪಾತ್‌ಗಳನ್ನು ಪಾದಚಾರಿಗಳ ಸಂಚಾರಕ್ಕೆ ಮುಕ್ತಗೊಳಿಸಲು ಕಾರ್ಯಾಚರಣೆ ಆರಂಭಿಸಿರುವ ನಗರಾಭಿವೃದ್ಧಿ ಇಲಾಖೆ ಹಾಗೂ ಜಿಬಿಎ ಈಗ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣಕ್ಕೆ ಹೈ-ವೋಲ್ಟೇಜ್ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸುತ್ತಿದೆ. ನಗರದ ಫುಟ್‌ಪಾತ್ ವ್ಯಾಪಾರದಲ್ಲಿ ಇನ್ಮುಂದೆ ಸ್ಥಳೀಯ ಕನ್ನಡಿಗರಿಗೆ ಮಾತ್ರ ಮೊದಲ ಆದ್ಯತೆ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಹೊರ ರಾಜ್ಯದ ವ್ಯಾಪಾರಿಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಕನ್ನಡಿಗರು ಓಕೆ, ಹೊರ ರಾಜ್ಯದವರಿಗೆ ಕೊಕ್!

ಬೆಂಗಳೂರಿನ ಬೀದಿ ಬದಿ ವ್ಯಾಪಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನ್ಯ ರಾಜ್ಯಗಳ ವಲಸಿಗರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ. ಸದ್ಯ ನಗರದ ಪಾನಿಪುರಿ, ಚಾಟ್ಸ್, ಕಡಲೆಕಾಯಿ ಸೇರಿದಂತೆ ವಿವಿಧ ಬೀದಿ ಬದಿ ವ್ಯಾಪಾರಗಳಲ್ಲಿ ಬರೋಬ್ಬರಿ ಶೇಕಡಾ 20 ರಷ್ಟು ಜನ ಹೊರರಾಜ್ಯದವರೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕನ್ನಡಿಗರ ಉದ್ಯೋಗಾವಕಾಶ ಹಾಗೂ ಹಿತರಕ್ಷಣೆಯನ್ನು ಕಾಯಲು ಮುಂದಾಗಿರುವ ಸರ್ಕಾರ, ಅನ್ಯ ರಾಜ್ಯದವರಿಗೆ ಫುಟ್‌ಪಾತ್ ವ್ಯಾಪಾರಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಿದೆ.

ವ್ಯಾಪಾರಕ್ಕೆ ಕರ್ನಾಟಕದ ಐಡಿ ಕಾರ್ಡ್ ಕಡ್ಡಾಯ!

ಹೊಸ ನಿಯಮಾವಳಿಗಳ ಪ್ರಕಾರ, ಎಲ್ಲೆಂದರಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿ ವ್ಯಾಪಾರ ಮಾಡುವಂತಿಲ್ಲ. ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ಮಾತ್ರವೇ ಇನ್ಮುಂದೆ ವ್ಯಾಪಾರಕ್ಕೆ ಅವಕಾಶ ಸಿಗಲಿದ್ದು, ಅದಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ನಿಗದಿಪಡಿಸಲು ಚಿಂತಿಸಲಾಗಿದೆ. ವ್ಯಾಪಾರ ಮಾಡಲು ಬಯಸುವವರು ಕಡ್ಡಾಯವಾಗಿ ಕರ್ನಾಟಕದ ವೋಟರ್ ಐಡಿ (ಮತದಾರರ ಗುರುತಿನ ಚೀಟಿ), ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ (ಪಡಿತರ ಚೀಟಿ) ಹೊಂದಿರಬೇಕು. ಈ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಅವರಿಗೆ ಆಡಳಿತ ಮಂಡಳಿಯಿಂದ ಅಧಿಕೃತ ಐಡಿ ಕಾರ್ಡ್ (ಗುರುತಿನ ಚೀಟಿ) ನೀಡಲಾಗುತ್ತದೆ. ಈ ಅಧಿಕೃತ ಐಡಿ ಕಾರ್ಡ್ ಹೊಂದಿರುವ ಸ್ಥಳೀಯ ವ್ಯಾಪಾರಿಗಳಿಗೆ ಮಾತ್ರ ನಿಗದಿತ ಜಾಗದಲ್ಲಿ ವ್ಯಾಪಾರ ಮಾಡಲು ಅನುಮತಿ ಸಿಗಲಿದೆ.

ಫುಟ್‌ಪಾತ್ ತೆರವು ಮತ್ತು ಪರ್ಯಾಯ ವ್ಯವಸ್ಥೆ

ನಗರದಲ್ಲಿ ಪಾದಚಾರಿಗಳಿಗೆ ತೊಂದರೆಯಾಗದಂತೆ ಈಗಾಗಲೇ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಆದರೆ, ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ. ನಗರದಾದ್ಯಂತ ಬೀದಿ ಬದಿ ವ್ಯಾಪಾರಕ್ಕೆಂದೇ ಸೂಕ್ತ ಮತ್ತು ಪ್ರತ್ಯೇಕ ಸ್ಥಳಗಳನ್ನು (Vending Zones) ಗುರುತಿಸಲು ಜಿಬಿಎ ಚಿಂತನೆ ನಡೆಸಿದೆ. ಒಮ್ಮೆ ಸ್ಥಳ ನಿಗದಿಯಾದ ಬಳಿಕ, ಗುರುತಿನ ಚೀಟಿ ಪಡೆದ ವ್ಯಾಪಾರಿಗಳನ್ನು ಅಲ್ಲಿಗೆ ಶಿಫ್ಟ್ ಮಾಡಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಹಾಗೂ ಫುಟ್‌ಪಾತ್ ಒತ್ತುವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ.

ಸರ್ಕಾರದ ಪ್ಲಾನ್‌ಗೆ ವ್ಯಾಪಾರಿಗಳ ಸಂಘಟನೆಗಳ ಸಾಥ್!

ಸ್ಥಳೀಯರಿಗೆ ಆದ್ಯತೆ ನೀಡುವ ಮತ್ತು ವ್ಯವಸ್ಥಿತವಾಗಿ ವ್ಯಾಪಾರ ವಲಯಗಳನ್ನು ನಿರ್ಮಿಸುವ ಸರ್ಕಾರದ ಈ ಮಾಸ್ಟರ್ ಪ್ಲಾನ್‌ಗೆ ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳ ವಿವಿಧ ಸಂಘಟನೆಗಳಿಂದಲೂ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಹೊರ ರಾಜ್ಯದವರ ಅಕ್ರಮ ಒತ್ತುವರಿಯಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿತ್ತು. ಸರ್ಕಾರದ ಈ ಹೊಸ ನೀತಿಯಿಂದಾಗಿ ಕನ್ನಡಿಗರ ಹಿತರಕ್ಷಣೆಯಾಗುವುದರ ಜೊತೆಗೆ ಬೆಂಗಳೂರಿನ ರಸ್ತೆಗಳೂ ಸುಂದರವಾಗಲಿವೆ ಎಂದು ಸಂಘಟನೆಗಳು ಆಶಿಸಿವೆ. ಮುಂಬರುವ ದಿನಗಳಲ್ಲಿ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದ್ದು, ತೀವ್ರ ಕುತೂಹಲ ಮೂಡಿಸಿದೆ.

PREV
Read more Articles on
click me!

Recommended Stories

'No One Does Warmth Like Bangaloreans' – ಬೆಂಗಳೂರಿನ ಆಟೋ ಚಾಲಕನಿಗೆ ಫಿದಾ ಆದ ಅಮೆರಿಕನ್
ಆಂಧ್ರದಲ್ಲಿ 2 ಸಾವು ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆ ಕೊರೋನಾ ಸಕ್ರೀಯ, ಈ ತಿಂಗಳು 32 ಪ್ರಕರಣ ಪತ್ತೆ!