
ಬೆಂಗಳೂರು: ರಾಜ್ಯದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ನಿವಾಸಿಗಳ ಹಿತರಕ್ಷಣೆಗೆ ಮುಂದಾಗಿರುವ ರಾಜ್ಯ ಸರ್ಕಾರ, ದೀರ್ಘಕಾಲದ ಗೊಂದಲ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಹೊಸ ಕಾನೂನು ಜಾರಿಗೆ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲಿಕತ್ವ ಹಾಗೂ ನಿರ್ವಹಣೆ) ವಿಧೇಯಕ 2026’ ರ ಕರಡು ಪ್ರತಿ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಇಂದು ಹೈ-ವೋಲ್ಟೇಜ್ ಸಂವಾದ ಸಭೆಯೊಂದನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ಸಭಾಂಗಣದಲ್ಲಿ ನಡೆಯಲಿರುವ ಈ ವಿಶೇಷ ಸಭೆಯ ನೇತೃತ್ವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಸಚಿವ ಕೃಷ್ಣ ಬೈರೇಗೌಡ ವಹಿಸಲಿದ್ದಾರೆ. ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ನಿವಾಸಿಗಳ ಸಂಘಗಳ (RWA) ಪ್ರತಿನಿಧಿಗಳಿಗೆ ಈ ಸಭೆಯಲ್ಲಿ ಭಾಗವಹಿಸಲು ಮುಕ್ತ ಆಹ್ವಾನ ನೀಡಲಾಗಿದೆ.
ಇದು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆಗೆ ಕಾನೂನು ಚೌಕಟ್ಟನ್ನು ನಿರ್ಮಿಸುವ ಪ್ರಮುಖ ಕಾಯ್ದೆಯಾಗಿದೆ. ಅಪಾರ್ಟ್‌ಮೆಂಟ್‌ಗಳನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲು ಮತ್ತು ಉತ್ತರಾಧಿಕಾರ ಹೊಂದುವುದಕ್ಕೆ ಇದು ಸಹಕಾರಿಯಾಗಲಿದೆ. ಮುಖ್ಯವಾಗಿ, ಈ ಕಾಯ್ದೆಯು ಜಾರಿಗೆ ಬಂದ ಬಳಿಕ ಸಂಘ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಬದಲಾಗಿ, ನಿವಾಸಿಗಳ ಸಂಘಗಳ ಜವಾಬ್ದಾರಿಯನ್ನು ಹೆಚ್ಚಿಸಿ, ಮೇಂಟೆನೆನ್ಸ್ ಹಣದ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಇದು ನೆರವಾಗುತ್ತದೆ.
ವಿವಿಧ ಕಾಯ್ದೆಗಳ ಅಡಿಯಲ್ಲಿ ಅಪಾರ್ಟ್‌ಮೆಂಟ್ ನೋಂದಣಿ ಮಾಡಿಸುವಾಗ ಉಂಟಾಗುತ್ತಿದ್ದ ಗೊಂದಲಗಳಿಗೆ ಅಂತ್ಯ ಹಾಡಿ, ಏಕರೂಪದ ಆಡಳಿತ ವ್ಯವಸ್ಥೆ ತರುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.
ಮಾಲೀಕತ್ವದ ಕಾನೂನು ರಕ್ಷಣೆ: ಫ್ಲ್ಯಾಟ್ ಮಾಲೀಕರಿಗೆ ಜಮೀನು ಹಾಗೂ ಲಿಫ್ಟ್, ಈಜುಕೊಳ, ಗಾರ್ಡನ್‌ನಂತಹ ಸಾಮಾನ್ಯ ಪ್ರದೇಶಗಳ (Common Areas) ಮೇಲೆ ಕಾನೂನುಬದ್ಧ ಅವಿಭಾಜ್ಯ ಮಾಲೀಕತ್ವದ ಹಕ್ಕು ಸಿಗಲಿದೆ.
ಹಣಕಾಸು ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮ: ಬಿಲ್ಡರ್‌ಗಳ ಹಣಕಾಸು ನಿರ್ವಹಣೆಗೆ ಹೊಸ ನಿಯಂತ್ರಣ ವ್ಯವಸ್ಥೆ ತರಲಾಗುತ್ತಿದ್ದು, ನಿವಾಸಿಗಳಿಂದ ಸಂಗ್ರಹಿಸುವ ನಿರ್ವಹಣಾ ವೆಚ್ಚ (Maintenance) ಹಾಗೂ ಮುಂಗಡ ನಿಧಿಯ (Corpus Fund) ಪಾರದರ್ಶಕ ಬಳಕೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ.
ಆಡಳಿತ ಹಸ್ತಾಂತರ ಕಡ್ಡಾಯ: ಅಪಾರ್ಟ್‌ಮೆಂಟ್ ಯೋಜನೆ ಪೂರ್ಣಗೊಂಡ ತಕ್ಷಣವೇ ಅದರ ಸಂಪೂರ್ಣ ಆಡಳಿತ, ನಾಗರಿಕ ಸೌಲಭ್ಯಗಳು, ಅಧಿಕೃತ ದಾಖಲೆಗಳು ಮತ್ತು ನಕ್ಷೆಗಳನ್ನು (Maps) ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಹಸ್ತಾಂತರಿಸುವುದನ್ನು ಬಿಲ್ಡರ್‌ಗಳಿಗೆ ಕಡ್ಡಾಯಗೊಳಿಸಲಾಗುವುದು.
ಪ್ರತ್ಯೇಕ ಕಾನೂನು ವೇದಿಕೆ: ಬಿಲ್ಡರ್–ಮಾಲೀಕರು ಹಾಗೂ ಆಡಳಿತ ಮಂಡಳಿ ನಡುವೆ ಉಂಟಾಗುವ ಪಾರ್ಕಿಂಗ್, ಆಸ್ತಿ ಮತ್ತು ಮೂಲಸೌಕರ್ಯ ವಿವಾದಗಳ ಶೀಘ್ರ ಇತ್ಯರ್ಥಕ್ಕಾಗಿ ಪ್ರತ್ಯೇಕ ಕಾನೂನು ವೇದಿಕೆ (Grievance Cell) ಸ್ಥಾಪನೆಗೆ ಕಾನೂನು ಬಲ ನೀಡಲಾಗುತ್ತಿದೆ.
ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಚಾರದಲ್ಲಿ ಬಿಲ್ಡರ್ ಹಾಗೂ ನಿವಾಸಿಗಳ ನಡುವೆ ನಿರಂತರವಾಗಿ ವಿವಾದಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ನಿವಾಸಿಗಳು ಹೊಸ ಕಾಯ್ದೆಗಾಗಿ ತೀವ್ರ ಒತ್ತಾಯ ಹೇರಿದ್ದರು. ಇಂದು ನಡೆಯಲಿರುವ ಸಂವಾದದಲ್ಲಿ ನಿವಾಸಿಗಳ ಇನ್ನುಳಿದ ತೊಂದರೆಗಳನ್ನು ಸಿಎಂ ಖುದ್ದಾಗಿ ಆಲಿಸಲಿದ್ದು, ಸಾರ್ವಜನಿಕರ ಉಪಯುಕ್ತ ಸಲಹೆಗಳನ್ನು ಪಡೆದ ಬಳಿಕವಷ್ಟೇ ಈ ಹೊಸ ಅಪಾರ್ಟ್‌ಮೆಂಟ್ ಕಾಯ್ದೆಯನ್ನು ಅಂತಿಮಗೊಳಿಸಿ ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.