ಬಸವ ಪಟ ಆರೋಪಣದೊಂದಿಗೆ ಗವಿಮಠ ಜಾತ್ರೆ ಪ್ರಾರಂಭ| 20 ದಿನಗಳ ಕಾಲ ನಿರಂತವಾಗಿ ನಡೆಯುವ ಉತ್ತರ ಕರ್ನಾಟಕದ ಜಾತ್ರೆ|ಗವಿಮಠ ಆವರಣದಲ್ಲಿನ ಕೆರೆಯಲ್ಲಿ ಇಂದು ಸಂಜೆ 5 ಗಂಟೆಗೆ ತೆಪೋತ್ಸವ ಕಾರ್ಯಕ್ರಮ|
ಕೊಪ್ಪಳ(ಜ.09): ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಬುಧವಾರ ಸಂಜೆ ಬಸವಪಟ ಆರೋಹಣ ಮಾಡುವ ಮೂಲ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ಜಾತ್ರೆ ಸುಮಾರು 20 ದಿನಗಳ ಕಾಲ ನಿರಂತವಾಗಿ ನಡೆಯುವ ಉತ್ತರ ಕರ್ನಾಟಕದ ಜಾತ್ರೆ ಇದಾಗಿದ್ದು, ಪ್ರತಿ ವರ್ಷಕ್ಕಿಂತಲೂ ಈ ವರ್ಷ ಮತ್ತಷ್ಟು ರಂಗು ಪಡೆದುಕೊಂಡಿದೆ.
ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರ ವಿರುವ ಬಸವಪಟಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿದರು. ಗವಿಮಠದ ಕತುೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಬಸವ ಪಟವನ್ನು ಕಟ್ಟಲಾಯಿತು. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದ್ದು, ಅದರಂತೆ ಬಸವಪಟ ಆರೋಹಣ ಮಾಡಲಾಯಿತು.'
ಪಂಚ ಕಳಸೋತ್ಸವ:
ಗವಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಬಸವ ಪಟ ಆರೋಹಣ ಧಾರ್ಮಿಕ ಕಾರ್ಯಕ್ರಮದ ನಂತರ ಪಂಚ ಕಳಸೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಗವಿಮಠದ ಕತುೃರ್ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿದ್ದು, ರಥೋತ್ಸವದ ದಿನಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿ ಆಯಾ ಓಣಿಯ ದೈವದವರು ಕೊಂಡೊಯ್ಯುದು ಅವುಗಳನ್ನು ಸ್ವಚ್ಛಗೊಳಿಸಿ, ಶೃಂಗಾರಗೊಳಿಸಿ ಗವಿಮಠಕ್ಕೆ ತರುವುದು ಸಂಪ್ರದಾಯವಾಗಿದೆ.
ಇಂದು ತೆಪ್ಪೋತ್ಸವ ಕಾರ್ಯಕ್ರಮ:
ಗವಿಮಠ ಆವರಣದಲ್ಲಿನ ಕೆರೆಯಲ್ಲಿ ಜ. 9ರಂದು ಸಂಜೆ 5 ಗಂಟೆಗೆ ತೆಪೋತ್ಸವ ಕಾರ್ಯಕ್ರಮ ಜರುಗಲಿದೆ. ತೆಪ್ಪೋತ್ಸವವಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿವಿಧ ಜಾನಪದ ಕಲಾತಂಡಗಳು ಜಾನಪದವನ್ನು ಹಾಕು ಗವಿಸಿದ್ಧೇಶ್ವರ ಭಕ್ತಿಗೀತೆಯನ್ನು ಹಾಡುತ್ತಿರುವಾಗಲೇ ನಡೆಯುತ್ತದೆ.
ಕ್ಯೂಆರ್‌ಕೋಡ್‌ನಲ್ಲೇ ಅಜ್ಜನ ಜಾತ್ರೆ ನೋಡಿ
ಗವಿಸಿದ್ಧೇಶ್ವರ ಜಾತ್ರಾಮಹೋತ್ಸವವು ಪ್ರತಿ ವರ್ಷವೂ ಹೈಟೆಕ್ ಟಚ್ ಪಡೆಯುತ್ತಿದ್ದು, ಈ ಬಾರಿ ಕ್ಯೂಆರ್‌ಕೋಡ್ ಅಳವಡಿಸಲಾಗಿದೆ. ಪ್ರತಿಯೊಬ್ಬರಿಗೂ ಈಗ ಅಹ್ವಾನ ಪತ್ರವನ್ನು ತಲುಪಿಸಲಾಗುತ್ತದೆ. ಈ ವರ್ಷ ಕ್ಯೂಆರ್‌ಕೋಡ್ ಅಭಿವೃದ್ಧಿ ಪಡಿಸಿದ್ದು, ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದಾಕ್ಷಣ ಜಾತ್ರೆಯ ಆಮಂತ್ರಣ, ಅಭಿಷೇಕ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮಹಾ ರಥೋತ್ಸವದ ಲೈವ್ ದರ್ಶನ ದೊರೆಯುತ್ತದೆ. ಈ ವರ್ಷದ ಜಾತ್ರೆಯಲ್ಲಿ ಟ್ರೆಂಡಿಂಗ್ ಟೆಕ್ನಾಲಜಿಯಾದ ಕ್ಯೂಆರ್ ಕೋಡನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಜಾತ್ರೆಯ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಜ. 12ರಂದು ಸಂಜೆ ವೀಕ್ಷಿಸಬಹುದು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅತ್ಯಾಧುನಿಕ ತಂತ್ರಜ್ಞಾನ ಇದಾಗಿದ್ದು, ಅಜ್ಜನ ಜಾತ್ರೆಯು ಅತ್ಯಂತ ವೈಶಿಷ್ಟತೆಯನ್ನೊಳಗೊಂಡಿದೆ. ಗವಿಮಠದ ಅಧೀಕೃತ ಫೇಸ್‌ಬುಕ್ ಪುಟ ಲೈಕ್ ಮಾಡಲು ಹಾಗೂ ಕತುೃರ್ ಗದ್ದುಗೆಗೆ ರುದ್ರಾಭಿಷೇಕ ಮಾಡಿಸಲು ಆನ್‌ಲೈನ್ ಪಾವತಿ ಮಾಡಬಹುದು. ಜಾತ್ರಾ ಮಹೋತ್ಸವದ ಮಾಹಿತಿಯನ್ನು ಭಕ್ತರು ತಮ್ಮ ಮೊಬೈಲ್ ಮೂಲಕ ಸಕಾಲಕ್ಕೆ ತಿಳಿದುಕೊಳ್ಳಬಹುದು. ಇದರಿಂದ ವೆಬ್ ಪುಟಗಳ ಹುಡುಕಾಟದ ತೊಂದರೆ ತಪ್ಪಿ ಕ್ಯೂಆರ್‌ಕೋಡ್‌ನಲ್ಲಿ ಸಮಗ್ರ ಮಾಹಿತಿಯೂ ಭಕ್ತರಿಗೆ ದರ್ಶನವಾಗಲಿದೆ.