Garib Kalyan Yojana : ಕೇಂದ್ರದ 5 ಕೇಜಿ ಉಚಿತ ಅಕ್ಕಿ ಈ ತಿಂಗಳೇ ಕೊನೆ!

By Kannadaprabha NewsFirst Published Sep 5, 2022, 11:32 AM IST
Highlights

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯವಾಗಲಿದೆ. ಹೀಗಾಗಿ ಅಕ್ಟೋಬರ್‌ನಿಂದ ಪಡಿತರ ಚೀಟಿದಾರರಿಗೆ ರಾಜ್ಯದ ಪಾಲಿನ ತಲಾ 5 ಕೆ.ಜಿ. ಅಕ್ಕಿ ಮಾತ್ರ ಸಿಗಲಿದೆ.

ಸಂಪತ್‌ ತರೀಕೆರೆ

ಬೆಂಗಳೂರು (ಸೆ.5) :ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯವಾಗಲಿದೆ. ಹೀಗಾಗಿ ಅಕ್ಟೋಬರ್‌ನಿಂದ ಪಡಿತರ ಚೀಟಿದಾರರಿಗೆ ರಾಜ್ಯದ ಪಾಲಿನ ತಲಾ 5 ಕೆ.ಜಿ. ಅಕ್ಕಿ ಮಾತ್ರ ಸಿಗಲಿದೆ. ಕೊರೋನಾ ಮೊದಲ ಅಲೆ ಕಾಣಿಸಿಕೊಂಡ 2020ರಿಂದ ಪಡಿತರ ಚೀಟಿದಾರರಿಗೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಪ್ರತಿ ಯುನಿಟ್‌ಗೆ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪಡಿತರ ಆಹಾರ ಧಾನ್ಯ ಸೇರಿದಂತೆ ಕೇಂದ್ರದ ಪಾಲಿನ ಅಕ್ಕಿ ಅಥವಾ ಗೋಧಿ ಸೇರಿ ಒಟ್ಟು ತಲಾ 10 ಕೆಜಿ (8 ಕೆಜಿ ಅಕ್ಕಿ, 2 ಕೆಜಿ ರಾಗಿ ಅಥವಾ ಗೋಧಿ) ಆಹಾರ ಧಾನ್ಯವನ್ನು ಫಲಾನುಭವಿಗಳು ಸದ್ಯ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 10,91,508 ಅಂತ್ಯೋದಯ(Antyodaya) ಕಾರ್ಡುಗಳಿದ್ದು, 44,83,745 ಮಂದಿ ಫಲಾನುಭವಿಗಳಿದ್ದಾರೆ. ಹಾಗೆಯೇ 1,15,93,227 ಬಿಪಿಎಲ್‌ ಕಾರ್ಡು(BPL Card)ಗಳಿದ್ದು, 3,87,79,975 ಮಂದಿ ಫಲಾನುಭವಿಗಳಿದ್ದಾರೆ. ಹೀಗೆ ಒಟ್ಟು 4,32,63,720 ಮಂದಿ ಫಲಾನುಭವಿಗಳು ಗರೀಬ್‌ ಕಲ್ಯಾಣ ಯೋಜನೆ(Pradhan Mantri Garib Kalyan Yojana)ಯ ಸೌಲಭ್ಯ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಪ್ರತಿ ತಿಂಗಳು ಪ್ರತಿ ಯೂನಿಟ್‌ಗೆ ತಲಾ 5 ಕೆಜಿಯಂತೆ ಒಟ್ಟು 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಹಂಚಿಕೆ ಮಾಡುತ್ತಿದೆ. ಹಾಗೆಯೇ ಕೇಂದ್ರ ಸರ್ಕಾರದಿಂದಲೂ ಗರೀಬ್‌ ಕಲ್ಯಾಣ ಯೋಜನೆಯಡಿ 2.17 ಲಕ್ಷ ಮೆಟ್ರಿಕ್‌ ಅಕ್ಕಿ ರಾಜ್ಯಕ್ಕೆ ಸರಬರಾಜಾಗುತ್ತಿದೆ.

PM Garib Kalyan ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಗರೀಬ್ ಕಲ್ಯಾಣ ಯೋಜನೆ ಮತ್ತೆ 6 ತಿಂಗಳಿಗೆ ವಿಸ್ತರಣೆ!

ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿರುವಂತೆ ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಅಕ್ಟೋಬರ್‌ನಿಂದ ಕೇಂದ್ರದ ಉಚಿತ ಅಕ್ಕಿ ಯೋಜನೆಯ ಲಾಭ ಸಿಗುವುದಿಲ್ಲ. ಹೀಗಾಗಿ ಇನ್ನು ಮುಂದೆæ ಪ್ರತಿ ಯೂನಿಟ್‌ಗೆ ಕೇವಲ 5 ಕೆಜಿ ಅಕ್ಕಿ ಮಾತ್ರ ಸಿಗಲಿದೆ.

ಯೋಜನೆ ಮುಂದುವರೆಸಲು ಆಗ್ರಹ: ಕೇಂದ್ರ ಸರ್ಕಾರ(Central Govt) ಕೊರೋನಾ(Corona) ಹಿನ್ನೆಲೆಯಲ್ಲಿ ಉಚಿತ ಅಕ್ಕಿ ಕೊಡುತ್ತಿದ್ದರಿಂದ ಬಡ ಕುಟುಂಬದವರಿಗೆ ಅನುಕೂಲವಾಗಿತ್ತು. ನಮ್ಮ ಕುಟುಂಬದಲ್ಲಿ ಮೂವರು ಸದಸ್ಯರಿದ್ದು, ಗರೀಬ್‌ ಕಲ್ಯಾಣ ಕಲ್ಯಾಣ ಯೋಜನೆಯಡಿ ಹೆಚ್ಚುವರಿಯಾಗಿ ತಿಂಗಳಿಗೆ 15 ಕೆ.ಜಿ. ಅಕ್ಕಿ ಸಿಗುತ್ತಿತ್ತು. ರಾಜ್ಯ ಮತ್ತು ಕೇಂದ್ರದಿಂದ ಒಟ್ಟಾರೆ ತಿಂಗಳಿಗೆ 24 ಕೆ.ಜಿ. ಅಕ್ಕಿ, 6 ಕೆ.ಜಿ. ರಾಗಿ ಸಿಗುತ್ತಿತ್ತು. ದಿನಗೂಲಿ ಕಾರ್ಮಿಕರಾಗಿದ್ದು ನಮಗೆ ತಿಂಗಳಿಡೀ ಕೆಲಸ ಇರುವುದಿಲ್ಲ. ಬರುವಂತಹ ದುಡ್ಡಿನಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂದಿನ ತಿಂಗಳಿನಿಂದ ಕೇಂದ್ರ ಸರ್ಕಾರದ ಅಕ್ಕಿಯೂ ಸಿಗುವುದಿಲ್ಲ ಎಂದು ಸೊಸೈಟಿ ಮಾಲೀಕರು ಹೇಳುತ್ತಿದ್ದಾರೆ. ಪ್ರಧಾನಮಂತ್ರಿಗಳು ಉಚಿತ ಅಕ್ಕಿ ಕೊಡುವುದು ಮುಂದುವರೆಸಿದರೆ ಬಡವರ ಬದುಕು ಹೇಗೋ ನಡೆಯುತ್ತದೆ ಎನ್ನುತ್ತಾರೆ ಬಿಪಿಎಲ್‌ ಪಡಿತರ ಚೀಟಿದಾರರಾಗಿರುವ ಲಗ್ಗೆರೆ ನಿವಾಸಿ ಕರುಣಾಕರ ನಾಯ್ಕ.

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ 10 ಕೆ.ಜಿ. ಉಚಿತ ಅಕ್ಕಿ: ಸಿದ್ದರಾಮಯ್ಯ

ಗರೀಬ್‌ ಕಲ್ಯಾಣ ಯೋಜನೆ ಸೆ.30ಕ್ಕೆ ಅಂತ್ಯಗೊಳ್ಳುತ್ತಿದೆ. ಈ ಯೋಜನೆಯನ್ನು ಮುಂದುವರೆಸುವಂತೆ ಮನವಿ ಮಾಡಲಾಗಿದೆ. ಪಡಿತರ ಆಹಾರ ಧಾನ್ಯ ಹಂಚಿಕೆ ಮಾಡಬೇಕು ಎಂದು ಮತ್ತೊಮ್ಮೆ ಕೋರುತ್ತೇವೆ.

- ಟಿ.ಕೃಷ್ಣಪ್ಪ, ಅಧ್ಯಕ್ಷ, ಪಡಿತರ ವಿತರಕರ ಸಂಘ

click me!