* ಕಸ ಸಂಗ್ರಹ ಸ್ಥಗಿತ: ತ್ಯಾಜ್ಯ ಸಮಸ್ಯೆ ಉಲ್ಬಣ?
* 248 ಕೋಟಿ ಬಿಲ್ ಪಾವತಿಸದ ಬಿಬಿಎಂಪಿ
* ಕಸ ಸಂಗ್ರಹಿಸದೆ ಸಾಂಕೇತಿಕ ಧರಣಿ
ಬೆಂಗಳೂರು(ಫೆ.19): ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಕಸ ವಿಲೆ ಗುತ್ತಿಗೆದಾರರು ಶುಕ್ರವಾರದಿಂದ ನಗರದಲ್ಲಿ ಕಸ ಸಂಗ್ರಹಿಸದೇ ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ತ್ಯಾಜ್ಯ, ದುರ್ನಾತ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ.
ನಿತ್ಯ ಅಂದಾಜು 4500 ಟನ್ ತ್ಯಾಜ್ಯ ವಿಲೇವಾರಿ(Waste Disposal) ಮಾಡುವ ಗುತ್ತಿಗೆದಾರರು ಆರಂಭಿಸಿರುವ ಪ್ರತಿಭಟನೆಯಿಂದಾಗಿ(Protest) ವಸತಿ ಪ್ರದೇಶ ಸೇರಿದಂತೆ ಪ್ರಮುಖ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳಲ್ಲಿ ಕಸ ಸಂಗ್ರಹವಾಗದೇ ಗಬ್ಬೆದ್ದು ನಾರುವ ಆತಂಕ ಎದುರಾಗಿದೆ.
BBMP: ಬೆಂಗ್ಳೂರಿಗರೇ ಗಮನಿಸಿ: ನಾಳೆಯಿಂದ ಕಸ ವಿಲೇವಾರಿ ಸ್ಥಗಿತ..?
ಪಾಲಿಕೆ ಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿದ ಕಸವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ಗುತ್ತಿಗೆದಾರರಿಗೆ ಬಿಬಿಎಂಪಿಯು(BBMP) 248 ಕೋಟಿ ಬಾಕಿ ಉಳಿಸಿಕೊಂಡಿದೆ. ಸರ್ಕಾರ(Government of Karnataka) ಬಾಕಿ ಬಿಲ್ ಪಾವತಿಗೆ ಸೂಕ್ತ ನಿಯಮ ರೂಪಿಸುವವರೆಗೂ ಗುತ್ತಿಗೆದಾರರು(Contractors) ಕಸ ಸಂಗ್ರಹಿಸದಿರಲು ನಿರ್ಧರಿಸಿದ್ದಾರೆ.
ಶುಕ್ರವಾರ ಬಿಬಿಎಂಪಿ ಕಸದ ಗುತ್ತಿಗೆದಾರರ ಸಂಘ ಪಾಲಿಕೆ ಕೇಂದ್ರ ಕಚೇರಿ ಮುಂದೆ ನಡೆಸಿದ ಸಾಂಕೇತಿಕ ಧರಣಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಮಾತನಾಡಿ, ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರು ಮನವಿಗೆ ಸ್ಪಂದಿಸುತ್ತಿಲ್ಲ. ಆದರೆ ದಕ್ಷಿಣ ವಲಯದ ಗುತ್ತಿಗೆದಾರರಿಗೆ ಮಾತ್ರ ಸಕಾಲಕ್ಕೆ ಹಣ(Money) ಪಾವತಿಸುತ್ತಿದ್ದಾರೆ. ಆ ವಲಯದ ಉಸ್ತುವಾರಿ ರೀತಿ ವರ್ತಿಸುವ ಮೂಲಕ ತಾರತಮ್ಯ ಎಸಗಿದ್ದಾರೆ. ಸಭೆಯಲ್ಲಿ ಬಾಕಿ ಬಿಲ್ ಪಾವತಿಸುವುದಾಗಿ ಅಧಿಕಾರಿಗಳ ಮುಂದೆ ಒಪ್ಪಿಗೆ ಸೂಚಿಸುವ ಆಯುಕ್ತೆ, ಆಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಅಲ್ಲದೇ, ಡಾಟಾ ಎಂಟ್ರಿ ಉದ್ಯೋಗಿಗಳಿಗೆ, ಅಂಗವಿಕಲರು ಸೇರಿದಂತೆ ಹಲವರಿಗೆ ವೇತನ(Salary) ನೀಡಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ವೇತನ ಕುರಿತು ಪ್ರಶ್ನಿಸಿದರೆ, ಲಿಪ್‌ಸ್ಟಿಕ್ ಹಾಕಿಕೊಂಡು ಸ್ಕೂಟಿಯಲ್ಲಿ ಬರುವ ನಿಮಗೇಕೆ ಸಂಬಳ ನೀಡಬೇಕು ಎಂದು ಆಯುಕ್ತೆ ತುಳಸಿ ಮದ್ದಿನೇನಿ ನಿಂದಿಸುತ್ತಾರೆ ಎಂದು ಆಪಾದಿಸಿದರು.
ಅಧಿಕಾರಿಗಳ ನಡೆಯಿಂದ ಬೇಸತ್ತು ಕಳೆದ ಮೂರು ಬಾರಿ ಪ್ರತಿಭಟಿಸಲು ನಿರ್ಧರಿಸಿದ್ದಾಗ ಮುಖ್ಯ ಆಯುಕ್ತರು, ಅಧಿಕಾರಿಗಳು ಮನವೊಲಿಸಿ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಸಿಲ್ಲ. ಪ್ರತಿ ತಿಂಗಳ 18ರೊಳಗೆ ಭವಿಷ್ಯ ನಿಧಿಗೆ ಹಣ ಕಟ್ಟಬೇಕು. ಇಲ್ಲವಾದರೆ, ಬಡ್ಡಿ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಬಡ್ಡಿ ಜತೆಗೆ ದಂಡವನ್ನೂ ತೆತ್ತು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದೇವೆ ಎಂದು ವಿವರಿಸಿದರು.
12km ರಸ್ತೆಗೆ Puneeth Rajkumar ಹೆಸರಿಡಲು ಬಿಬಿಎಂಪಿ ಅನುಮೋದನೆ!
ಸದ್ಯ ಬಾಕಿ ಇರುವ ಏಳು ತಿಂಗಳ .248 ಕೋಟಿ ಬಿಲ್ ಪಾವತಿಗೆ ಸರ್ಕಾರದ ಅಧಿಕಾರಿಗಳು ಸೂಕ್ತ ನಿಯಮ ಪಾಲಿಸುವವರೆಗೂ ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸದಿರಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಗೆ ಬೆಂಬಲಿಸಿದ್ದ ಪಾಲಿಕೆ ಐಟಿ ಮತ್ತು ಡಿಇಒ ನೌಕರರ ಸಂಘ, ತೋಟಗಾರಿಕಾ ಗುತ್ತಿಗೆದಾರರ ಸಂಘ, ಪ್ರಜಾ ವಿಮೋಚನಾ ಸಮಿತಿ ಸೇರಿದಂತೆ ಎಂಟು ವಿವಿಧ ಸಂಘಟನೆಗಳ ಮುಖಂಡರು, ಗುತ್ತಿಗೆದಾರರು ಭಾಗವಹಿಸಿದ್ದರು.
ಕಸ ಸಂಗ್ರಹಿಸುವ ಗುತ್ತಿಗೆದಾರರ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದೇವೆ. 2021ರಲ್ಲಿ ಸೆಪ್ಟೆಂಬರ್ 10ರವರೆಗೆ ಬಿಲ್ ಪಾವತಿಸಿದ್ದು, ಈಗ ಜನವರಿ ತಿಂಗಳ ಬಿಲ್ ಪಾವತಿಗೆ ಕ್ರಮ ವಹಿಸಲಿದ್ದೇವೆ. ಜನಸಾಮಾನ್ಯರಿಗೆ ಸಮಸ್ಯೆ ಆಗದಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಬಿಬಿಎಂಪಿ ಕಸದ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ಗುತ್ತಿಗೆದಾರರು, ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.