ವಿಜಯಪುರ: ಲೋಕಸಭಾ ಚುನಾವಣೆ ಹೊತ್ತಲ್ಲೇ ಗಾಣಿಗ ಸಮಾಜದಿಂದ ಶಕ್ತಿ ಪ್ರದರ್ಶನ..!

By Girish Goudar  |  First Published Feb 24, 2024, 8:10 PM IST

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಗಾಣಿಗ ಸಮುದಾಯ ಸಮಾವೇಶ ನಡೆಸುವ ಮೂಲಕ ಶಕ್ತಿಪ್ರದರ್ಶನ ನಡೆಸಿದೆ. ಈ ವೇಳೆ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆಯು ಒತ್ತಾಯ ಕೇಳಿ ಬಂದಿದೆ.


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಫೆ.24): ಚುನಾವಣೆ ಸಮೀಪವಾಗ್ತಿದ್ದಂಗೆ ಜಾತಿ ಸಮಾವೇಶಗಳು ನಡೆಯೋದು ಕಾಮನ್.‌ ತಮ್ಮ ಸಮುದಾಯದ ಜನರನ್ನ ಒಗ್ಗೂಡಿಸಿ ಜನಪ್ರತಿನಿಧಿಗಳ ಎದುರು ಬೇಡಿಕೆಗಳನ್ನ ಮುಂದಿಡುವ ಮೂಲಕ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನ ಜಾತಿ ಸಮಾವೇಶಗಳು ಮಾಡುತ್ವೆ. ಹೀಗೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಾತಿ ಸಮಾವೇಶಗಳು ಶುರುವಾಗಿವೆ.‌ ಈ ನಡುವೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಗಾಣಿಗ ಸಮುದಾಯ ಸಮಾವೇಶ ನಡೆಸುವ ಮೂಲಕ ಶಕ್ತಿಪ್ರದರ್ಶನ ನಡೆಸಿದೆ. ಈ ವೇಳೆ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆಯು ಒತ್ತಾಯ ಕೇಳಿ ಬಂದಿದೆ.

Tap to resize

Latest Videos

ಗಾಣಿಗ ಸಮುದಾಯದ ಶಕ್ತಿ ಪ್ರದರ್ಶನ..!

ಲೋಕಸಭಾ ಚುನಾವಣೆ ಆಗಮಿಸುತ್ತಿದ್ದ ಲಿಂಗಾಯತ ಗಾಣಿಗ ಸಮುದಾಯದ ಶಕ್ತಿ ಪ್ರದರ್ಶನ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ತಾಲೂಕಾ ಕ್ರೀಡಾಂಗಣದ ಬಳಿಕ ಗಾಣಿಗ ಸಮುದಾಯದಕ್ಕೆ ಸೇರಿದ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. ಗಾಣಿಗ ಸಮುದಾಯದ ಜಗದ್ಗುರು ಡಾ. ಜಯಬಸವಕುಮಾರ ಸ್ವಾಮೀಜಿ ಸಮಾವೇಶದ ಸಾನಿದ್ಯವಹಿಸಿದ್ದರು. ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ‌ ಸವದಿ ಸಮಾವೇಶದ ಅಧ್ಯಕ್ಷತೆವಹಿಸಿದ್ದರು. ಸಚಿವ ಎಂ ಬಿ ಪಾಟೀಲ್, ಇಂಡಿ ಶಾಸಕ ಯಶವಂತರಾಯಗೌಡ ಭಾಗಿಯಾಗಿದ್ದರು. ಸಮಾವೇಶದಲ್ಲಿ‌ ಗಾಣಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ತಮ್ಮ ಶಕ್ತಿಪ್ರದರ್ಶನ ನಡೆಸಿದ್ರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲ ಬೇಕಿದ್ದರೇ ಸಮಾಜಕ್ಕೆ ಈ ವರೆಗೆ ಆಗಿರುವ ಅನ್ಯಾಯವನ್ನ ಸರಿಪಡೆಸಬೇಕು ಎಂದು ಸಮುದಾಯದ ಮುಖಂಡರು ಜನಪ್ರತಿನಿಧಿಗಳ ಎದುರು ಮನವಿಪೂರ್ವಕ ಆಗ್ರಹ ಮುಂದಿಟ್ಟರು..

ಸಂಸದ ಅನಂತಕುಮಾರ್ ಹೆಗ್ಡೆನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: ಸಚಿವ ಎಂಬಿ ಪಾಟೀಲ್ ವಾಗ್ದಾಳಿ

ಗಾಣಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ‌ಕ್ಕೆ ಬೇಡಿಕೆ..!

ಸ್ವಾತಂತ್ರ್ಯ ಸಿಕ್ಕ ನಂತರದಿಂದಲು ಕಾಂಗ್ರೆಸ್ ರಾಜ್ಯದಲ್ಲಿ ಗಾಣಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ ಎನ್ನುವ ವಿಚಾರ ಸಮಾವೇಶದ ವೇದಿಕೆಯಲ್ಲಿ ಚರ್ಚೆಗೆ ಬಂತು. ರಾಜ್ಯದಲ್ಲಿ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ, ಚಿತ್ರದುರ್ಗ ಶಾಸಕ ಕೆ.ಸಿ ವಿರೇಂದ್ರ ಪಪ್ಪಿ, ಭದ್ರಾವತಿ ನಗರ ಶಾಸಕ ಬಿ‌.ಕೆ‌ ಸಂಗಮೇಶ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಿದ್ದಾರೆ.‌ ಈ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡುವ ಆಗ್ರಹ ಸಮಾವೇಶದಲ್ಲಿ ಕೇಳಿ‌ ಬಂತು. ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಲೋಣಿ ವೇದಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ನಾಯಕರ ಗಮನ ಸೆಳೆದರು.‌ ಸ್ವಾತಂತ್ರ್ಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ್ದಲ್ಲಿದ್ದಾಗ ಒಮ್ಮೆಯು ಲಿಂಗಾಯತ ಗಾಣಿಗ ಸಮುದಾಯದ ಶಾಸಕರನ್ನ ಸಚಿವರನ್ನಾಗಿ ಮಾಡಿಯೇ ಎನ್ನುವ ಮೂಲಕ ಸಾಫ್ಟ್ ಆಗಿಯೇ ಗಾಣಿಗ ಸಮುದಾಯಕ್ಕೆ ಆದ ಅನ್ಯಾಯವನ್ನ ತೆರೆದಿಡುವ ಪ್ರಯತ್ನ ಮಾಡಿದ್ರು. ತಮ್ಮ ಸಮಾಜಕ್ಕೆ ಇನ್ನು ಮುಂದೆ ಕಾಂಗ್ರೆಸ್ ಪ್ರಾತಿನಿಧ್ಯ ನೀಡಬೇಕು.‌ ಗಾಣಿಗ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಅನ್ಯಾಯ ಸರಿಪಡಿಸಬೇಕು ಎಂದರು. 

ಗಾಣಿಗ ಸಮಾಜ ಅಭಿವೃದ್ಧಿ ನಿಗಮಕ್ಕೆ ಬೇಡಿಕೆ..

ಲಿಂಗಾಯತ ಗಾಣಿಗ ಸಮುದಾಯ ಹಲವು ಸಂಕಷ್ಟಗಳನ್ನ ಅನುಭವಿಸುತ್ತಿದ್ದು, ಹೀಗಾಗಿ ಗಾಣಿಗ ಸಮಾಜ ಅಭಿವೃದ್ಧಿಗಾಗಿ ಗಾಣಿಗ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎನ್ನುವ ಆಗ್ರಹ ವ್ಯಕ್ತವಾಯಿತು‌. ಪ್ರತ್ಯೇಕ ನಿಗಮ ಸ್ಥಾಪಿಸುವ ಮೂಲಕ ಗಾಣಿಗ ಸಮುದಾಯಕ್ಕೆ ಸೌಲಭ್ಯಗಳ ಒದಗಿಸಬೇಕು. ಹಿಂದುಳಿದ ಸಮಾಜವನ್ನ ಅಭಿವೃದ್ಧಿ ಪಡೆಸಬೇಕೆನ್ನುವ ಅಭಿಪ್ರಾಯಗಳು ವ್ಯಕ್ತವಾದವು. 

ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಅವಾಚ್ಯ ಪದ ಬಳಕೆ: 'ದೀಪ ಆರೋ ಮುಂಚೆ ಹೆಚ್ಚು ಉರಿಯುತ್ತೆ' ಎಂದ ಶಾಸಕ ಲಕ್ಷ್ಮಣ್

ವಿ.ವಿಗಳಲ್ಲಿ ಗಾಣಿಗ ಸಮಾಜದ ವಿ.ಸಿ ನೇಮಕಕ್ಕೆ ಆಗ್ರಹ..!

ಇದಷ್ಟೇ ಅಲ್ಲದೆ, ಸಮಾವೇಶದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವಿ.ಸಿ ಹುದ್ದೆಗೆ ಗಾಣಿಗರ ನೇಮಕಕ್ಕು ಒತ್ತಾಯ ಕೇಳಿ ಬಂತು. ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿರುವ ವೈಸ್  ಚಾನ್ಸಲರ್ ಹುದ್ದೆಗಳಿಗೆ ಗಣಿಗ ಸಮುದಾಯಕ್ಕೆ ಆದ್ಯತೆ ನೀಡಬೇಕು. ಆದಷ್ಟು ಬೇಗನೇ ಗಾಣಿಗ ವಿ‌.ಸಿಗಳ ನೇಮಕ ಮಾಡುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.

ಸಿದ್ದೇಶ್ವರ ಸ್ವಾಮೀಜಿ ಸಭಾಭವನ ಭೂಮಿ ಪೂಜೆ..!

ಗಾಣಿಗ ಸಮಾವೇಶದ ಜೊತೆ ಜೊತೆಗೆ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಸಭಾ ಭವನ ನಿರ್ಮಾಣಕ್ಕೆ‌ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಇಂಡಿ ಶಾಸಕ ಯಶವಂತರಾಯಗೌಡರ 5 ಕೋಟಿ ಅನುದಾನ ಮೀಸಲಿಡಲಾಗಿದ್ದು, ಈಗಾಗಲೇ 2 ಕೋಟಿ ಬಿಡುಗಡೆಯಾಗಿದೆ. ಸಭಾ ಭವನ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಉಳಿದ ಅನುದಾನವು ಬರುವ ಮೂರ್ನಾಲ್ಕು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು. ಈ ವೇಳೆ ಯಶವಂತರಾಯಗೌಡರಂತೆ ಉಳಿದ ಶಾಸಕರು ಗಾಣಿಗ ಸಮುದಾಯಕ್ಕೆ ಅನುದಾನ ನೀಡಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸಮಾಜದ ಮುಖಂಡರು ಬೇಡಿಕೆ ಇಟ್ಟರು.

click me!