
ಕೊಪ್ಪಳ (ಏ.23): ಜಿಲ್ಲೆಯ ಗಂಗಾವತಿ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ ಒಟ್ಟು 12 ಆರೋಪಿಗಳ ಪೈಕಿ ಆರು ಮಂದಿಯನ್ನು ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ಆರು ಮಂದಿಯನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.
ಕಳೆದ ಅಕ್ಟೋಬರ್ 7, 2025 ರಂದು ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ವೆಂಕಟೇಶ್ ಕುರುಬರ ಅವರನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಂತಕರು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣ ಇಡೀ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕಾರಣದಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಘಟನೆ ನಡೆದ ನಂತರ ತನಿಖೆ ಕೈಗೆತ್ತಿಕೊಂಡ ಗಂಗಾವತಿ ನಗರ ಪೊಲೀಸರು, ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದರು.
ಕೊಲೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಗಂಗಾವತಿ ನಗರ ಪೊಲೀಸರು ಸುಮಾರು 927 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು (Charge sheet) ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖಾಧಿಕಾರಿಗಳು ವೈಜ್ಞಾನಿಕ ಪುರಾವೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರಕರಣದ ಆಳವಾದ ವಿಚಾರಣೆಗೆ ಸಹಕರಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಇಂದು ಅಂತಿಮ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ರವಿ ಸೇರಿದಂತೆ ಎ1 (A1) ರಿಂದ ಎ6 (A6) ವರೆಗಿನ ಆರು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ಪರಿಗಣಿಸಿದೆ. ಇನ್ನುಳಿದ ಏಳನೇ ಆರೋಪಿಯಿಂದ 12ನೇ ಆರೋಪಿಯವರೆಗಿನ (A7 to A12) ಆರು ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರ್ದೋಷಿಗಳೆಂದು ಘೋಷಿಸಿ ಬಿಡುಗಡೆ ಮಾಡಿದೆ.
ದೋಷಿಗಳು: ರವಿ (ಪ್ರಮುಖ ಆರೋಪಿ), ಅಲ್ತಾಪ್ ಬಳ್ಳಾರಿ, ಗಂಗಾಧರ್, ದಾದಾಪೀರ ಬಳ್ಳಾರಿ, ಮೈಲಾರಿ @ ವಿಜಯ್ ಮತ್ತು ಸಲೀಮ್.
ಬಿಡುಗಡೆಯಾದವರು: ಚೈತ್ರಾ, ಕಾರ್ತಿಕ್, ಭೀಮ್ @ ಭರತ್, ಧನರಾಜ್, ಶರಣಬಸವ್ ಅಲಿಯಾಸ್ ಹತ್ತು ರೊಟ್ಟಿ ಶರಣ ಮತ್ತು ಮಲ್ಲಿಕಾರ್ಜುನ @ ಡಿಜಿ ಮಲ್ಲಿ.
ಆರು ಮಂದಿ ಆರೋಪಿಗಳು ದೋಷಿ ಎಂದು ಸಾಬೀತಾಗಿದ್ದು, ಈ ದೋಷಿಗಳಿಗೆ ನ್ಯಾಯಾಲಯವು ಯಾವ ರೀತಿಯ ಶಿಕ್ಷೆ ವಿಧಿಸಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ದೋಷಿಗಳ ಶಿಕ್ಷೆಯ ಪ್ರಮಾಣವನ್ನು ಇದೇ ತಿಂಗಳು ಏಪ್ರಿಲ್ 27 ರಂದು ನ್ಯಾಯಾಲಯವು ಅಧಿಕೃತವಾಗಿ ಪ್ರಕಟಿಸಲಿದೆ. ಹತ್ಯೆಗೊಳಗಾದ ವೆಂಕಟೇಶ್ ಕುರುಬರ ಕುಟುಂಬಸ್ಥರು ಮತ್ತು ಬೆಂಬಲಿಗರು ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿದ್ದು, ಕಠಿಣ ಶಿಕ್ಷೆಯ ನಿರೀಕ್ಷೆಯಲ್ಲಿದ್ದಾರೆ.