ಮುರುಕು ಮನೆಯ ಮೇಲೆ ತಿರಂಗಾ ಹಾರಿಸಿ ಗಮನ ಸೆಳೆದಿದ್ದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರು, ಇದೀಗ ಅದೇ ಮುರುಕು ಮನೆಗಳಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ.. ಗಣೇಶ ಕೃಪೆ ತೋರಲಿ, ಈಗಲಾದರೂ ನಮಗೆ ಪರಿಹಾರ ಕೊಡುವಂತಹ ಒಳ್ಳೆಯ ಬುದ್ಧಿ ಸರ್ಕಾರಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಸೆ.4) : ಮುರುಕು ಮನೆಯ ಮೇಲೆ ತಿರಂಗಾ ಹಾರಿಸಿ ಗಮನ ಸೆಳೆದಿದ್ದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರು, ಇದೀಗ ಅದೇ ಮುರುಕು ಮನೆಗಳಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಗಣೇಶ ಕೃಪೆ ತೋರಲಿ, ಈಗಲಾದರೂ ನಮಗೆ ಪರಿಹಾರ ಕೊಡುವಂತಹ ಒಳ್ಳೆಯ ಬುದ್ಧಿ ಸರ್ಕಾರಕ್ಕೆ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಇದು ಕುಂದಗೋಳ ತಾಲೂಕಿನ ಪಶುಪತಿಹಾಳ(Pashupatihala) ಗ್ರಾಮದಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರ ಗೋಳು. ಮೇ ತಿಂಗಳಲ್ಲಿ ಸುರಿದ ಅಕಾಲಿಕ (ಮುಂಗಾರು ಪೂರ್ವ) ಮಳೆಗೆ ಈ ಗ್ರಾಮದಲ್ಲಿ ಬರೋಬ್ಬರಿ 18 ಮನೆಗಳು ಕುಸಿದಿವೆ. ಇವುಗಳಲ್ಲಿ ಆರೇಳು ಮನೆ ಪೂರ್ಣವಾಗಿ ಕುಸಿದರೆ, 10ರಿಂದ 11 ಮನೆಗಳು ಭಾಗಶಃ ಕುಸಿದಿವೆ. ಕೆಲವೊಂದಿಷ್ಟುಮನೆಗಳ ಮಾಲೀಕರು ಮನೆಯ ಸುತ್ತಲು ತಗಡಿನ ಶೆಡ್ ತರಹ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದಾರೆ. ಇನ್ನು ಕೆಲವರು ಬೇರೆ ಯಾರದೋ ದನದ ಕೊಟ್ಟಿಗೆಯನ್ನೋ ಅಥವಾ ಸಣ್ಣ ಕೋಣೆಯನ್ನೋ ಬಾಡಿಗೆ ಪಡೆದು ವಾಸಿಸುತ್ತಿದ್ದಾರೆ.
undefined
Chikkamagaluru Rains; ಸರ್ಕಾರದ ನಡೆಯಿಂದ ಸಂತ್ರಸ್ಥರು ಬದುಕು ಬೀದಿಪಾಲು
ಹೀಗೆ ದನದ ಕೊಟ್ಟಿಗೆ ಬಾಡಿಗೆ ಪಡೆದವರು ಅಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿದ್ದರೆ, ಮನೆ ಬಿದ್ದು ತಗಡಿ ಶೆಡ್ ಮಾಡಿಕೊಂಡವರು ಆ ಶೆಡ್‌ನಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಅಲ್ಲೇ ಪೂಜಿಸುತ್ತಿದ್ದಾರೆ. ಹೀಗೆ 5 ದಿನ, 7 ದಿನ, 9 ದಿನ ಹಾಗೂ 11 ದಿನ ಪೂಜೆ ಮಾಡಿ ವಿಸರ್ಜನೆ ಮಾಡುತ್ತೇವೆ ಎಂದು ಹೇಳುತ್ತಾರೆ ಶೆಡ್ ಮಾಡಿಕೊಂಡವರು.
ಪರಿಹಾರ ಸಿಕ್ಕಿಲ್ಲ: ಹಾಗೆ ನೋಡಿದರೆ ಮಳೆಯಿಂದ ಮನೆ ಕಳೆದುಕೊಂಡವರಿಗೆ . 3, . 5 ಲಕ್ಷ ಅಥವಾ ಕನಿಷ್ಠ . 50 ಸಾವಿರ ಪರಿಹಾರ ಕೊಡುವುದುಂಟು. ಆದರೆ ಪಶುಪತಿಹಾಳದಲ್ಲಿನ ಮನೆ ಕಳೆದುಕೊಂಡ 18 ಕುಟುಂಬಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದಕ್ಕೆ ಕಾರಣವೆಂದರೆ ಜೂನ್ ಅಥವಾ ಅದರ ನಂತರ ಸುರಿದ ಮಳೆಗೆ (ಮುಂಗಾರು ಮಳೆ) ಬಿದ್ದ ಮನೆಗಳಿಗೆ ಪರಿಹಾರ ಕೊಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಇವರ ಮನೆಗಳೆಲ್ಲವೂ ಮೇನಲ್ಲಿ ಸುರಿದ ಮಳೆಗೆ ಬಿದ್ದಿವೆ. ಮೇನಲ್ಲಿ ಬಿದ್ದಿರುವ ಮನೆಗಳಿಗೆ ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ಬರೀ . 3, . 5 ಸಾವಿರ ಮಾತ್ರ ಪರಿಹಾರ ಕೊಡಲಾಗುತ್ತದೆ. ಇಷ್ಟೇ ಪರಿಹಾರ ಕೊಡಲು ಅಧಿಕಾರಿಗಳು ಬಂದರೂ ಅದನ್ನು ತೆಗೆದುಕೊಂಡಿಲ್ಲ. ಕೊಡುವುದಾದರೆ ಹೊಸ ಮನೆ ಕಟ್ಟಿಸಿಕೊಳ್ಳಲು ಅಥವಾ ರಿಪೇರಿಗೆ ತಗಲುವಷ್ಟುಹಣವಾದರೂ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಸರ್ಕಾರದ ನಿಯಮದ ಪ್ರಕಾರ ಲಕ್ಷ ಲಕ್ಷ ಕೊಡಲು ಬರುವುದಿಲ್ಲ ಎಂದು ತಾಲೂಕಾಡಳಿತ ಇವರಿಗೆ ಪರಿಹಾರವನ್ನೇ ಕೊಟ್ಟಿಲ್ಲ.
ಒಳ್ಳೆಯ ಬುದ್ಧಿಕೊಡಲಿ: ಹೀಗಾಗಿ ಈ ಕುಟುಂಬಗಳು ಬಿದ್ದ ಮನೆಗಳಲೇ ತಗಡಿನ ಶೆಡ್ ಹಾಕಿಕೊಂಡು ಬದುಕು ಸಾಗಿಸುತ್ತಿವೆ. ಇದೀಗ ಆ ಶೆಡ್‌ನಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿವೆ. ಮತ್ತೆ ಏನಾದರೂ ಮಳೆ ಬಂದರೆ ಶೆಡ್ ಕೂಡ ನೆಲಕಚ್ಚುತ್ತದೆ. ಗಣೇಶ ಕೂಡ ತೇಲಿಹೋಗುವುದು ಗ್ಯಾರಂಟಿ. ಮಳೆಯಿಂದ ಮನೆ ಬಿದ್ದಿದೆ ಎಂದರೆ ಸಾಕು ಎಲ್ಲರಿಗೂ ಕೊಟ್ಟಂತೆ ಪರಿಹಾರ ಕೊಡಬೇಕು. ಅದು ಬಿಟ್ಟು ಮುಂಗಾರಿನಲ್ಲಿ ಬಿದ್ದಿಲ್ಲ. ಅದಕ್ಕಿಂತ ಮುಂಚೆ ಬಿದ್ದಿದೆ. ಹೀಗಾಗಿ ಪರಿಹಾರ ಕೊಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸುವ ಸಂತ್ರಸ್ತರು, ಆ ಗಣೇಶನೇ ಸರ್ಕಾರದವರಿಗೆ ಒಳ್ಳೆಯ ಬುದ್ಧಿ ಕೊಟ್ಟು ನಮಗೆ ಪರಿಹಾರ ಕೊಡಲಿ. ಸೂರು ಕಟ್ಟಿಕೊಳ್ಳುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸರ್ಕಾರ ತನ್ನ ನಿಯಮದಲ್ಲಿ ಬದಲಾವಣೆಯಲ್ಲಿ ಮಾಡಿಕೊಂಡು ಮುಂಗಾರು ಪೂರ್ವದಲ್ಲಿ ಬಿದ್ದ ಮಳೆಯಿಂದ ಕುಸಿತವಾಗಿರುವ ಮನೆಗೂ ಪರಿಹಾರ ಕೊಡಲಿ ಎಂಬ ಬೇಡಿಕೆ ಇವರದ್ದು. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
'ಪರಿಹಾರ ಸಿಗದೆ ಸಂತ್ರಸ್ಥರು ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ'
ನಮ್ಮ ಮನೆಗಳು ಮೇ ನಲ್ಲಿ ಬಿದ್ದಿವೆ. ಬಿದ್ದ ಭಾಗವನ್ನು ತೆರವುಗೊಳಿಸಿ ತಗಡಿನ ಶೆಡ್ ಮಾಡಿಕೊಂಡು ವಾಸಿಸುತ್ತಿದ್ದೇವೆ. ಈಗಲೂ ಮಳೆ ಬಂದರೆ ಎಲ್ಲಿ ಪೂರ್ಣ ಕುಸಿಯುತ್ತದೆಯೋ ಎಂಬ ಭೀತಿ ಇದೆ. ನಮಗೆ ಪರಿಹಾರ ಕೊಡಲು ಬರಲ್ಲ ಎಂದು ತಾಲೂಕಾಡಳಿತ ಹೇಳಿತ್ತು. ಈಗ ಈ ತಗಡಿನ ಶೆಡ್‌ನಲ್ಲೇ ಗಣೇಶನನ್ನು ಇಟ್ಟು ಪೂಜಿಸುತ್ತಿದ್ದೇವೆ. ಆ ಗಣಪ್ಪನೇ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ಕೊಟ್ಟು ಪರಿಹಾರ ಕೊಡುವಂತೆ ಮಾಡಬೇಕಷ್ಟೇ.
ಪರಶುರಾಮ ಭೀಮಪ್ಪ ಸುಂಕದ, ಸಂತ್ರಸ್ತ