ಹುಬ್ಬಳ್ಳಿಗೂ ಹಬ್ಬಿದ ಚಾಮರಾಜಪೇಟೆ ವಿವಾದ, ಗಣೇಶೋತ್ಸವ ಸಂಬಂಧ ಸಭೆ ಕರೆದ ಹಿಂದೂ ಪರ ಸಂಘಟನೆ
ಹುಬ್ಬಳ್ಳಿ(ಆ.12): ಬೆಂಗಳೂರಿನ ಈದ್ಗಾ ಮೈದಾನದಲ್ಲಿನ ಗಣೇಶೋತ್ಸವ ವಿವಾದ ಇದೀಗ ಹುಬ್ಬಳ್ಳಿಗೂ ಕಾಲಿಟ್ಟಿದೆ. ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಕೋರಿ ಕೆಲ ಹಿಂದೂಪರ ಸಂಘಟನೆಗಳು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿವೆ. ಒಂದು ವೇಳೆ ಅವಕಾಶ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿವೆ. ಈ ಬಗ್ಗೆ ಚರ್ಚಿಸಲು ಆ. 15ರಂದು ಸಭೆಯನ್ನೂ ಕರೆಯಲಾಗಿದೆ. ಇದಕ್ಕಾಗಿ ರಾಣಿಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದಾಗಿ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವದ ವಿವಾದ ಇದೀಗ ಹುಬ್ಬಳ್ಳಿಗೂ ಹಬ್ಬಿದಂತಾಗಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಮನೆ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಬಳಿಕ ಗಣೇಶ ವಿಗ್ರಹವನ್ನು ಸಾರ್ವಜನಿಕವಾಗಿ ಬಾಲಗಂಗಾಧರ ತಿಲಕ ಆಚರಿಸಲು ಶುರುಮಾಡಿದರು. ಈ ಮೂಲಕ ಸ್ವತಂತ್ರ ಸಂಗ್ರಾಮಕ್ಕೆ ಧುಮಕುವಂತೆ ಸಾರ್ವಜನಿಕರನ್ನು ಪ್ರೇರೆಪಿಸಲು ಈ ಸಾರ್ವಜನಿಕ ಗಣೇಶೋತ್ಸವ ಆಚರಣೆ ಶುರುವಾಯಿತು. ಇದೀಗ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದಲ್ಲಿದ್ದೇವೆ. ಆದಕಾರಣ ಈ ವರ್ಷದಿಂದ ಹುಬ್ಬಳ್ಳಿಯ ರಾಣಿಚೆನ್ನಮ್ಮ ಸರ್ಕಲ್‌ನಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಸಂಕಲ್ಪ ಹೊಂದಿದ್ದೇವೆ. ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೋರಾಟದ ಎಚ್ಚರಿಕೆ:
ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿ: ಸಚಿವ ಹಾಲಪ್ಪ ಭೇಟಿ
ಈದ್ಗಾ ಮೈದಾನ ಪಾಲಿಕೆಯ ಆಡಳಿತಕ್ಕೊಳಪಟ್ಟಿದೆ. ಆದಕಾರಣ ಅದನ್ನು ಎರಡು ದಿನದ ಮಟ್ಟಿಗೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮುಖಂಡ ಹನುಮಂತಸಾ ನಿರಂಜನ ಎಚ್ಚರಿಕೆ ನೀಡಿದ್ದಾರೆ.
ಉತ್ಸವ ಸಮಿತಿ ಅಸ್ತಿತ್ವಕ್ಕೆ
ಇದರೊಂದಿಗೆ ರಾಣಿಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಎಂಬ ಸಮಿತಿಯನ್ನೂ ಹುಟ್ಟುಹಾಕಲಾಗಿದೆ. ಈ ಸಮಿತಿಯಿಂದ ಗಜಾನನೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಗಣೇಶೋತ್ಸವ ಆಚರಣೆ ಕುರಿತು ಚರ್ಚಿಸಲು ಆ.15ರಂದು ಸಂಜೆ 4ಕ್ಕೆ ಇಲ್ಲಿನ ಮೂರುಸಾವಿರ ಮಠದಲ್ಲಿ ಸಭೆಯನ್ನೂ ಕರೆಯಲಾಗಿದೆ. ಸಭೆಗೆ ಹಿಂದೂಪರ ಸಂಘಟನೆಗಳ ಮುಖಂಡರು, ಗಣ್ಯರು ಎಲ್ಲರೂ ಆಗಮಿಸಬೇಕು ಎಂದು ಸಂಚಾಲಕ ಹನುಮಂತಸಾ ನಿರಂಜನ ತಿಳಿಸಿದ್ದಾರೆ.
ಅಭಿಷೇಕ ನಿರಂಜನ, ವಿನಾಯಕ ಕಾಟವೆ, ಸಾಗರ ಪವಾರ, ಸೂರಜ್ ಬದ್ದಿ, ಶೋಭಾ ನಾಕೋಡ ಸೇರಿದಂತೆ ಹಲವರು ಮನವಿ ಸಲ್ಲಿಕೆ ವೇಳೆ ಇದ್ದರು.