ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಈದ್ಗಾದಲ್ಲಿ ಗಣೇಶೋತ್ಸವ ಬಹುತೇಕ ಖಚಿತ

By Kannadaprabha News  |  First Published Aug 28, 2022, 4:00 AM IST

ಉತ್ಸವಕ್ಕೆ ಅನುಮತಿ ನೀಡುವ ಅಧಿಕಾರ ಸರ್ಕಾರಕ್ಕೆ ಹೈಕೋರ್ಟ್‌ ಮಹತ್ವದ ಆದೇಶ, ಇದರಿಂದ ಸರ್ಕಾರದ ನಿರ್ಧಾರವೇ ಅಂತಿಮ


ಬೆಂಗಳೂರು(ಆ.28): ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡಿ ಹೈಕೋರ್ಚ್‌ ವಿಭಾಗೀಯ ಪೀಠ ಶುಕ್ರವಾರ ಆದೇಶಿಸಿದೆ. ತನ್ಮೂಲಕ ಈ ಬಾರಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ದೊರೆಯುವ ಸಾಧ್ಯತೆಗೆ ಜೀವ ಬಂದಿದೆ. ಈದ್ಗಾ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮರಿಗೆ ಅವಕಾಶ ನೀಡಲು ಸೂಚಿಸಿ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ನೀಡಿದೆ.

ಹೀಗಾಗಿ ಆ.31ರಂದು ಗಣೇಶೋತ್ಸವ ಆಚರಣೆಗೆ ಅವಕಾಶ ಕೋರಿರುವ ಮನವಿಯೂ ಸೇರಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯವರಿಗೆ ಸಲ್ಲಿಕೆಯಾಗಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಆಯೋಜನೆಯ ಮನವಿಗಳ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ದೊರಕಿದಂತಾಗಿದೆ.

Tap to resize

Latest Videos

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಕೊಡುತ್ತಾ? ಸಿಎಂ ಹೇಳಿದ್ದೇನು?

ಈ ಮೇಲ್ಮನವಿಯ ಸಂಬಂಧ ಶುಕ್ರವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಕ್ಫ್ ಮಂಡಳಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಮತ್ತು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಆದರೆ, ಉಳಿದಂತೆ ಏಕ ಸದಸ್ಯ ನ್ಯಾಯಪೀಠದಲ್ಲಿ ಇತರೆ ನಿರ್ದೇಶನಗಳು ಯಾವುದೇ ಬದಾಲಾವಣೆಯಿಲ್ಲದೆ ಮುಂದುವರಿಯಲಿವೆ. ಹೊಸ ಆದೇಶದಲ್ಲಿ ವಿಭಾಗೀಯ ನ್ಯಾಯಪೀಠ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕೇವಲ ಮಧ್ಯಂತರ ಪರಿಹಾರ ಕುರಿತ ಮನವಿಗೆ ಸಂಬಂಧಿಸಿವೆ. ಆದರೆ, ಏಕ ಸದಸ್ಯ ನ್ಯಾಯಪೀಠದ ಮುಂದಿರುವ ತಕರಾರು ಅರ್ಜಿ ಅಥವಾ ಈ ಮೇಲ್ಮನವಿಯ ಅಂಶಗಳಿಗೆ ಅನ್ವಯಿಸುವುದಿಲ್ಲ ಎಂದು ಮಧ್ಯಂತರ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ವೈವಿಧ್ಯಪೂರ್ಣ ಭಾರತೀಯ ಸಮಾಜ: ದ್ವಿಸದಸ್ಯ ಪೀಠ

ಭಾರತೀಯ ಸಮಾಜವು ಧಾರ್ಮಿಕ, ಭಾಷಾ, ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯತೆ ಒಳಗೊಂಡಿದೆ. ಭಾರತದ ಸಂವಿಧಾನವು ಸಮಾಜದ ವಿವಿಧ ವರ್ಗಗಳ ನಡುವೆ ಸಹೋದರತ್ವವನ್ನು ಸಲಹುತ್ತದೆ. ಧಾರ್ಮಿಕ ಸಹಿಷ್ಣುತೆಯ ತತ್ವವು ಭಾರತೀಯ ನಾಗರಿಕತೆಯ ಲಕ್ಷಣವಾಗಿದೆ. ಆದ್ದರಿಂದ, ಈ ಹಂತದಲ್ಲಿ ಪ್ರಕರಣದ ವೈಶಿಷ್ಟ್ಯ ಪರಿಗಣಿಸಿ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಮಾರ್ಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ವಿಚಾರಣೆ ವೇಳೆ ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ‘ಈದ್ಗಾ ಮೈದಾನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಳಕೆಗೆ ಅನುಮತಿ ಕೋರಿ ವಿವಿಧ ಸಂಘ-ಸಂಸ್ಥೆಗಳಿಂದ ಬೆಂಗಳೂರು ಜಿಲ್ಲಾಧಿಕಾರಿಗೆ 5 ಮನವಿ ಪತ್ರ ಸಲ್ಲಿಕೆಯಾಗಿವೆ. ಆ ಅರ್ಜಿಗಳ ಕುರಿತು ನಿರ್ಣಯ ಕೈಗೊಳ್ಳಲು ಸರ್ಕಾರಕ್ಕೆ ಅನುಮತಿ ನೀಡಬೇಕು’ ಎಂದು ಕೋರಿದರು. ಸರ್ಕಾರದ ಈ ಮನವಿಗೆ ಪ್ರತಿವಾದಿಗಳಾದ ಕರ್ನಾಟಕ ವಕ್ಫ್ ಮಂಡಳಿ ಮತ್ತು ಬೆಂಗಳೂರು ಜಿಲ್ಲಾ ವಕ್ಫ್ ಅಧಿಕಾರಿ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ನ್ಯಾಯಾಲಯ ಸರ್ಕಾರದ ವಾದವನ್ನು ಪರಿಗಣಿಸಿ ಏಕ ಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಮಾರ್ಪಡಿಸಿತು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸದನ ಸಮಿತಿ ರಚನೆ

2 ಎಕರೆ 5 ಗುಂಟೆ ಜಾಗದ ಮಾಲೀಕತ್ವ ಪ್ರಶ್ನಿಸಿದ್ದ ಅರ್ಜಿ

ಈದ್ಗಾ ಮೈದಾನವಿರುವ ಚಾಮರಾಜಪೇಟೆಯ ಸರ್ವೇ ನಂ.40ರಲ್ಲಿನ 2 ಎಕರೆ 5 ಗುಂಟೆ ಜಾಗವನ್ನು ಕರ್ನಾಟಕ ಕೇಂದ್ರೀಯ ಮುಸ್ಲಿಂ ಮಂಡಳಿ ಹೆಸರಿಗೆ ಖಾತೆ ಮಾಡಿಕೊಡುವಂತೆ ಕರ್ನಾಟಕ ವಕ್ಫ್ ಮಂಡಳಿ ಮತ್ತು ಬೆಂಗಳೂರು ಜಿಲ್ಲಾ ವಕ್ಫ್ ಅಧಿಕಾರಿ ಸಲ್ಲಿಸಿ ಬಿಬಿಎಂಪಿಗೆ ಕೋರಿತ್ತು. ಆದರೆ, ‘ಈ ಮೈದಾನ ಕಂದಾಯ ಭೂಮಿಯಾಗಿದೆ’ ಎಂದು ತಿಳಿಸಿ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತರು ಆ.6ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ವಕ್ಫ್ ಮಂಡಳಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ಅರ್ಜಿಯನ್ನು ಗುರವಾರ ವಿಚಾರಣೆ ನಡೆಸಿದ್ದ ನ್ಯಾ. ಹೇಮಂತ್‌ ಚಂದನ ಗೌಡ್‌ ಅವರ ಏಕ ಸದಸ್ಯ ನ್ಯಾಯಪೀಠ, ‘ಈದ್ಗಾ ಮೈದಾನವನ್ನು ಆಟದ ಬಳಕೆಗೆ ಮಾತ್ರ ಸೀಮಿತಗೊಳಿಸಬೇಕು. ರಮ್ಜಾನ್‌ ಮತ್ತು ಬಕ್ರೀದ್‌ ಹಬ್ಬದಲ್ಲಿ ಮಾತ್ರ ಮುಸ್ಲಿಂ ಸಮುದಾಯದವರು ಮೈದಾನದಲ್ಲಿ ಪಾರ್ಥನೆ ಸಲ್ಲಿಸಬಹುದು. ಬಿಬಿಎಂಪಿ ಮತ್ತು ಸರ್ಕಾರ ಮೈದಾನದಲ್ಲಿ ಗಣರಾಜೋತ್ಸವ ಮತ್ತು ಸ್ವಾತಂತ್ರ್ಯ ದಿನಾಚಣೆಗೆ ಅನುಮತಿ ನೀಡಬಹುದು’ ಎಂದು ಗುರುವಾರ (ಆ.25) ಮಧ್ಯಂತರ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಶುಕ್ರವಾರ ಮೇಲ್ಮನವಿ ಸಲ್ಲಿಸಿತ್ತು.
 

click me!