
ಬೆಂಗಳೂರು (ಜೂ.9): ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣ(Mahatma Gandhi murder case)ಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ 1965ರ ವರೆಗೆ ಯಾವ ಕಾರಣಕ್ಕೆ ನ್ಯಾಯಾಂಗ ವಿಚಾರಣಾ ಆಯೋಗ ರಚಿಸಿಲ್ಲ ಎಂಬುದನ್ನು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರದ್ದುಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 10 ಸಾವಿರ ರು.ದಂಡ ವಿಧಿಸಿ ಆದೇಶಿಸಿದೆ.
ಈ ಕುರಿತು ಜಾಗೃತ ಕರ್ನಾಟಕ ಮತ್ತು ಜಾಗೃತ ಭಾರತ ಸಂಘಟನೆಯ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಅರ್ಜಿದಾರರ ಈ ನಡೆ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥ ಮಾಡುವುದಾಗಿದೆ ಎಂದು ಖಾರವಾಗಿ ನುಡಿಯಿತು.
ಈ ಹಿಂದೆಯೂ ಇದೇ ಮನವಿ ಮಾಡಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಮತ್ತೆ ಅದೇ ಮನವಿಗಳೊಂದಿಗೆ ಅರ್ಜಿ ಸಲ್ಲಿಸಿದ್ದೀರಿ.
ಹಾಗೆಯೇ ಅರ್ಜಿ ವಜಾಗೊಳಿಸದ ಪೀಠ ಅರ್ಜಿದಾರನಿಗೆ 10 ಸಾವಿರ ರು. ದಂಡ ವಿಧಿಸಿತು. ಮುಂದಿನ ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಅರ್ಜಿದಾರನಿಗೆ ಸೂಚನೆ ನೀಡಿತು.
ಮಹಾತ್ಮಾ ಗಾಂಧೀಜಿ ಅವರ ಹತ್ಯೆಗೆ ಸಂಬಂಧಿಸಿದಂತೆ 1948ರಿಂದ 1965ರ ವರೆಗೂ ಅಂದರೆ 17 ವರ್ಷಗಳ ಕಾಲ ನ್ಯಾಯಾಂಗ ವಿಚಾರಣಾ ಆಯೋಗ ರಚನೆ ಮಾಡದಿರಲು ಕಾರಣವೇನು ಎಂಬುದನ್ನು ತಿಳಿಯಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು. 1965ರಲ್ಲಿ ನ್ಯಾಯಾಂಗ ವಿಚಾರಣೆಯನ್ನು ಪ್ರಾರಂಭಿಸಿದ ಅಂಶಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಜೊತೆಗೆ, 1947ರ ಮೇ 8ರಂದು ಬ್ರಿಟಿಷ್ ವೈಸರಾಯ್ ಗೆ ಬರೆದ ಪತ್ರದಲ್ಲಿ ಭಾರತದ ವಿಭಜನೆ ತಡೆಯಲು ಶಸ್ತ್ರಸಜ್ಜಿತ ಸಂಘರ್ಷವನ್ನೂ ಒಂದು ಆಯ್ಕೆಯಾಗಿ ಗಾಂಧೀಜಿ ಪರಿಗಣಿಸಿದ್ದರೆಂಬ ಉಲ್ಲೇಖದ ಹಿನ್ನೆಲೆ ಪರಿಶೀಲಿಸಬೇಕು. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ 1947ರ ಡಿಸೆಂಬರ್ 30ರಂದು ಗಾಂಧೀಜಿ ವಿಶ್ವಸಂಸ್ಥೆಗೆ ಬರೆದಿದ್ದಾರೆ ಎನ್ನಲಾದ ಪತ್ರ ಕಾಣೆಯಾಗಿದ್ದು, ಅದರ ಬದಲಿಗೆ 1948ರ ಜ.1ರ ಮತ್ತೊಂದು ಪತ್ರ ಬಳಸಲಾಗಿದೆ. ಈ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.