ಕೊಪ್ಪಳ: ಪೊಲೀಸರ ಬಿಗಿ ಕಾವಲಿದ್ದರೂ ಎಕ್ಕ, ರಾಜ, ರಾಣಿ ಕೈಯೊಳಗೆ...!

By Kannadaprabha NewsFirst Published Oct 27, 2022, 9:00 AM IST
Highlights

ಜನಪ್ರತಿನಿಧಿಗಳು, ಪತ್ರಕರ್ತರು, ಪೊಲೀಸ್‌ ಅಧಿಕಾರಿಗಳೂ ಇಸ್ಪೀಟ್‌ ಆಡುತ್ತಾರೆ, ದೀಪಾವಳಿ ವೇಳೆ ಜೂಜಾಟ ಸಂಪ್ರದಾಯ ಎಂಬಂತಾಗಿದೆ

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.27):  ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ದೀಪಾವಳಿ ವೇಳೆ ಇಸ್ಪೀಟ್‌ ಆಟವನ್ನು ಬಹಿರಂಗವಾಗಿಯೇ ಮೂರು ದಿನಗಳ ಕಾಲ ಆಡುವ ಸಂಪ್ರದಾಯವಿದೆ. ಇದನ್ನು ಸ್ಥಳೀಯರು ಅಪರಾಧ ಎಂದೂ ಭಾವಿಸುವುದಿಲ್ಲ. ಅಷ್ಟರಮಟ್ಟಿಗೆ ಅದು ಸಂಪ್ರದಾಯವಾಗಿದೆ. ಆದರೆ, ಈ ವರ್ಷ ಪೊಲೀಸರು ಒಂದಿಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದರಿಂದ ಕದ್ದು ಮುಚ್ಚಿ ಆಡಲಾಗಿದೆ. ಕಟ್ಟುನಿಟ್ಟಿನ ಕ್ರಮದ ನಡುವೆ ಎಕ್ಕ, ರಾಜ, ರಾಣಿ ಕೈಯೊಳಗೆ ಇಟ್ಟುಕೊಂಡು ಶೆಟರ್ಸ್‌ ಹಾಕಿಕೊಂಡು ಅಂಗಡಿಯೊಳಗೆ ಆಟವಾಡುತ್ತಿದ್ದಾರೆ. ಈ ಮಧ್ಯೆಯೂ ಒಂದಿಷ್ಟುವಿನಾಯಿತಿ ಇದೆ. ಅದು, ಈ ಜೂಜಾಟ ನಡೆಯುತ್ತಿರುವುದನ್ನು ನೋಡಿಯೂ ನೋಡದಂತೆ ಪೊಲೀಸರು ಇರುತ್ತಾರೆ. ಕಾರಣ ರಾಜಕಾರಣಿಗಳು, ಪತ್ರಕರ್ತರು, ಪೊಲೀಸ್‌ ಅಧಿಕಾರಿಗಳೂ ಎಕ್ಕ, ರಾಜ, ರಾಣಿ ಎಲೆ ತಟ್ಟುತ್ತಿರುತ್ತಾರೆ!

ಲಕ್ಷಾಂತರ ಹಣ ಪಣಕ್ಕೆ:

ಇಸ್ಪೀಟ್‌ ಆಟ ಎಷ್ಟು ಬೇರೂರಿದೆ ಎಂದರೆ ಲಕ್ಷ ಲಕ್ಷ ಸೋಲುತ್ತಾರೆ ಮತ್ತು ಗೆಲ್ಲುತ್ತಾರೆ. ಗೆದ್ದವರು ತೀರಾ ಕಡಿಮೆ ಇರುತ್ತಾರೆ. ಆದರೆ, ಸೋತವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುತ್ತದೆ. ನೂರು ರುಪಾಯಿಯಿಂದ ಹಿಡಿದು ಲಕ್ಷ ಲಕ್ಷ ಒಂದೇ ಆಟಕ್ಕೆ ಸುರಿಯುತ್ತಾರೆ. ಐದಾರು ನಿಮಿಷದ ಆಟದಲ್ಲಿ ಹತ್ತಾರು ಲಕ್ಷ ಸೋಲುವ ಮತ್ತು ಗೆಲ್ಲುವ ಆಟ ನಡೆಯುತ್ತದೆ.

ಧಾರವಾಡದಲ್ಲಿ ಎಲ್ಲೆಂದರಲ್ಲಿ ಅಂದರ್ ಬಾಹರ್: ಶಾಲೆಗಳೇ ಪುಂಡ ಪೋಕರಿಗಳ ಟಾರ್ಗೆಟ್‌..!

ಪಾಲಕರೇ ಕಳುಹಿಸುತ್ತಾರೆ:

ದೀಪಾವಳಿಯಲ್ಲಿ ಇಸ್ಪೀಟ್‌ ಆಡುವುದಕ್ಕೆಂದೆ ಕೆಲವರ ಮನೆಯಲ್ಲಿ ಮಕ್ಕಳಿಂದ ಹಿಡಿದು ಮನೆಯಲ್ಲಿರುವ ಪುರುಷರಿಗೆ ಹಿರಿಯರು ಹಣ ನೀಡುತ್ತಾರೆ. ಕೆಲವರು ದೀಪಾವಳಿಯಲ್ಲಿ ಇಸ್ಪೀಟ್‌ ಆಟ ಆಡುವುದಕ್ಕಾಗಿಯೇ ಹಣ ಜೋಡಿಸಿ ಇಟ್ಟುಕೊಂಡಿರುತ್ತಾರೆ.

ಆಗಿತ್ತು ಭಾರಿ ಗಲಾಟೆ:

ನಗರದಲ್ಲಿ ಹತ್ತು ವರ್ಷಗಳ ಹಿಂದೆ ಪೊಲೀಸ್‌ ವರಿಷ್ಠಾಧಿಕಾರಿಯೊಬ್ಬರು ಅದು ಹೇಗೆ ಇಸ್ಪೀಟ್‌ ಆಡುತ್ತಾರೆ, ನಾನು ನೋಡುತ್ತೇನೆ, ನಡುರಸ್ತೆಯಲ್ಲಿಯೇ ಕುಳಿತು ಇಸ್ಪೀಟ್‌ ಆಟ ಆಡುವುದಾದರೆ ನಾವೇಕೆ ಇರಬೇಕು ಎಂದೆಲ್ಲ ಕಿಡಿಕಾರಿ, ಭಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಆಗ ಶಾಸಕರೊಬ್ಬರು ನಡು ರಸ್ತೆಯಲ್ಲಿಯೇ ಇಸ್ಪೀಟ್‌ ಆಟವಾಡುತ್ತಾ ಸವಾಲು ಎಸೆದಿದ್ದರು, ಬನ್ನಿ ಅರೆಸ್ಟ್‌ ಮಾಡುವುದಾದರೆ ನನ್ನನ್ನು ಅರೆಸ್ಟ್‌ ಮಾಡಿ ಎಂದು ಸವಾಲು ಹಾಕಿದ್ದರು. ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು.

ಅಂತಾರಾಷ್ಟ್ರೀಯ ಮಾರ್ಕೆಟ್‌ನಲ್ಲಿ ಭರ್ಜರಿ ಬೇಡಿಕೆ: ಕೊಪ್ಪಳದಿಂದ ಮೆಕ್ಕೆಜೋಳ ರವಾನೆ

ಪ್ರತಿವರ್ಷವೂ ದೀಪಾವಳಿ ಬರುತ್ತಿದ್ದಂತೆ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮದ ಪ್ರಕಟಣೆಯೊಂದು ಹೊರಬೀಳುತ್ತದೆ. ಈ ಬಾರಿ ದೀಪಾವಳಿ ಹಬ್ಬದಲ್ಲಿ ಇಸ್ಪೀಟ್‌ ಆಟ ಆಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು. ಈ ಬಾರಿಯೂ ಅಂಥದ್ದೊಂದು ಪ್ರಕಟಣೆ ಎಸ್ಪಿ ನೀಡಿ ಕೈತೊಳೆದುಕೊಂಡಿದ್ದಾರೆ. ಆದರೆ, ಒಂದಿಷ್ಟುಬಿಗಿ ಕ್ರಮ ಕೈಗೊಳ್ಳಲಾಗಿದ್ದು ಬೀದಿಯಲ್ಲಿ ನಡೆಯುತ್ತಿರುವ ಇಸ್ಪೀಟ್‌ ಆಟ, ಅಂಗಡಿಯೊಳಗೆ ಸ್ಥಳಾಂತರವಾಗಿದೆ.

ನಗರದಲ್ಲಿ ಸುಮಾರು 200 ಸ್ಥಳಗಳಲ್ಲಿ ಇಸ್ಪೀಟ್‌ ಆಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಗಾಗ ಪೊಲೀಸರು ತಮ್ಮ ವಾಹನದೊಂದಿಗೆ ಹೋಗಿ ಆಟವಾಡಬೇಡಿ ಎಂದು ಹೇಳಿ ಕಳುಹಿಸುತ್ತಲೇ ಇದ್ದಾರೆ, ಅವರು ಆಡುತ್ತಲೇ ಇದ್ದಾರೆ.
ಇಸ್ಪೀಟ್‌ ಆಟದಲ್ಲಿ ನಿರತರಾಗುವ ಜನಪ್ರತಿನಿಧಿಗಳು, ಪತ್ರಕರ್ತರು, ಪೊಲೀಸ್‌ ಅಧಿಕಾರಿಗಳಿಗೆ ಇದು ತಪ್ಪು ಅನಿಸುವುದಿಲ್ಲ. ಬದಲಾಗಿ ಈ ಭಾಗದಲ್ಲಿ ದೀಪಾವಳಿ ವೇಳೆ ನಡೆಯುವ ಆಚರಣೆಯಲ್ಲಿ ಅದೂ ಒಂದು ಸಂಪ್ರದಾಯ ಎಂದು ಭಾವಿಸುತ್ತಾರೆ. ಹಾಗಾಗಿ ಇದನ್ನು ಸಂಪ್ರದಾಯ ಎಂದು ಸರ್ಕಾರ ಘೋಷಿಸಿ ವಿನಾಯಿತಿ ನೀಡಬೇಕು ಎನ್ನುವ ಆಗ್ರಹ ಮಾಡುವವರು ಇದ್ದಾರೆ.
 

click me!