ಕುಟುಂಬಕ್ಕೆ ಸಿಕ್ಕಿದ್ದು ಸನ್ಮಾನ ಮಾತ್ರ; ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಲಕ್ಕುಂಡಿ ಪ್ರಕರಣ

Published : Jan 14, 2026, 07:56 AM IST
Gadag Lakkundi Gold Treasure

ಸಾರಾಂಶ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಪ್ರಜ್ವಲ್ ರಿತ್ತಿಗೆ ಸನ್ಮಾನ ಮಾಡಲಾಯಿತು. ಆದರೆ, ಈ ಘಟನೆಯನ್ನು ಆಧರಿಸಿ, ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಮತ್ತು ಸರ್ಕಾರದ ನಿಲುವನ್ನು ವಿಡಂಬನೆ ಮಾಡುವ ರೀಲ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಗದಗ: ದಿನಕ್ಕೊಂದು ಹೇಳಿಕೆ, ಕ್ಷಣಕ್ಕೊಂದು ಮಾತು, ಸಿಕ್ಕ ಬಂಗಾರವೆಷ್ಟು, ಅಧಿಕಾರಿಗಳು ಹೇಳುವುದೆಷ್ಟು, ಯಾವುದಕ್ಕೂ ತಾಳೆಯಾಗುತ್ತಿಲ್ಲ. ಪ್ರತಿದಿನವೂ ಇದರದ್ದೇ ಚರ್ಚೆ... ಹೀಗೆ ನಡೆಯುತ್ತಿರುವ ವಿದ್ಯಮಾನಗಳ ಮಧ್ಯೆಯೇ ಲಕ್ಕುಂಡಿ ನಿಧಿ ಪತ್ತೆ ಘಟನೆಯನ್ನು ಹೋಲುವ ರೀಲ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬಂಗಾರದ ಆಭರಣ ಸಿಕ್ಕ ತಕ್ಷಣವೇ ಆ ಕುಟುಂಬವು ನಡೆದುಕೊಂಡ ರೀತಿ, ಅಲ್ಲಿಗೆ ಗ್ರಾಪಂ ಸದಸ್ಯರು, ಮುಖಂಡರು ಆಗಮಿಸುವ ಪರಿ, ಸರ್ಕಾರಿ ಮಹಿಳಾ ಅಧಿಕಾರಿಯೋರ್ವರು ಬಂದು ಆಭರಣಗಳನ್ನು ಸರ್ಕಾರಕ್ಕೆ ಮರಳಿಸಿದ ವ್ಯಕ್ತಿಗೆ ಸನ್ಮಾನ ಮಾಡುವುದು ಸೇರಿದಂತೆ ಪ್ರತಿಯೊಂದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ಪ್ರಾಮಾಣಿಕತೆ ಮರೆದ ಕುಟುಂಬಕ್ಕೆ ಕೊನೆಗೆ ಸಿಕ್ಕಿದ್ದು ಕೇವಲ ಸನ್ಮಾನ

ಆದರೆ ರೀಲ್ಸ್ ಮುಗಿವ ಸಂದರ್ಭದಲ್ಲಿ ಆಭರಣಗಳನ್ನು ಸರ್ಕಾರಕ್ಕೆ ನೀಡಿದ ಯುವಕನಿಗೆ ಬಾಳೆಹಣ್ಣು ನೀಡಿ ಸನ್ಮಾನಿಸಿದ ನಂತರ ಇದು ಸರ್ಕಾರದ ಬಾಳೆಹಣ್ಣು ತಿನ್ನಿರಿ. ನಾನು ಸರ್ಕಾರಕ್ಕೆ ಆಭರಣ ನೀಡಿದ್ದಕ್ಕಾಗಿ ಸರ್ಕಾರ ನನಗೆ ಕೊಟ್ಟ ಬಾಳೆಹಣ್ಣು ನೀವು ತಿನ್ನಿ ಎಂದು ಆ ಯುವಕ ಅಲ್ಲಿದ್ದ ಎಲ್ಲರನ್ನೂ ಕರೆದು ಕೊಡುವ ರೀತಿ, ಈ ಘಟನೆಯಲ್ಲಿ ಸ್ಥಳೀಯ ಮುಖಂಡರು, ಜಿಲ್ಲಾಡಳಿತ ಮತ್ತು ಸರ್ಕಾರ ನಡೆದುಕೊಂಡ ರೀತಿಯನ್ನು ಅಣಕಿಸುವಂತೆ ವ್ಯಕ್ತವಾಗುತ್ತಿದ್ದು, ಪ್ರಾಮಾಣಿಕತೆ ಮರೆದ ಕುಟುಂಬಕ್ಕೆ ಕೊನೆಗೆ ಸಿಕ್ಕಿದ್ದು ಕೇವಲ ಸನ್ಮಾನ, ಸಮಾಧಾನದ ಎರಡು ಮಾತು ಹಾಗೂ ಕೇವಲ ಬಾಳೆಹಣ್ಣು ಎನ್ನುವುದನ್ನು ಅತ್ಯಂತ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ.

ಇನ್ನೊಂದು ವಿಡಿಯೋದಲ್ಲಿಯೂ ಓರ್ವ ಬಡವ ಮಳೆಯಾಗಿ ನನ್ನ ಮನೆ ಬಿದ್ದಿದೆ ಬನ್ನಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಹೋಗುತ್ತಾಳೆ. ಆದರೆ ಜಿಲ್ಲಾಧಿಕಾರಿಗಳು ಇದಕ್ಕೆಲ್ಲಾ ಈಗ ಸಮಯವಿಲ್ಲ ಹೋಗಿ ಎಂದು ಹೇಳಿ ಕಳಿಸುತ್ತಾರೆ. ಬಿದ್ದ ಮನೆಯಲ್ಲಿಯೇ ಬಂಗಾರ ಸಿಕ್ಕಿದೆ ಎಂದು ಬಡವ ಹೇಳುತ್ತಿದ್ದಂತೆ ಜಿಲ್ಲಾಡಳಿತವೇ ಖಾಲಿ ಚೀಲವೊಂದನ್ನು ಹಿಡಿದುಕೊಂಡು ಓಡೋಡಿ ಬರುವ ವಿಡಿಯೋ ಕೂಡಾ ಭಾರೀ ವೈರಲ್ ಆಗಿದ್ದು, ಬಡವರ ವಿಷಯದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.

ಪ್ರಜ್ವಲ್ ರಿತ್ತಿಗೆ ಪುಷ್ಪವೃಷ್ಟಿ ಮಾಡಿ ಸಚಿವರಿಂದ ಸನ್ಮಾನ

ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ಬಂಗಾರದ ಆಭರಣಗಳನ್ನು ಪ್ರಾಮಾಣಿಕತೆಯಿಂದ ಸರ್ಕಾರಕ್ಕೆ ಹಸ್ತಾಂತರಿಸಿದ ಪ್ರಜ್ವಲ್ ರಿತ್ತಿ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಪುಷ್ಪವೃಷ್ಟಿ ಮಾಡಿ, ಅಭಿನಂದನಾ ಪತ್ರ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

ಅಪೂರ್ವ ಉದಾಹರಣೆ: ಸಚಿವ ಎಚ್.ಕೆ. ಪಾಟೀಲ

ಪ್ರಜ್ವಲ್ ರಿತ್ತಿ ಪತ್ತೆಯಾದ ತಾಮ್ರದ ತಂಬಿಗೆಯನ್ನು ದೇವರ ಕೋಣೆಯಲ್ಲಿ ಸುರಕ್ಷಿತವಾಗಿ ಇಟ್ಟು ಕೀಲಿ ಹಾಕಿ ಭದ್ರಪಡಿಸಿದ್ದರು. ನಂತರ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ, ಪತ್ತೆಯಾದ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿರುವುದು ಅಪೂರ್ವ ಉದಾಹರಣೆ ಎಂದು ಸಚಿವ ಎಚ್.ಕೆ. ಪಾಟೀಲ ಶ್ಲಾಘಿಸಿದರು.

ಜಗತ್ತಿನಾದ್ಯಂತ ಇಂತಹ ಘಟನೆಗಳನ್ನು ನೋಡಿದಾಗ, ಸಿಕ್ಕ ಅಮೂಲ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿರುವ ಉದಾಹರಣೆಗಳು ಬಹಳ ವಿರಳ. ಲಕ್ಕುಂಡಿಯ ಪ್ರಾಚ್ಯವಸ್ತು ಸಂಗ್ರಹ ಕಾರ್ಯಕ್ರಮದಡಿ, ಗ್ರಾಮಸ್ಥರು ಈಗಾಗಲೇ 1100ಕ್ಕೂ ಹೆಚ್ಚು ಪ್ರಾಚ್ಯ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಈ ಗ್ರಾಮದ ಸಂಸ್ಕೃತಿ ಮತ್ತು ಹಿರಿಮೆಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

Koppal: ಕಾಂಗ್ರೆಸ್‌ಗೆ ಟಕ್ಕರ್‌ ಕೊಟ್ಟು ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ ಬೆಂಬಲಿತರು
ಶಾಸಕ ಸತೀಶ್ ಸೈಲ್‌ಗೆ ಫೆ. 5ರ ವರೆಗೆ ಮಧ್ಯಂತರ ಜಾಮೀನು ವಿಸ್ತರಣೆ