
ಗದಗ (ಜು.09): ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಪ್ರೇಮಿಗಳ ಜೋಡಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಜುಲೈ 7ರಂದು, ಸೋಮವಾರ ಗ್ರಾಮದ ಹೊರವಲಯದ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಜೀವ ಕೊನೆಗೊಳಿಸಲು ಯತ್ನಿಸಿದ್ದ ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅಪ್ರಾಪ್ತೆಯು ಸಾವನ್ನಪ್ಪಿದ್ದಾಳೆ. ಯುವಕ ದೇವಪ್ಪ ಹಾದಿಮನಿ ಆಸ್ಪತ್ರೆಯಲ್ಲಿ ಜೀವ - ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಮೃತಳಾಗಿರುವ ಬಾಲಕಿ ಮನೆಯಲ್ಲಿ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆ ಬಿಟ್ಟು ಬಂದಿದ್ದಾಳೆ. ಇತ್ತ ಆಟೋ ಚಾಲಕನಾಗಿರುವ ದೇವಪ್ಪ ಹಾದಿಮನಿಯ ಜೊತೆಗೆ ಹೋಗಿದ್ದಳು. ಇಬ್ಬರೂ ರಾಜೂರು ಗ್ರಾಮದಿಂದ ಕೆಲವು ಕಿಲೋಮೀಟರ್ ಅಂತರದಲ್ಲಿರುವ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ವಿಷ ಸೇವನೆ ಬಳಿಕ ದೇವಪ್ಪ ತನ್ನ ಸ್ನೇಹಿತರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಪ್ರಾಪ್ತೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.
ಪೊಲೀಸರಿಗೆ ಲಭ್ಯವಾದ ಪ್ರಾಥಮಿಕ ಮಾಹಿತಿಯಂತೆ, ಈ ಪ್ರೇಮ ಸಂಬಂಧಕ್ಕೆ ಇಬ್ಬರ ಮನೆಯವರ ವಿರೋಧವಿತ್ತು. ಅಪ್ರಾಪ್ತೆಯ ಕುಟುಂಬದವರು ಆಕೆಗೆ ಸಂಬಂಧಿಕನೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರಿಂದ, ಈ ಪ್ರೇಮಿಗಳ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿತ್ತು. ಕುಟುಂಬದ ಹಿರಿಯರು ಜೋಡಿಗೆ ಬುದ್ಧಿ ಹೇಳಿದರೂ, ಅವರ ಮಾತನ್ನು ಮೀರಿ ಅವರು ಸೋಮವಾರ ಸಾವಿಗೆ ಶರಣಾಗಲು ಮುಂದಾಗಿದ್ದಾರೆ. ಈ ಘಟನೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪ್ರಾಪ್ತೆಯು ಬನಿಯಪ್ಪ ಗೂಳಿ ಎಂಬವರ ಮೊಮ್ಮಗಳು ಎಂದು ಪೊಲೀಸರು ತಿಳಿಸಿದ್ದು, ಬಾಲಕಿ ಮತ್ತು ಯುವಕನ ನಡುವಿನ ಸಂಬಂಧ, ಕುಟುಂಬದ ನಿರಾಕರಣೆ ಹಾಗೂ ಪ್ರೇಮ ವೈಫಲ್ಯದ ಕಥೆಯ ಹಿಂದೆ ನಿಜವಾದ ಕಾರಣ ಏನು ಎಂಬುದು ತನಿಖೆಯಿಂದ ಹೊರಬರುವ ನಿರೀಕ್ಷೆಯಿದೆ.