
ಬೀದರ್ (ಜುಲೈ 09): ಸರ್ಕಾರಿ ಇಲಾಖೆಯ ಆಂತರಿಕ ರಾಜಕಾರಣ ಹಾಗೂ ಮುಂಬಡ್ತಿ ವಿಚಾರವಾಗಿ ಮನನೊಂದ ಸರ್ಕಾರದ ನೌಕರನೊಬ್ಬ 'ನಾನು ಸಾಯುತ್ತೇನೆ' ಎಂಬ ಎಚ್ಚರಿಕೆ ನೀಡಿರುವ ವಿಡಿಯೋ ಶೂಟ್ ಮಾಡಿ ಹರಿಬಿಟ್ಟಿರುವ ಘಟನೆ ವೈರಲ್ ಆಗಿದೆ.
ಸಣ್ಣ ನೀರಾವರಿ ಇಲಾಖೆಯಲ್ಲಿ ಎಫ್‌ಪಿಎ (FDA) ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜು ಢಾಕುಳಗಿ ಎಂಬವರು ಈ ಕೃತ್ಯದಿಂದ ಜಿಲ್ಲೆಯ ಆಡಳಿತ ಯಂತ್ರ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಆಘಾತ ಉಂಟಾಗಿದೆ. ಜೂನ್ 19ರಂದು ಜಲಸಂಪನ್ಮೂಲ ಇಲಾಖೆಯಿಂದ ಸಂಜು ಢಾಕುಳಗಿ ಅವರಿಗೆ ಮುಂಬಡ್ತಿ ನೀಡಿದೆ. ಅದೇ ಆದೇಶವನ್ನು ಮರುಪೂರಣವಾಗಿ ಹಿಂಪಡೆದಿದೆ. ನಂತರ ಹಿಂದಿನ ಇಲಾಖೆಯಿಂದ ವರ್ಗಾವಣೆಗೊಂಡ ಕುಂದನಬಾಯಿ ಎಂಬವರಿಗೆ ಅದೇ ಹುದ್ದೆಗೆ ಪುನರಾಯ್ಕೆ ಮಾಡಿರುವುದು ಸಂಜುಗೆ ತೀವ್ರ ನಿರಾಸೆಯನ್ನು ಉಂಟುಮಾಡಿದೆ.
ನಾನು ಸಾಯುತ್ತೇನೆ ಎಂದು ವಿಡಿಯೋ ಮಾಡಿ ಬೆದರಿಕೆ:
ತಾನೇ ಮರವೊಂದರ ಕೆಳಗೆ ನಿಂತುಕೊಂಡು ಮರಕ್ಕೆ ತನ್ನದೇ ಶರ್ಟ್ ಅನ್ನು ಬಿಚ್ಚಿ ಮರಕ್ಕೆ ಕಟ್ಟಿ ಅದರೊಳಗೆ ತಾನೂ ಸೇರಿಕೊಂಡು ತಾನು ನೇಣಿಗೆ ಶರಣಾಗಿ ಸಾಯುತ್ತಿದ್ದೇನೆ ಎಂದು ಸಂಜು ಢಾಕುಳಗಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ನಾನು ಬದುಕಬೇಕಾದರೆ ಸಣ್ಣ ನೀರಾವರಿ ಇಲಾಖೆಯಲ್ಲಿ ಮುಂಬಡ್ತಿ ನೀಡಿ ಮುಂದುವರೆಸಬೇಕು. ಇಲ್ಲವಾದರೆ ವಿಷ ಕುಡಿದು ಅಥವಾ ನೇಣು ಬಿಗಿದು ಸಾವಿಗೊಳಗಾಗುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.
ಡಿಕೆಶಿ ಆಪ್ತ ಕಾರ್ಯದರ್ಶಿ ಸೇರಿದಂತೆ ಮೂವರ ಮೇಲೆ ಆರೋಪ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ, ರಿಜಿಸ್ಟರ್ ದಿವಾಕರ್ ಹಾಗೂ ಚೀಫ್ ಇಂಜಿನಿಯರ್ ಸತೀಶ ಕುಮಾರ್ ಈ ಮೂವರು ತಮ್ಮ ಮನನೊಂದ ಸ್ಥಿತಿಗೆ ಕಾರಣರಾಗಿದ್ದಾರೆ ಎಂದು ಸಂಜು ಸ್ಪಷ್ಟವಾಗಿ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಡಿಯೋವನ್ನು ದಿವಾಕರ್‌ಗೂ ಹಂಚಿಕೊಂಡಿರುವ ಸಂಜು ಅವರಿಗೆ ತಕ್ಷಣವೇ 'ಬೆಂಗಳೂರು ಬನ್ನಿ, ಈ ವಿಚಾರವನ್ನು ನಿಧಾನವಾಗಿ ಬಗೆಹರಿಸೋಣ' ಎಂಬ ನಿರ್ದೇಶಕರ ಪ್ರತಿಕ್ರಿಯೆಯೂ ಕೇಳಿಬಂದಿದೆ. ಆದರೆ ಸಂಜು ತನಗೆ ಪ್ರಮೋಷನ್ ಕೊಡದಿದ್ದರೆ ಸಾಯುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಘಟನೆಯು ಕೇವಲ ಒಂದು ಅಧಿಕಾರಿಯ ನೋವಲ್ಲ. ಅದು ಸರ್ಕಾರದ ವ್ಯವಸ್ಥೆಯಲ್ಲಿರುವ ಗಂಭೀರ ವೈಫಲ್ಯದ ಸಂಕೇತ. ಪ್ರಾಮಾಣಿಕವಾಗಿ ಕೆಲಸಮಾಡುತ್ತಿರುವ ನೌಕರರು ಮುಂಬಡ್ತಿ ಸೇರಿದಂತೆ ನ್ಯಾಯಕ್ಕೆ ನಿರಂತರ ಹೋರಾಟ ನಡೆಸಬೇಕಾಗುತ್ತಿರುವುದು ಕಳಕಳಿ ಹುಟ್ಟುಹಾಕುವ ಸಂಗತಿ. ಸಂಜು ಢಾಕುಳಗಿಯ ಈ ಭಾವೋದ್ರೇಕದ ಸಂದೇಶ ಸರ್ಕಾರ ಮತ್ತು ಇಲಾಖೆಗೆ ಎಚ್ಚರಿಕೆಯಾಗಿದೆ. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ, ಸೂಕ್ತ ತನಿಖೆ, ನ್ಯಾಯಯುತ ಕ್ರಮ ಹಾಗೂ ಮಾನವೀಯತೆಯಿಂದ ಕೂಡಿದ ನಿರ್ಧಾರಗಳ ಅವಶ್ಯಕತೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿ ಕ್ಲಿಕ್ ಮಾಡಿ.