ಬೆಳಗಾವಿ: ಕೊನೆಗೂ ನಡೀತು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ

By Kannadaprabha NewsFirst Published Jul 6, 2020, 8:35 AM IST
Highlights

ಪಾಲಿಕೆ, ಆರೋಗ್ಯ ಇಲಾಖೆ ನಡುವಿನ ತಿಕ್ಕಾಟದಿಂದ ಹಾಗೆ ಇದ್ದ ಶವವಗಳು| ಶನಿವಾರವೇ ಕೊರೋನಾದಿಂದ ಅಸುನೀಗಿದ್ದರೂ ಭಾನುವಾರ ನಡೆದ ಅಂತ್ಯಕ್ರಿಯೆ| ಕೋವಿಡ್‌ 19 ಸೋಂಕಿನಿಂದ ಮೃತಟ್ಟವರ ಅಂತ್ಯಕ್ರಿಯೆಗೆ ಪ್ರತ್ಯೇಕ ಭೂಮಿ ಮೀಸಲು|

ಬೆಳಗಾವಿ(ಜು.06): ಸ್ಥಳೀಯ ಬಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರು ಪುರುಷರ ಶವಗಳ ಅಂತ್ಯಕ್ರಿಯೆ ಕೊನೆಗೂ ಬೆಳಗಾವಿಯ ಈದ್ಗಾ ಮೈದಾನ ಬಳಿ ಭಾನುವಾರ ನೆರವೇರಿದೆ.

ರಾಯಬಾಗ ತಾಲೂಕಿನ ಕುಡಚಿ ಗ್ರಾಮದ 70 ವರ್ಷದ ವೃದ್ಧ ಹಾಗೂ ಬೆಳಗಾವಿಯ ವೀರಭದ್ರ ನಗರದ 48 ವರ್ಷದ ಪುರುಷ ಬಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ 19 ಸೋಂಕಿನಿಂದ ಶನಿವಾರವೇ ಮೃತಪಟ್ಟಿದ್ದರು. ಬಿಮ್ಸ್‌ ಆಸ್ಪತ್ರೆ ವೈದ್ಯರು ಕೋವಿಡ್‌ ಮಾರ್ಗಸೂಚಿ ಅನ್ವಯ ಮೃತದೇಹಗಳನ್ನು ಪ್ಯಾಕ್‌ ಮಾಡಿ ಇಟ್ಟಿದ್ದರು. ಆದರೆ, ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಇವರಿಬ್ಬರ ಅಂತ್ಯಕ್ರಿಯೆ ಮಾಡಿರಲಿಲ್ಲ. ಹೀಗಾಗಿ ಶವಗಳನ್ನು ಬಿಮ್ಸ್‌ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು. ಮೃತರ ಕುಟುಂಬದ ಸದಸ್ಯರು ಬಿಮ್ಸ್‌ ಆಸ್ಪತ್ರೆ ಆವರಣದಲ್ಲೇ ಅಂತ್ಯಕ್ರಿಯೆ ಪ್ರಕ್ರಿಯೆಗಾಗಿ ಕಾದುಕುಳಿತಿದ್ದರು. ಆರೋಗ್ಯ ಇಲಾಖೆ ಮಾಡಲಿ ಎಂದು ಪಾಲಿಕೆ ಅಧಿಕಾರಿಗಳು, ಪಾಲಿಕೆಯವರು ಮಾಡಲಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ನಡುವೆ ಕಿತ್ತಾಟ ಆರಂಭವಾಗಿತ್ತು.

ಅಥಣಿ: ಒಂದೇ ಕುಟುಂಬದ ಐವರಿಗೆ ಅಂಟಿದ ಮಹಾಮಾರಿ ಕೊರೋನಾ..!

ಕೊನೆಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಶವಗಳ ಅಂತ್ಯಕ್ರಿಯೆಗೆ ಮುಂದಾದರು. ಕೋವಿಡ್‌ 19 ಸೋಂಕಿನಿಂದ ಮೃತಟ್ಟವರ ಅಂತ್ಯಕ್ರಿಯೆಗೆ ಪ್ರತ್ಯೇಕ ಭೂಮಿಯನ್ನು ಮೀಸಲಾಡಲಾಗಿತ್ತು. ಸರ್ಕಾರದ ನಿಯಮಗಳಂತೆಯೇ ನಿಗದಿತ ಭೂಮಿಯಲ್ಲಿ ಬುಲ್ಡೋಜರ್‌ನಿಂದ 10 ಅಡಿ ಆಳದ ಗುಂಡಿ ತೋಡಿ, ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸಿ, ಮೃತರ ದೇಹಗಳನ್ನು ಹೂಳಲಾಯಿತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಸ್ಯಾನಿಟೈಸೇಷನ್‌ ಮಾಡಲಾಯಿತು.

ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ತಹಸೀಲ್ದಾರ ಆರ್‌.ಕೆ.ಕುಲಕರ್ಣಿ, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಬಸವರಾಜ ಧಬಾಡೆ ಭೇಟಿ ನೀಡಿ ಪರಿಶೀಲಿಸಿದರು.

ಐವರನ್ನೊಳಗೊಂಡ ತಂಡದ ನೇತೃತ್ವ ವಹಿಸಿದ್ದ ಡಾ.ನಬೀಲ್‌ ಅಹ್ಮದ ಮಾತನಾಡಿ, ಯಾವುದೇ ಜಾತಿ, ಬೇಧವಿಲ್ಲದೇ ಕೊರೋನಾ ಸೋಂಕಿತರಿಗಾಗಿ ಅಂತ್ಯ ಕ್ರಿಯೆ ನಡೆಸಲು ಒಂದಿಷ್ಟು ಭೂಮಿ ಕಾಯ್ದಿರಿಸಲಾಗಿದೆ. ಇಲ್ಲಿ ಆಳವಾದ ಗುಂಡಿ ತೋಡಿ, ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸಿ, ಇತರೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಅಂತ್ಯಕ್ರಿಯೆ ಪ್ರಕ್ರಿಯೆ ನೆರವೇರಿಸಲಾಗಿದೆ ಎಂದರು.

ಅಂಜುಮನ್‌ ಇಸ್ಲಾಂ ಸಮಿತಿ ಅಧ್ಯಕ್ಷ ರಾಜು ಸೇಠ್‌ ಮಾತನಾಡಿ, ಕೋವಿಡ್‌- 19 ಸೋಂಕಿನಿಂದ ಮೃತಪಟ್ಟಿರುವವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ 3000 ಚ.ಅಡಿ ಭೂಮಿಯನ್ನು ಈದ್ಗಾ ಮೈದಾನದ ಬಳಿ ಕಾಯ್ದಿರಿಸಲಾಗಿದೆ. ಸರ್ಕಾರದ ನಿಯಮಾವಳಿ ಅನ್ವಯವೇ ಇಲ್ಲಿ ಅಂತ್ಯಕ್ರಿಯೆ ಪ್ರಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಜುಮನ್‌ ಇಸ್ಲಾಂ ಕಮೀಟಿ ಸದಸ್ಯ, ವಕ್ಫ ಬೋರ್ಡ್‌ ಚೇರಮನ್‌ ಗಫäರ್‌ ಘೀವಾಲೆ, ಮಾಜಿ ನಗರ ಸೇವಕ ಬಾಬುಲಾಲ್‌ ಮುಜಾವರ, ಅಬ್ದುಲ್‌ ಘೀವಾಲೆ, ಸಲೀಮ್‌ ಮಾಡಿವಾಲೆ ಇತರರು ಪಾಲ್ಗೊಂಡಿದ್ದರು.
 

click me!