ಮಳೆ ಹಾನಿ ಸಂತ್ರಸ್ತರಿಗೆ ಕ್ಷಿಪ್ರವಾಗಿ ಸ್ಪಂದಿಸಿ: ಸಚಿವ ನಾಗೇಶ್‌

By Govindaraj S  |  First Published Jul 17, 2022, 10:28 PM IST

ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ನಾಗರಿಕರ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ನಾಗರಿಕರಿಂದ ನೆರವು ಕೋರಿ ಕರೆಗಳು ಬಂದಾಗ ಅಧಿಕಾರಿಗಳು ಕ್ಷಿಪ್ರವಾಗಿ ಸ್ಪಂದಿಸಲು ಸದಾ ಸಿದ್ಧರಾಗಿರಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ನಿರ್ದೇಶನ ನೀಡಿದ್ದಾರೆ.


ಮಡಿಕೇರಿ (ಜು.17): ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ನಾಗರಿಕರ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ನಾಗರಿಕರಿಂದ ನೆರವು ಕೋರಿ ಕರೆಗಳು ಬಂದಾಗ ಅಧಿಕಾರಿಗಳು ಕ್ಷಿಪ್ರವಾಗಿ ಸ್ಪಂದಿಸಲು ಸದಾ ಸಿದ್ಧರಾಗಿರಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ನಿರ್ದೇಶನ ನೀಡಿದ್ದಾರೆ. ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಿಂದ ಕೊಡಗು ಜಿಲ್ಲಾಡಳಿತದೊಂದಿಗೆ ಶನಿವಾರ ವಿಡಿಯೋ ಸಂವಾದ ನಡೆಸಿದ ಸಚಿವ ನಾಗೇಶ್‌ ಅವರು, ಮಳೆ, ಹವಾಮಾನ ಇಲಾಖೆ ಮುನ್ಸೂಚನೆ, ಪ್ರವಾಹ ಪರಿಸ್ಥಿತಿ, ಜಲಾಶಯದ ನೀರಿನ ಮಟ್ಟ, ಒಳ ಹರಿವು ಮತ್ತು ಹೊರ ಹರಿವು, ಮಳೆಯಿಂದ ಆಗಿರುವ ಹಾನಿ, ಕಾಳಜಿ ಕೇಂದ್ರಗಳ ಸ್ಥಾಪನೆ, ಅಲ್ಲಿರುವ ನಾಗರಿಕರಿಗೆ ನೀಡಿರುವ ಸೌಕರ್ಯಗಳ ಕುರಿತು ಮಾಹಿತಿ ಪಡೆದರು.

ಕಾಳಜಿ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ: ಮಳೆಯಿಂದ ಜಲಾವೃತವಾಗುವ ಪ್ರದೇಶಗಳು ಮತ್ತು ಮಣ್ಣು ಕುಸಿಯುವ ಸಾಧ್ಯತೆ ಇರುವ ಬೆಟ್ಟಪ್ರದೇಶಗಳಲ್ಲಿನ ಮನೆಗಳಲ್ಲಿ ವಾಸವಿರುವ ನಾಗರಿಕರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಳಜಿ ಕೇಂದ್ರಗಳಲ್ಲಿರುವ 600ಕ್ಕೂ ಹೆಚ್ಚು ನಾಗರಿಕರಿಗೆ ಅಗತ್ಯ ವಸ್ತುಗಳು, ಆಹಾರ, ವೈದ್ಯಕೀಯ ನೆರವು, ಚಿಕಿತ್ಸೆ ನೀಡಬೇಕು. ಕಾಳಜಿ ಕೇಂದ್ರದ ಬದಲು ತಮ್ಮ ಸಂಬಂಧಿಕರ ಮನೆಗಳಲ್ಲಿ ಇರುವವರಿಗೂ ಫುಡ್‌ಕಿಟ್‌ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾಗೇಶ್‌ ಸೂಚಿಸಿದರು.

Tap to resize

Latest Videos

ಕಾಂಗ್ರೆಸ್‌ಗೆ ಭಿಕ್ಷೆ ಬೇಡಿ ಶೂ, ಸಾಕ್ಸ್‌ ಕೊಡುವ ನೆಪ: ಸಚಿವ ನಾಗೇಶ್‌

ಮಣ್ಣು ಕುಸಿತ ಸಾಧ್ಯತೆ ಇರುವ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಗಾಳಿ, ಮಳೆಯಿಂದ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದು, ಕಂಬಗಳು ಮುರಿದು ಬಿದ್ದು ವಿದ್ಯುತ್‌ ಸಂಪರ್ಕ ಸ್ಥಗಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ತ್ವರಿತವಾಗಿ ವಿದ್ಯುತ್‌ ಕಂಬಗಳನ್ನು ಹೊಸದಾಗಿ ಅಳವಡಿಸುವ ಮೂಲಕ ಆದಷ್ಟುಬೇಗ ವಿದ್ಯುತ್‌ ಸಂಪರ್ಕ ಮರು ಸ್ಥಾಪಿಸಬೇಕು ಎಂದು ಸಚಿವರು ಹೇಳಿದರು. ಮಳೆಯಿಂದ ಬಿದ್ದಿರುವ, ಭಾಗಶಃ ಹಾನಿಯಾಗಿರುವ ಮನೆಗಳ ಮಾಲಕರಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು. 

ಹೆಚ್ಚಿನ ಹಾನಿ ಸಂಭವಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಸಚಿವರು ಸೂಚನೆ ನೀಡಿದರು. ಮಾಧ್ಯಮಗಳ ಮೂಲಕ ಮಾಹಿತಿ ನೀಡಿ: ಮಳೆ, ಗಾಳಿ, ಚಳಿಯಿಂದ ರೋಗಗಳು ಹರಡುವ ಸಾಧ್ಯತೆ ಇರುವ ಕಾರಣ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸೆ ನೀಡಬೇಕು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಾಗರಿಕರಿಗೆ ಮಾಧ್ಯಮಗಳು, ಜಾಲತಾಣಗಳು ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಮಾಹಿತಿ ನೀಡುವಂತೆ ಸಚಿವ ನಾಗೇಶ್‌ ಅವರು ಸೂಚಿಸಿದರು. ಶನಿವಾರ ಸಂತೆಯಲ್ಲಿ ಮನೆ ಕುಸಿದು ಬಿದ್ದು ಗಾಯಗೊಂಡಿದ್ದ ವಸಂತಮ್ಮ ಎಂಬ ಮಹಿಳೆ ಮೃತಪಟ್ಟಿದ್ದು, ಕುಟುಂಬ ಸದಸ್ಯರಿಗೆ ತ್ವರಿತವಾಗಿ ಪರಿಹಾರ ವಿತರಿಸುವಂತೆ ಸಚಿವರು ಸೂಚಿಸಿದರು.

ಮಾಹಿತಿ ನೀಡಿದ ಡಿಸಿ: ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ 131 ಕುಟುಂಬಗಳ 466 ಮಂದಿ, ಕೆದಮುಳ್ಳೂರು ಶಾಲೆಯಲ್ಲಿ 17 ಕುಟುಂಬಗಳ 43 ಮಂದಿ, ಮಡಿಕೇರಿಯ ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ 6 ಕುಟುಂಬಗಳ 19 ಮಂದಿ, ಚೆಟ್ಟಳ್ಳಿ ಸುಂಟಿಕೊಪ್ಪ ಶಾಲೆಯಲ್ಲಿ 7 ಕುಟುಂಬಗಳ 28 ಮಂದಿ, ಪೊನ್ನಂಪೇಟೆಯ ಬಲ್ಯಮಂಡೂರು ಅಂಗನವಾಡಿ ಕೇಂದ್ರದಲ್ಲಿ 8 ಮಂದಿ ಮತ್ತು ಬೇತ್ರಿ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಒಟ್ಟು 6 ಕಾಳಜಿ ಕೇಂದ್ರದಲ್ಲಿ 162 ಕುಟುಂಬಗಳ 564 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. 

1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್‌

ಕಾಳಜಿ ಕೇಂದ್ರದಲ್ಲಿರುವವರಿಗೆ ಮುಖ್ಯಮಂತ್ರಿ ಅವರ ಸೂಚನೆಯಂತೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ ಎಂದರು. ರಸ್ತೆ, ಸೇತುವೆ, ವಿದ್ಯುತ್‌ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಬರೆ ಕುಸಿತ, ಮರಗಳ ತೆರವು ಕಾರ್ಯಾಚರಣೆಗಳ ಜಿಲ್ಲಾಧಿಕಾರಿ ಅವರು ವಿವರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ಎನ್‌ಡಿಆರ್‌ಎಫ್‌ ತಂಡದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಸಿಇಒ ಭಂವರ್‌ ಸಿಂಗ್‌ ಮೀನಾಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಕುರಿತು ಮಾಹಿತಿ ನೀಡಿದರು. ವಿಡಿಯೋ ಸಂವಾದದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

click me!