ಎಲ್ಲರೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಡಾ। ಬಿ.ಆರ್. ಅಂಬೇಡ್ಕರ್ 67ನೇ ಮಹಾಪರಿನಿರ್ವಾಣದ ಅಂಗವಾಗಿ ವಿಧಾನಸೌಧ ಎದುರಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬೆಂಗಳೂರು (ಡಿ.07): ಎಲ್ಲರೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಡಾ। ಬಿ.ಆರ್. ಅಂಬೇಡ್ಕರ್ 67ನೇ ಮಹಾಪರಿನಿರ್ವಾಣದ ಅಂಗವಾಗಿ ವಿಧಾನಸೌಧ ಎದುರಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಅದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ. ಅಂಬೇಡ್ಕರ್ ಅವರು ಇನ್ನೂ ಕೆಲವು ವರ್ಷಗಳು ಬದುಕಿರಬೇಕಿತ್ತು. ಸಮಾನತೆಯ ಪರವಾಗಿ ಇನ್ನಷ್ಟು ಹೋರಾಟಗಳಾಗುತ್ತಿತ್ತು. ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿತ್ತು’ ಎಂದರು.
‘ಸಂವಿಧಾನದ ಕರ್ತೃ ಅಂಬೇಡ್ಕರ್ ಅವರು ದೇಶದ ಸಂವಿಧಾನವನ್ನು ಬಹಳ ಶ್ರಮ ವಹಿಸಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತದ ಸಾಮಾಜಿಕ, ರಾಜಕೀಯ ವ್ಯವಸ್ಥೆಗೆ ಎಂತಹ ಸಂವಿಧಾನ ಬೇಕು ಎಂದು ಚಿಂತಿಸಿ ಸಂವಿಧಾನ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಹಕ್ಕು, ಅಸಮಾನತೆಯನ್ನು ತೊಡೆದುಹಾಕುವ ಅಂಶ ಜಗತ್ತಿನ ಯಾವ ಸಂವಿಧಾನದಲ್ಲಿಯೂ ನೋಡಲು ಸಾಧ್ಯವಿಲ್ಲ. ಎಲ್ಲಾ ಜಾತಿ, ವರ್ಗ ಮತ್ತು ಬಡವರಿಗೆ ನ್ಯಾಯ ದೊರೆತಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರಿಸಿದ ಅಂಶಗಳೇ ಕಾರಣ’ ಎಂದು ಹೇಳಿದರು.
‘ಕಟ್ಟ ಕಡೆಯ ಮನುಷ್ಯನಿಗೂ, ಶ್ರೀಮಂತರಿಗೂ ಒಂದೇ ಕಾನೂನು. ಅದಕ್ಕೆ 14ನೇ ಪರಿಚ್ಛೇದದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಕಾನೂನಿನ ರಕ್ಷಣೆಯಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ದೇಶದ ಆಸ್ತಿ ಸಮಾನವಾಗಿ ಹಂಚಿಕೆಯಾಗಬೇಕು. ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಪ್ರಜಾಪ್ರಭುತ್ವ ಉಳಿಯುವುದು ಕಷ್ಟ ಎಂದು ಅಧಿಕಾರ ಮತ್ತು ಆಸ್ತಿ ಹಂಚಿಕೆಯಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದರು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ 24 ಸ್ಥಳಗಳಲ್ಲಿ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ
‘ದೇಶಕ್ಕೆ ದೊರೆತ ಸ್ವಾತಂತ್ರ್ಯ ಯಶಸ್ವಿಯಾಗಲು ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿರಬೇಕು. ಇಲ್ಲವಾದರೆ ಅಸಮಾನತೆಯಿಂದ ನೊಂದ ಜನ ರಾಜಕೀಯ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದೂ ಹೇಳಿದ್ದರು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಎಷ್ಟು ನೆನೆದರೂ, ಎಷ್ಟು ಗೌರವ ಸಲ್ಲಿಸಿದರೂ ಕಡಿಮೆ’ ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಎಚ್.ಆಂಜನೇಯ ಉಪಸ್ಥಿತರಿದ್ದರು.