ದಾವಣಗೆರೆಯ ಪುಟ್ಟ ಹಳ್ಳಿಯಿಂದ ಬಂದು 78 ಟೀ ಅಂಗಡಿಗಳ ಮಾಲೀಕನಾದ ಕನ್ನಡಿಗ! ವರ್ಷಕ್ಕೆ 30 ಕೋಟಿ ರೂ. ವಹಿವಾಟು!

Published : Nov 03, 2026, 05:25 PM IST
Malgudi Amruth Chaha Success Story

ಸಾರಾಂಶ

ದಾವಣಗೆರೆ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದ ಶಿವರಾಜ್ ಕುಮಾರ್ ಕೊರಿಯರ್ ಬಾಯ್, ಪತ್ರಿಕೆ ವಿತರಕ ಹಾಗೂ ಹೋಟೆಲ್ ಕೆಲಸ ಮಾಡಿದ್ದರು. ಟೊಯೋಟಾದಲ್ಲಿ 12 ವರ್ಷ ಅನುಭವ ಪಡೆದ ಬಳಿಕ ಮಾಲ್ಗುಡಿ ಅಮೃತ್ ಚಹಾ ಆರಂಭಿಸಿದರು. ಇಂದು ಕರ್ನಾಟಕದಲ್ಲಿ 78 ಔಟ್‌ಲೆಟ್‌ಗಳು ಮತ್ತು ಸುಮಾರು 30 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಸಂಸ್ಥೆಯಾಗಿ ಬೆಳೆದಿದೆ.

ಕೊರಿಯರ್ ಬಾಯ್‌ನಿಂದ 78 ಟೀ ಔಟ್‌ಲೆಟ್‌ಗಳ ಮಾಲೀಕನಾದ ಶಿವರಾಜ್ ಕುಮಾರ್; ಇದು ಮಾಲ್ಗುಡಿ ಅಮೃತ್ ಚಹಾ ಯಶೋಗಾಥೆ!

ಬಡತನ, ಓದು ಅರ್ಧಕ್ಕೆ ನಿಂತ ಪರಿಸ್ಥಿತಿ, ಜೀವನ ಸಾಗಿಸಲು ಹಲವು ಸಣ್ಣಪುಟ್ಟ ಕೆಲಸಗಳು. ಇಷ್ಟೆಲ್ಲ ಸವಾಲುಗಳ ನಡುವೆಯೂ ತಮ್ಮ ಕನಸನ್ನು ಕೈಬಿಡದೆ ಇಂದು ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಟೀ ಫ್ರಾಂಚೈಸಿ ಉದ್ಯಮಗಳಲ್ಲಿ ಒಂದನ್ನು ಕಟ್ಟಿರುವ ವ್ಯಕ್ತಿ ಶಿವರಾಜ್ ಕುಮಾರ್. ಅವರೇ ‘ಮಾಲ್ಗುಡಿ ಅಮೃತ್ ಚಹಾ’ ಸಂಸ್ಥೆಯ ಸ್ಥಾಪಕರು. ಸಾಮಾನ್ಯ ಹಳ್ಳಿಯ ಹುಡುಗನೊಬ್ಬ ಉದ್ಯಮಿಯಾಗಿ ಬೆಳೆದಿರುವ ಈ ಪಯಣ ನಿಜಕ್ಕೂ ಸ್ಫೂರ್ತಿದಾಯಕ.

ಬಡತನದ ನಡುವೆ ಹಲವು ಕೆಲಸ ಮಾಡಿದ ಹುಡುಗ

ದಾವಣಗೆರೆ ಜಿಲ್ಲೆಯ ನ್ಯಾಮತಿ ಸಮೀಪದ ಸಣ್ಣ ಹಳ್ಳಿಯಲ್ಲಿ ಜನಿಸಿದ ಶಿವರಾಜ್ ಕುಮಾರ್ ಬಾಲ್ಯದಿಂದಲೇ ಬಡತನವನ್ನು ಎದುರಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಜೀವನ ಸಾಗಿಸಲು ಕೊರಿಯರ್ ಬಾಯ್, ಪತ್ರಿಕೆ ವಿತರಕ ಹಾಗೂ ಸಣ್ಣ ಹೋಟೆಲ್‌ನಲ್ಲಿ ಅಡುಗೆ ಕೆಲಸ ಸೇರಿದಂತೆ ಹಲವು ಕೆಲಸಗಳನ್ನು ಮಾಡಿದರು.

ಆದರೆ ಅವರಲ್ಲಿ ಒಂದು ಗುಣ ಮಾತ್ರ ಸದಾ ಇತ್ತು. ಅದು ಕೆಲಸದಲ್ಲಿ ಗುಣಮಟ್ಟಕ್ಕೆ ನೀಡುತ್ತಿದ್ದ ಮಹತ್ವ.

ಟೊಯೋಟಾದಲ್ಲಿ 12 ವರ್ಷಗಳ ಅನುಭವ

ಜಪಾನಿನ ಕೆಲಸದ ಶಿಸ್ತನ್ನು ಕಲಿತರು

ಐಟಿಐ ಕೋರ್ಸ್ ಮಾಡಿ ಬೆಂಗಳೂರಿನ ಟೊಯೋಟಾ ಕಾರ್ಖಾನೆಯಲ್ಲಿ ಕೆಲಸ ಪಡೆಯುವ ಅವಕಾಶವನ್ನು ಬಳಸಿಕೊಂಡ ಶಿವರಾಜ್, ಸುಮಾರು 12 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಸಾಮಾನ್ಯ ಅಸೆಂಬ್ಲಿ ವಿಭಾಗದಿಂದ ಐಷಾರಾಮಿ ಕಾರುಗಳ ತಯಾರಿಕೆಯವರೆಗೂ ಕೆಲಸ ಮಾಡುವ ಅನುಭವ ಪಡೆದರು.

ಜಪಾನಿನ ಕಂಪನಿಗಳಲ್ಲಿ ಪಾಲಿಸುವ ಸಮಯಪಾಲನೆ, ಶಿಸ್ತು, ಗುಣಮಟ್ಟ ಮತ್ತು ಕೆಲಸದ ವ್ಯವಸ್ಥಿತ ಕ್ರಮಗಳನ್ನು ಹತ್ತಿರದಿಂದ ಕಲಿತರು. ಮುಂದೆ ಸ್ವಂತ ಉದ್ಯಮ ಆರಂಭಿಸಿದಾಗ ಇದೇ ಅನುಭವ ಅವರಿಗೆ ಬಲವಾಯಿತು.

ಕೊರೊನಾ ಸಮಯದಲ್ಲಿ ಆರಂಭವಾದ ಮಲ್ಗುಡಿ ಅಮೃತ್ ಚಹಾ

ಕೊರೊನಾ ಸಮಯದಲ್ಲಿ ಸ್ವಂತ ಉದ್ಯಮ ಆರಂಭಿಸಲು ನಿರ್ಧರಿಸಿದ ಶಿವರಾಜ್, ಮೊದಲು ಒಂದು ಸಣ್ಣ ಟೀ ಅಂಗಡಿ ತೆರೆದರು. ಚಹಾವನ್ನು ಜನರು ದಿನಕ್ಕೆ ಕನಿಷ್ಠ ಎರಡು ಬಾರಿ ಕುಡಿಯುತ್ತಾರೆ ಎಂಬ ಸರಳ ಆಲೋಚನೆ ಅವರಲ್ಲಿತ್ತು. ಆದರೆ ಸಾಮಾನ್ಯ ಟೀ ಅಂಗಡಿಯಂತೆ ಇರಬಾರದು ಎಂಬ ಸ್ಪಷ್ಟ ಗುರಿಯೂ ಇತ್ತು.

ಡಾರ್ಜಿಲಿಂಗ್ ಮತ್ತು ಭೂತಾನ್‌ನ ಚಹಾ ತೋಟಗಳಿಂದ ಉತ್ತಮ ಗುಣಮಟ್ಟದ ಚಹಾ ಎಲೆಗಳನ್ನು ನೇರವಾಗಿ ತರಿಸುವತ್ತ ಗಮನಹರಿಸಿದರು. ರಾಸಾಯನಿಕಗಳು, ಪ್ರಿಸರ್ವೇಟಿವ್‌ಗಳು, ಕೃತಕ ಬಣ್ಣ ಮತ್ತು ಅನಗತ್ಯ ಸೇರ್ಪಡೆಗಳಿಲ್ಲದ ಚಹಾ ನೀಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಖರೀದಿಯಿಂದ ಹಿಡಿದು ಗ್ರಾಹಕರ ಕೈಗೆ ತಲುಪುವವರೆಗೂ ಗುಣಮಟ್ಟ ಕಾಪಾಡಲು ವ್ಯವಸ್ಥೆ ರೂಪಿಸಿದರು.

78 ಔಟ್‌ಲೆಟ್‌ಗಳು, 30 ಕೋಟಿ ವಹಿವಾಟು!

ಒಂದು ಸಣ್ಣ ಅಂಗಡಿಯಿಂದ ಆರಂಭವಾದ ಮಾಲ್ಗುಡಿ ಅಮೃತ್ ಚಹಾ ಇಂದು ಫ್ರಾಂಚೈಸಿ ಮಾದರಿಯಲ್ಲಿ ಕರ್ನಾಟಕದಾದ್ಯಂತ 78 ಔಟ್‌ಲೆಟ್‌ಗಳನ್ನು ಹೊಂದಿದೆ. ವಾರ್ಷಿಕ ಸುಮಾರು 30 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ಸಂಸ್ಥೆಯ ಕುರಿತ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.

ಶಿವರಾಜ್ ಅವರ ಯಶಸ್ಸಿನ ಹಿಂದೆ ದೊಡ್ಡ ಹೂಡಿಕೆ ಅಥವಾ ಉದ್ಯಮದ ಹಿನ್ನೆಲೆಗಿಂತ ಶಿಸ್ತು, ಗುಣಮಟ್ಟ ಮತ್ತು ನಿರಂತರ ಪ್ರಯತ್ನಗಳಿವೆ. ಫ್ರಾಂಚೈಸಿ ಪಾಲುದಾರರು ಬೆಳೆಯಲು ಸಹಾಯ ಮಾಡುವುದಕ್ಕೂ ಅವರು ಒತ್ತು ನೀಡುತ್ತಿದ್ದಾರೆ.

ಸಣ್ಣ ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬರು ತಮ್ಮ ಅನುಭವ ಮತ್ತು ಗುಣಮಟ್ಟದ ಮೇಲಿನ ನಂಬಿಕೆಯಿಂದ ಉದ್ಯಮ ಕಟ್ಟಬಹುದು ಎಂಬುದಕ್ಕೆ ಶಿವರಾಜ್ ಕುಮಾರ್ ಅವರ ಪಯಣ ಉತ್ತಮ ಉದಾಹರಣೆ. ಸೀಮಿತ ಬಂಡವಾಳದಲ್ಲಿ ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಈ ಕಥೆ ಹೊಸ ಭರವಸೆ ನೀಡುತ್ತದೆ.

PREV
Read more Articles on
click me!

Recommended Stories

Viral: ಕನ್ನಡ ನೆಲದ ಸೊಗಡು, ಡಾ.ರಾಜ್‌ ಹಾಡು: ಸಿದ್ದಿ ಜನಾಂಗದ ಯುವಕರ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಫಿದಾ!
20 ವರ್ಷ ಮಕ್ಕಳಂತೆ ಸಾಕಿದ್ದ 500 ಅಡಿಕೆ ಮರಗಳ ಹನನ; ಬಡರೈತ ಕಾಂಗ್ರೆಸ್ ಕಾರ್ಯಕರ್ತನೆಂದೂ ನೋಡದ ಸರ್ಕಾರ!