ಹಿರಿಯ ಸ್ವಾತಂತ್ರ್ಯ ಸೇನಾನಿ ನಿಧನರಾಗಿದ್ದಾರೆ, ಕೊನೆಗೂ ಈಡೇರದ ಆಸೆಯೊಂದಿಗೆ ಕೊನೆಯುಸಿರೆಳೆದಿದ್ದಾರೆ
ಬಂಟ್ವಾಳ (ನ.04): ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮ ರಾವ್ (97) ಮಂಗಳವಾರ ಬೆಳಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.
ಮೂಲತಃ ಬಿ.ಸಿ.ರೋಡಿನವರಾದ ಅವರು, ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಅವರು ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನವರು. ಕಲಿತದ್ದು 7ನೇ ತರಗತಿ. ಆದರೆ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಪಂಚಭಾಷೆ ಬಲ್ಲವರು.
ಗಂಗಾವತಿ: ಸ್ವಾತಂತ್ರ್ಯ ಹೋರಾಟಗಾರ ರಾಮಾಚಾರ ಇನ್ನಿಲ್ಲ
1923ರಲ್ಲಿ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದಲ್ಲಿ ಜನಿಸಿದ ಶ್ಯಾಮರಾಯ ಆಚಾರ್ಯ, ಎಂ.ಡಿ.ಶ್ಯಾಮರಾವ್ ಎಂದೇ ಪ್ರಸಿದ್ಧರು. ಅವರು 1942ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಅಂದಿನ ಕಾಂಗ್ರೆಸ್ ಸೇವಾದಳಕ್ಕೆ ಸೇರಿಕೊಂಡು ಗುಪ್ತವಾಗಿ ವಿವಿಧೆಡೆ ನಡೆಯುವ ಚಳವಳಿಗಳ ಆಯೋಜನೆಗಳಲ್ಲಿ ಸಹಾಯ ಮಾಡುವುದು, ಸಂದೇಶಗಳನ್ನು ರವಾನಿಸುವುದು, ಹೀಗೆ ಯುವಕನಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಸಮಯದಲ್ಲಿ ಅನೇಕ ಮಹನೀಯರ ಒಡನಾಟ ಇವರಿಗೆ ದೊರಕಿತು.
1946ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ 2 ತಿಂಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಸ್ವಾತಂತ್ರ್ಯ ಸಿಕ್ಕ ನಂತರವೂ ತಮ್ಮ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡ ಅವರು, ಗಾಂಧೀಜಿಯವರು ಹಾಕಿಕ್ಕೊಟ್ಟರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಸ್ವಂತವಾಗಿ ಹಿಂದಿ ಕಲಿತು, ಹಿಂದಿಯನ್ನು ದೇಶದ ಸಂಪರ್ಕ ಭಾಷೆ ಮಾಡುವ ಗಾಂಧೀಜಿಯವರ ಕನಸಿನಂತೆ, ಶಿವಮೊಗ್ಗದ ಗಾಂಧಿ ಮಂದಿರದಲ್ಲಿ ಸಾವಿರಾರು ಜನರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೂಲಕ ಯಾವುದೇ ಶುಲ್ಕವಿಲ್ಲದೇ ಹಿಂದಿ ಪಾಠ ಮಾಡಿದರು. ಅವರು ಪತ್ನಿ ರಾಜೀವಿ, ಪುತ್ರ ಸತೀಶ್ ಹಾಗೂ ಐದು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಕಲ್ಲಡ್ಕದ ರುದ್ರಭೂಮಿಯಲ್ಲಿ ನಡೆಯಿತು.
ಈಡೇರದ ಚಹಾಕೂಟ ಕನಸು: ಬಂಟ್ವಾಳದ ಹಿರಿಯ ಜೀವ ಎಂ.ಡಿ.ಶ್ಯಾಮರಾವ್, ರಾಷ್ಟ್ರಪತಿಗಳ ಚಹಾಕೂಟದಲ್ಲಿ ಕನಸು ಕೊನೆಗೂ ಈಡೇರಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯ ಅಂಗವಾಗಿ ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ರಾಷ್ಟ್ರಪತಿಗಳ ಚಹಾಕೂಟದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿಂದ, ಕಳೆದ 4-5 ವರ್ಷಗಳಿಂದ ಎಂ.ಡಿ.ಶ್ಯಾಮರಾವ್ ಕಾಯುತ್ತಿದ್ದರು. ವಿವಿಧ ತಾಂತ್ರಿಕ ಕಾರಣಗಳಿಂದ ಅವರು ಆಸೆ ಮಾತ್ರ ಕೊನೆಗೂ ಈಡೇರಲೇ ಇಲ್ಲ.