ದೇಶದ ಎಲ್ಲೆಡೆ ಕೊರೋನಾ ಸೋಂಕಿನ ಹಾವಳಿಹೆಚ್ಚಾಗಿದ್ದು, ವೈರಸ್ ಮುಕ್ತಗೊಳಿಸುವ ಪಣ ತೊಟ್ಟು ಎಲ್ಲೆಡೆ ಕಾರ್ಯನಿರ್ವಹಿಸಲಾಗುತ್ತಿದೆ. ಇದೀಗ ಉಚಿತ ಔಷಧವನ್ನು ಹಂಚಲಾಗುತ್ತಿದೆ.
ತುಮಕೂರು(ಆ.19): ತುಮಕೂರು ನಗರವನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಫ್ರಂಟ್ ಲೈನ್ ಕೋವಿಡ್-19 ವಾರಿಯರ್ಸ್ ತಂಡದಿಂದ ಆಯುಕ್ತ ಇಲಾಖೆಯ ಸಹಯೋಗದೊಂದಿಗೆ ಉಚಿತ ಹೋಮಿಯೋಪತಿ ಮಾತ್ರೆಗಳನ್ನು ಪೌರ ಕಾರ್ಮಿಕರು ಸೇರಿದಂತೆ 15ನೇ ವಾರ್ಡ್ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ ಎಂದು ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ತಿಳಿಸಿದರು.
15ನೇ ವಾರ್ಡ್‌ನ ಸಿಎಸ್‌ಐ ಪಾರ್ಕ್ ಬಳಿ, ಉಚಿತ ಹೋಮಿಯೋಪತಿ ಮಾತ್ರೆ ಹಾಗೂ ಮಾಸ್ಕ್‌ಗಳನ್ನು ಪೌರ ಕಾರ್ಮಿಕರಿಗೆ ವಿತರಿಸಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ಕೊರೋನಾ ಹೆಚ್ಚಳವಾಗುತ್ತಿದ್ದು, 15ನೇ ವಾರ್ಡ್ ನಾಗರೀಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಂತೆ ಮನವಿ ಮಾಡಿದ ಅವರು ಫ್ರಂಟ್ ಲೈನ್ ಕೋವಿಡ್-19 ವಾರಿಯರ್ಸ್ ತಂಡದ ಸದಸ್ಯರು ಹಣ ಹಾಕಿ, ಉಚಿತವಾಗಿ ಸಾರ್ವಜನಿಕರಿಗೆ ಆಯುಷ್ ಇಲಾಖೆ ಮಾನ್ಯತೆ ಪಡೆದ ಮಾತ್ರೆಗಳನ್ನು ವಿತರಿಸುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ತುಮಕೂರು ನಗರವನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಫ್ರಂಟ್ ಲೈನ್ ಕೋವಿಡ್-19 ವಾರಿಯರ್ಸ್ ತಂಡದ ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಚಾಲನೆ ನೀಡಿದ್ದು, 15ನೇ ವಾರ್ಡ್‌ನ ನಾಗರೀಕರಿಗೆ ಹಾಗೂ ಪೌರಕಾರ್ಮಿಕರು ಹಾಗೂ ಕೊರೋನಾ ವಾರಿಯರ್ಸ್ಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲು ಮುಂದಾಗಿದೆ, ಇಂತಹ ಸಮಾಜೋಪಕಾರಿ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ನೀಡಬೇಕಿದೆ ಎಂದ ಅವರು, ರೋಗವನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪಾಲಿಕೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಒಂದೇದಿನ ಕೊರೋನಾಕ್ಕೆ 139 ಬಲಿ: 7665 ಕೇಸ್!...
ಈ ವೇಳೆ ಮಾತನಾಡಿದ ಫ್ರೆಂಟ್ ಲೈನ್ ಕೋವಿಡ್-19 ವಾರಿಯರ್ಸ್ ತಂಡದ ಸದಸ್ಯ ಫಣೀಂದ್ರ ಸುರಭಿ ಅವರು, ಡಾ.ಚಂದ್ರಮಧುಸೂಧನ್ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ನಗರವನ್ನು ಕೋವಿಡ್ ಮುಕ್ತಗೊಳಿಸುವ ಉದ್ದೇಶದಿಂದ ತಂಡದ ಸದಸ್ಯರೆಲ್ಲ ಸೇರಿ ಹಣ ಹಾಕಿ, 2.50 ಲಕ್ಷ ಮಾತ್ರೆಗಳನ್ನು ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್‌ಗಳಲ್ಲಿಯೂ ಈ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲಾಗುವುದು ಎಂದು ಹೇಳಿದರು.
ಕೇಂದ್ರದ ಆಯುಷ್ ಇಲಾಖೆ ಒಪ್ಪಿರುವ ಆರ್ಸಿನಂ ಅಲ್ಬಂ 30ಸಿ ಮಾತ್ರೆಗಳನ್ನು 15 ವರ್ಷಕ್ಕಿಂತ ಕೆಳಗಿನವರು ಸತತ ಮೂರು ದಿನ 6 ಮಾತ್ರೆಗಳನ್ನು, 15 ವರ್ಷ ಮೇಲ್ಪಟ್ಟವರು ಸತತ ಮೂರು ದಿನ 12 ಮಾತ್ರೆಗಳನ್ನು ಸೇವಿಸಿದರೆ ಅವರಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಈ ಮೂಲಕ ಕೊರೋನಾವನ್ನು ದೂರ ಮಾಡಬಹುದಾಗಿದ್ದು, ಫ್ರೆಂಟ್ ಲೈನ್ ಕೋವಿಡ್-19 ವಾರಿಯರ್ಸ್ ತಂಡ ಈ ಕಾರ್ಯಕ್ಕೆ ಪಾಲಿಕೆ ಸದಸ್ಯರಾದ ಗಿರಿಜಾಧನಿಯಾಕುಮಾರ್ ಅವರು ಉತ್ತಮ ಸಹಕಾರ ನೀಡಿದ್ದು, ಅವಶ್ಯಕತೆ ಇದ್ದರೆ ಇನ್ನು ಹೆಚ್ಚಿನ ಮಾತ್ರೆಗಳನ್ನು ತರಿಸಿ ಜನರಿಗೆ ಉಚಿತವಾಗಿ ಹಂಚಲಾಗುವುದು ಎಂದರು.
ಕೊರೋನಾ ವಿರುದ್ಧ ಹೊರಾಟ: ಟಾಸ್ಕ್ ಫೋರ್ಸ್ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು...
ಫ್ರೆಂಟ್ ಲೈನ್ ಕೋವಿಡ್-19 ವಾರಿಯರ್ಸ್ ತಂಡದಲ್ಲಿ ಎಸ್.ಪಿ.ಚಿದಾನಂದ್, ಜೆ.ಎಸ್.ಅನಿಲ್‌ಕುಮಾರ್, ಎಸ್.ಪಿ.ಶಿವಕುಮಾರ್, ಫೈರೋಜ್‌ಖಾನ್, ಹನುಮಂತರಾವ್, ದಿಲೀಪ್‌ಕುಮಾರ್ ಜೈನ್, ಸೈಯದ್ ರಿಜ್ವಾನ್‌ಉಲ್ಲಾ, ಎಂ.ಧರ್ಮರಾಜ, ನವೀನ್ ಅವರು ಸ್ವಯಂ ಪ್ರೇರಿತರಾಗಿ ಉಚಿತವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲು ಮುಂದಾಗಿದ್ದಾರೆ. ಈ ರೋಗನಿರೋಧಕ ಮಾತ್ರೆಗಳನ್ನು 15ನೇ ವಾರ್ಡ್‌ನ ನಂದಿನಿ ಬೂತ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ವೇಳೆ ನಂದಿನಿ ಪ್ರಭಾಕರ್, ಪಾಲಿಕೆ ಸಿಬ್ಬಂದಿ ಚಿಕ್ಕಗಂಗಯ್ಯ ಸೇರಿ ಪಾಲಿಕೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ನಾಗರಿಕರು, ಪೌರಕಾರ್ಮಿಕರು ಹಾಗೂ ಕೊರೋನಾ ವಾರಿಯರ್ಸ್ಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲಾಗುತ್ತಿದೆ. ಇದರಿಂದ ಜಿಲ್ಲೆ ಕೊರೋನಾ ಮುಕ್ತವಾಗಲು ಸಾಧ್ಯ. ಸೋಂಕು ತಡೆಯಲು ಜಿಲ್ಲಾಡಳಿತ ಹಾಗೂ ಪಾಲಿಕೆಯ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು.
ಗಿರಿಜಾ ಧನಿಯಾಕುಮಾರ್, ಪಾಲಿಕೆ ಸದಸ್ಯೆ