ರಾಜ್ಯೋತ್ಸವ ಪ್ರಶಸ್ತಿ ಹಣದಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆ..!

Published : Jan 13, 2024, 08:28 AM IST
ರಾಜ್ಯೋತ್ಸವ ಪ್ರಶಸ್ತಿ ಹಣದಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆ..!

ಸಾರಾಂಶ

ಅಪಘಾತಗಳಂಥ ಸಂದರ್ಭದಲ್ಲಿ ಕರೆ ಮಾಡಿದ ತಕ್ಷಣ ತಮ್ಮದೇ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುತ್ತಿದ್ದ ಹಸನಬ್ಬ ಅವರು ಈಗ ಇದಕ್ಕೆಂದೇ ಸ್ವಂತ ಹಣದಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆ ಒದಗಿಸಲು ಮುಂದಾಗಿದ್ದಾರೆ.

ಮಂಗಳೂರು(ಜ.13):  ಚಾರ್ಮಾಡಿ ಘಾಟಿಯಲ್ಲಿ ಅಪಘಾತಗಳಾದಾಗ ಗಾಯಾಳುಗಳ ಪಾಲಿನ ಆಪದ್ಭಾಂಧವ, ಜೀವರಕ್ಷಕ ಎಂದೇ ಕರೆಯಲ್ಪಡುವ ಹಸನಬ್ಬ ಇದೀಗ ಮತ್ತೊಂದು ಸಾಮಾಜಿಕ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಅಪಘಾತಗಳಂಥ ಸಂದರ್ಭದಲ್ಲಿ ಕರೆ ಮಾಡಿದ ತಕ್ಷಣ ತಮ್ಮದೇ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುತ್ತಿದ್ದ ಹಸನಬ್ಬ ಅವರು ಈಗ ಇದಕ್ಕೆಂದೇ ಸ್ವಂತ ಹಣದಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆ ಒದಗಿಸಲು ಮುಂದಾಗಿದ್ದಾರೆ.

ತಮ್ಮ ಸಮಾಜ ಸೇವೆ ಗುರುತಿಸಿ ರಾಜ್ಯ ಸರ್ಕಾರ ನೀಡಿದ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಸಿಕ್ಕ ಹಣದ ಜತೆಗೆ ಬ್ಯಾಂಕಿನಿಂದ ಒಂದಷ್ಟು ಸಾಲ ಮಾಡಿ ಅವರು 8 ಲಕ್ಷ ರು. ವೆಚ್ಚದಲ್ಲಿ ಈ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ.
‘ಹಸನಬ್ಬ ಚಾರಿಟೇಬಲ್‌ ಟ್ರಸ್ಟ್’ ಮೂಲಕ ಒದಗಿಸಲಾಗುತ್ತಿರುವ ಈ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಮಂಗಳೂರಿನ ಜಿಪಂ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ.

ಅಯೋಧ್ಯೆ-ಭಾರತೀಯರ ಅನೇಕ ವರ್ಷದ ಕನಸು ಸಾಕಾರ: ಡಾ.ವೀರೇಂದ್ರ ಹೆಗ್ಗಡೆ

ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‌, ಅತ್ಯಂತ ಕಡಿದಾದ ಹಾಗೂ ಅಪಾಯಕಾರಿ ಘಾಟ್ ರಸ್ತೆಯಾಗಿದೆ. ಘಟ್ಟದ ತಪ್ಪಲಿನ ಚಾರ್ಮಾಡಿಯಲ್ಲಿ ಸಣ್ಣ ಕ್ಯಾಂಟೀನ್‌ ನಡೆಸುತ್ತಿರುವ ಹಸನಬ್ಬ ಅವರು, 1980ರ ದಶಕದಿಂದ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿದಾಗ ತುರ್ತು ಸಹಾಯಕ್ಕೆ ಧಾವಿಸುವ ಮೂಲಕ ಎಲ್ಲರ ಆಪದ್ಭಾಂಧವ ಎನಿಸಿದ್ದಾರೆ.

ಅಪಘಾತವಾದಾಗ ಹೋಟೆಲ್‌ಗೆ ಬಂದು ಯಾರಾದರೂ ಸುದ್ದಿ ತಿಳಿಸಿದರೆ ತಕ್ಷಣ ಅಪಘಾತದ ಸ್ಥಳವನ್ನು ತಲುಪಿ ಅವರಿಗೆ ನೆರವಾಗುತ್ತಿದ್ದಾರೆ. ಜತೆಗೆ ತಮ್ಮದೇ ಯುವಕರ ತಂಡ ಕಟ್ಟಿಕೊಂಡು ರಾತ್ರಿ, ಹಗಲೆನ್ನದೆ, ಮಳೆ, ಗಾಳಿ ಎನ್ನದೆ ಗಾಯಾಳುಗಳ ರಕ್ಷಣೆಗೆ ಧಾವಿಸುತ್ತಿದ್ದಾರೆ.

ಹಸನಬ್ಬ ಅವರ ಸಮಾಜಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2023ನೇ ಸಾಲಿನಲ್ಲಿ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಶಸ್ತಿಯ ಜತೆಗೆ 5 ಲಕ್ಷ ರು. ಸಿಕ್ಕಿತ್ತು. ಇದೀಗ ಹಸನಬ್ಬ ಅವರು ಆ ಹಣದ ಜತೆಗೆ 3 ಲಕ್ಷ ರು. ಬ್ಯಾಂಕ್‌ ಸಾಲ ಪಡೆದು ಒಟ್ಟು 8 ಲಕ್ಷ ರು.ಗಳಲ್ಲಿ ಆ್ಯಂಬುಲೆನ್ಸ್‌ವೊಂದನ್ನು ಖರೀದಿಸಿದ್ದಾರೆ. ಚಾರ್ಮಾಡಿ ಘಾಟಿ ಹಾಗೂ ಅದರ ಸುತ್ತಮುತ್ತ ಸಂಭವಿಸುವ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಈ ಆ್ಯಂಬುಲೆನ್ಸ್‌ ಸೇವೆಯನ್ನು ಉಚಿತವಾಗಿ ನೀಡಲಿದ್ದಾರೆ.

PREV
Read more Articles on
click me!

Recommended Stories

ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!