ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಜೇನು ಕುರುಬ ಕುಟುಂಬದಲ್ಲಿ ಬೆಳಗಿದ ವಿದ್ಯುತ್ ದೀಪ

By Suvarna NewsFirst Published Jan 12, 2024, 9:34 PM IST
Highlights

ಪ್ರಧಾನ ಮಂತ್ರಿ ಜನಮನ್ ಯೋಜನೆ ಅಡಿಯಲ್ಲಿ ಕೊಡಗಿನ ನೂರಾರು ಆದಿವಾಸಿ ಜೇನುಕುರುಬ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಹೀಗಾಗಿ ಆದಿವಾಸಿ ಬುಡಕಟ್ಟು ಜೇನುಕುರುಬ ಕುಟುಂಬಗಳ ಮುಖದಲ್ಲಿ ಬೆಳಕಿನ ಆಶಾಕಿರಣವೇ ಮೂಡುತ್ತಿದೆ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.12): ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರು ದೇಶದಲ್ಲಿ ಇಂದಿಗೂ ಎಷ್ಟೋ ಸಾವಿರಾರು ಕುಟುಂಬಗಳಿಗೆ ಬೆಳಕೇ ಬಂದಿರಲಿಲ್ಲ. ಅದು ಕೊಡಗು ಜಿಲ್ಲೆಯೇನು ಹೊರತಾಗಿರಲಿಲ್ಲ. ಆದರೆ ಪ್ರಧಾನ ಮಂತ್ರಿ ಜನಮನ್ ಯೋಜನೆ ಅಡಿಯಲ್ಲಿ ಕೊಡಗಿನ ನೂರಾರು ಆದಿವಾಸಿ ಜೇನುಕುರುಬ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಹೀಗಾಗಿ ಆದಿವಾಸಿ ಬುಡಕಟ್ಟು ಜೇನುಕುರುಬ ಕುಟುಂಬಗಳ ಮುಖದಲ್ಲಿ ಬೆಳಕಿನ ಆಶಾಕಿರಣವೇ ಮೂಡುತ್ತಿದೆ.

ಕೊಡಗು ಜಿಲ್ಲೆಯಲ್ಲಿ 145 ಆದಿವಾಸಿ ಬುಡಕಟ್ಟು ಹಾಡಿಗಳಿವೆ. ಅವುಗಳಲ್ಲಿ 712 ಜೇನುಕುರುಬ ಕುಟುಂಬಗಳಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಅಂತ ಮನೆಗಳಿಗೆ ಪಿಎಂ ಜನಮನ್ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದ್ದೆ. ಈಗಾಗಲೇ 119 ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದ್ದು, ಜನವರಿ ತಿಂಗಳ ಅಂತ್ಯದ ಒಳಗಾಗಿ ಎಲ್ಲಾ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಇಲಾಖೆ ವಿದ್ಯುತ್ ಲೈನ್ಗಳನ್ನು ಎಳೆಯುತ್ತಿದೆ.

ಶೀಲ‌ ಶಂಕಿಸಿ ಪತ್ನಿ ಕೊಲೆ ಮಾಡಿದ ಗಂಡ, ಇಬ್ಬರು ಹೆಣ್ಣು ಮಕ್ಕಳು ಅನಾಥ

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದ ಜೇನುಕುರುಬ ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೊಡಗು ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಹೇಳಿದ್ದಾರೆ. ಆದರೆ 8 ಹಾಡಿಗಳು ರಕ್ಷಿತಾ ಅರಣ್ಯ ಪ್ರದೇಶಗಳ ಒಳಗೆ ಇರುವುದರಿಂದ ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಕಷ್ಟವಾಗುತ್ತಿದೆ.

ಅದಕ್ಕಾಗಿ ಅರಣ್ಯ ಇಲಾಖೆಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲಾಗಿದೆ. ಅದು ಕ್ಲಿಯರ್ ಆದ ಕೂಡಲೇ ಈ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದಿದ್ದಾರೆ. ಶುಕ್ರವಾರ ಕುಶಾಲನಗರ ತಾಲ್ಲೂಕಿನ ತ್ಯಾಗತ್ತೂರು ಬಳಿ ಇರುವ ತ್ಯಾಗತ್ತೂರು ಕಾಲೋನಿ ಹಾಡಿಯ 22 ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.

ವಿದ್ಯುತ್ ಸಂಪರ್ಕಗೊಳ್ಳುತ್ತಿದ್ದಂತೆ ಮನೆಯವರ ಮುಖದಲ್ಲಿ ಮದಹಾಸ ಮೂಡಿತ್ತು. ಕಣ್ಣುಗಳಲ್ಲಿ ಬೆಳಕಿನ ಕಿರಣಗಳು ಮೂಡಿ ಬಂದವು. ತಮ್ಮ ತಂದೆ, ತಾತನ ಕಾಲದಿಂದಲೂ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಕ್ಯಾಂಡಲ್, ಡೀಸೆಲ್ ದೀಪಗಳ ಬೆಳಕಿನಲ್ಲಿ ಬದುಕು ದೂಡುತ್ತಿದ್ದೆವು. ಕತ್ತಲೆ ಆವರಿಸುವ ಒಳಗಾಗಿ ಅಡುಗೆ ಮಾಡಿಕೊಂಡು ಊಟ ಮಾಡಬೇಕಾಗಿತ್ತು. ಕತ್ತಲೇ ಆವರಿಸುತ್ತಿದ್ದಂತೆ ಮಲಗಿ ಬಿಡಬೇಕಾಗಿತ್ತು.

ಬೆಂಗಳೂರು: ಬಾತ್‌ರೂಮ್‌ನಲ್ಲಿ ಗಂಡ ಸಾವು, ಪತ್ನಿಯ ಮೇಲೆ ಅನುಮಾನ

ವಿದ್ಯುತ್ ಸಂಪರ್ಕವೇ ಇಲ್ಲದೆ ತಮ್ಮ ಮಕ್ಕಳು ದೀಪದ ಬೆಳಕಿನಲ್ಲಿ ಓದಬೇಕಾಗಿತ್ತು ಎಂದು ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಆದಿವಾಸಿ ಜೇನುಕುರುಬ ಕುಟುಂಬದ ಭಾಗೀರತಿ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಕತ್ತಲೆ ಆಗುತ್ತಿದ್ದಂತೆ ನಾವು ಮನೆಯಿಂದ ಹೊರಗಡೆ ಓಡಾಡುವುದಕ್ಕೆ ಆಗುತ್ತಿರಲಿಲ್ಲ. ನಮ್ಮ ಭಾಗದಲ್ಲಿ ಆನೆಗಳ ಕಾಟ ತೀವ್ರವಾಗಿದ್ದು ಹಗಲು ಹೊತ್ತಿನಲ್ಲೇ ಗ್ರಾಮದೊಳಗೆ ಆನೆಗಳು ನುಗ್ಗುತ್ತವೆ. ಇನ್ನು ರಾತ್ರಿಯ ಸಮಯದಲ್ಲಂತು ನಮಗೆ ಮನೆಯಿಂದ ಹೊರಗೆ ಬಾರದ ಸ್ಥಿತಿ ಇತ್ತು.

ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಹೊಸ ಆಶಯ ಮೂಡಿಸಿದೆ ಎಂದು ಮತ್ತೊಬ್ಬ ಫಲಾನುಭವಿ ಜೇನುಕುರುಬ ಕುಟುಂಬದ ಮಹಿಳೆ ಭೋಜಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ವಿದ್ಯುತ್ ಬೆಳಕನ್ನೇ ಕಾಣದ ಜೇನುಕುರುಬ ಕುಟುಂಬಗಳಿಗೆ ಪ್ರಧಾನಮಂತ್ರಿ ಜನಮನ್ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಶ್ಲಾಘನೀಯ ವಿಷಯವೇ ಸರಿ.

click me!