ನಾಳೆ ಶಿಕಾರಿಪುರದಲ್ಲಿ ಭಾರತ್ ಜೋಡೋ ಯಾತ್ರೆ: ಶಿಕಾರಿಪುರದಿಂದಲೇ ರಣಕಹಳೆ: ಮಧು ಬಂಗಾರಪ್ಪ ಘೋಷಣೆ

Kannadaprabha News   | Kannada Prabha
Published : Sep 29, 2026, 01:15 PM IST
Madhu Bangarappa

ಸಾರಾಂಶ

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರಂದು ಶಿಕಾರಿಪುರದಲ್ಲಿ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಚಿವ ಮಧು ಬಂಗಾರಪ್ಪ ಈ ವಿಷಯ ತಿಳಿಸಿದ್ದು, ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಈ ಐತಿಹಾಸಿಕ ಕ್ಷಣವನ್ನು ಆಚರಿಸಲಾಗುತ್ತಿದೆ.

ಶಿಕಾರಿಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಗಳಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಇದೀಗ 4 ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಇದೇ 30 ರಂದು ಪುನಃ ತಾಲೂಕಿನಲ್ಲಿ ಯಾತ್ರೆ ಹಾಗೂ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸೋಮವಾರ ಪಟ್ಟಣದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷದ ಹಿಂದೆ ದೇಶದ ಚುನಾವಣಾ ವ್ಯವಸ್ಥೆ ಹಾಗೂ ಕೇಂದ್ರದ ಜನವಿರೋಧಿ ನೀತಿ ಖಂಡಿಸಿ ರಾಹುಲ್ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ಮೂಲಕ ರಾಜ್ಯವನ್ನು ಪ್ರವೇಶಿಸಿ ಇದೇ ಸೆ.30 ಕ್ಕೆ 4 ವರ್ಷ ಪೂರ್ಣಗೊಳ್ಳಲಿದೆ ಎಂದರು.

ಪಕ್ಷದ ಮುಖಂಡರ ಸಹಿತ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ದೊರಕಿಸಿಕೊಟ್ಟ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದೇಶ ಹಾಗೂ ರಾಜ್ಯದಲ್ಲಿ ಹೆಚ್ಚಿನ ಶಕ್ತಿ ಲಭಿಸಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ನಿರ್ದರಿಸಿದೆ. 4 ವರ್ಷದ ಸಂಭ್ರಮವನ್ನು ಶಿಕಾರಿಪುರದಲ್ಲಿ ಆಯೋಜಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಜಿಲ್ಲೆ ಹಾಗೂ ತಾಲೂಕಿನ ಪಕ್ಷದ ಮುಖಂಡರು ನಿರ್ಣಯಿಸಿದ್ದಾರೆ ಎಂದು ತಿಳಿಸಿದರು.

ಪಾದಯಾತ್ರೆಯು ಇದೇ 30 ರಂದು ಬೆಳಿಗ್ಗೆ 10 ಕ್ಕೆ ತಾಲೂಕಿನ ಕಿಟ್ಟದಹಳ್ಳಿಯಿಂದ ಆರಂಭಗೊಂಡು ಮಟ್ಟಿಕೋಟೆ, ಹೊಸನಗರ ಕ್ರಾಸ್, ನೆಲವಾಗಿಲು ಮೂಲಕ ಮಧ್ಯಾಹ್ನದ ವೇಳೆಗೆ ಪಟ್ಟಣ ತಲುಪಲಿದೆ. ನಂತರ ಹೊಸ ಸಂತೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಹಿತ ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರದ ಮಹಾದೇವಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಸಿ ಯೋಗೀಶ್, ಶಿಕಾರಿಪುರ ಬ್ಲಾಕ್ ಅಧ್ಯಕ್ಷ ಮಾಲತೇಶ್ ಭಂಡಾರಿ, ಶಿರಾಳಕೊಪ್ಪ ಬ್ಲಾಕ್ ಅಧ್ಯಕ್ಷ ಮಿತ್ರೇಶ್, ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅದ್ಯಕ್ಷ ನಾಗರಾಜಗೌಡ ಮುಖಂಡ ಕಲಗೋಡು ರತ್ನಾಕರ್,ಗೋಣಿ ಮಾಲತೇಶ್,ಶಿವರಾಂ ಪಾರಿವಾಳದ,ಎನ್.ವಿ ಈರೇಶ್, ಪುಷ್ಪಾ ಶಿವಕುಮಾರ್, ಉಳ್ಳಿ ದರ್ಶನ್,ರಾಘವೇಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಶಿಕಾರಿಪುರದಿಂದಲೇ ರಣಕಹಳೆ: ಮಧು ಘೋಷಣೆ

ಶಿವಮೊಗ್ಗ: ಶಿಕಾರಿಪುರ ನಮಗೆ ಮುಖ್ಯವಾಗಿದ್ದು, ಇಲ್ಲಿಂದಲೇ ರಣಕಹಳೆ ಮೊಳಗಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಪಾದಯಾತ್ರೆ ಸಂಬಂಧ ಪಕ್ಷದೊಳಗೆ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ರಾಜ್ಯದಲ್ಲಿ ಎರಡು ಕಡೆ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಚರ್ಚೆಯಾಗಿತ್ತು. ಹೀಗಾಗಿ ಶಿಕಾರಿಪುರದಿಂದಲೇ ರಣಕಹಳೆ ಮೊಳಗಿಸಲಾಗುವುದು ಎಂದರು.

ತಮ್ಮ ಕಾರ್ಯಕ್ರಮದ ದಿನವೇ ಬಿ.ವೈ. ವಿಜಯೇಂದ್ರ ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡಲೇ ಬೇಕು. ಬಿ.ಎಸ್. ಯಡಿಯೂರಪ್ಪ ಅವರು ಯಾವ ಕಾರಣಕ್ಕೆ ಜೈಲಿಗೆ ಹೋಗಿ ಬಂದಿದ್ದಾರೆ, ಪಾಪ ರೆಡ್ಡಿ ಅವರು ಜೈಲಿಗೆ ಹೋದರು ಅವರ ವಿರುದ್ಧ ವಿಜಯೇಂದ್ರ ಪಾದಯಾತ್ರೆ ಮಾಡುವುದು ಒಳ್ಳೆಯದು ಎಂದು ಕುಟುಕಿದರು.

ಹೇಗೆ ಗೆದ್ರಿ ಅನ್ನೋದು ಗೊತ್ತು:

ಸೊರಬದಲ್ಲಿ ಗೆದ್ದು ಬನ್ನಿ ಎಂದು ಅವರ ಸಹೋದರ ರಾಘವೇಂದ್ರ ಹೇಳುತ್ತಾರೆ. ತಾವು ಹೇಗೆ ಗೆದ್ದು ಬಂದಿದ್ದೀರಿ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿದೆ. ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಸಲ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ತಿರುಗೇಟು ನೀಡಿದರು.

ವಿಜಯೇಂದ್ರ ಅವರ ಬಳ್ಳಾರಿ ಪಾದಯಾತ್ರೆ ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ಮಾಡಿದ ಪಾದಯಾತ್ರೆ. ಒಂದು ದೇಶದಲ್ಲಿ ಎಂತಹ ದೊಡ್ಡ ಆತಂಕ ಎದುರಾಗಿದೆ. 13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು? ನಾಳೆ ನಿಮ್ಮ ಹೆಸರು ಕೂಡ ಡಿಲೀಟ್ ಆಗಬಹುದು. ಸತ್ಯ ಮಾತನಾಡಿ, ದೇಶ ಉಳಿಸಿ ಎಂದು ಪತ್ರಕರ್ತರಿಗೆ ಮನವಿ ಮಾಡಿದರು.

ಮುಖ್ಯ ಚುನಾವಣಾ ಆಯುಕ್ತ ರಾಜೀನಾಮೆ ನೀಡಲಿ:

ಜೆನ್-ಜಿ ಯುವಕರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಬೇಕು. ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ಮುಂದೆ ಎಲ್ಲರೂ ನಂಬಿಕೆ ಕಳೆದುಕೊಳ್ಳುವ ದಿನಗಳು ಬರಬಹುದು ಎಂಬ ಆತಂಕ ನಮಗಿದೆ. ಮುಂದೆ ಚುನಾವಣೆಗಳು ಹೇಗೆ ನಡೆಯುತ್ತವೆಯೋ ಎಂಬುದರ ಬಗ್ಗೆ ಆತಂಕವಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳುಗಳನ್ನು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಅವರು ನೀಡಿದ ಯಾವ ಭರವಸೆಯನ್ನು ಈಡೇರಿಸಿದ್ದಾರೆ? ಯುವಕರಿಗೆ ಉದ್ಯೋಗ ನೀಡಿದರೇ? ಎಲ್ಲಿ ಹೋಯಿತು ಆ ಭರವಸೆ? ಎಂದು ಪ್ರಶ್ನಿಸಿದರು.

PREV
Read more Articles on
click me!

Recommended Stories

ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನ 6ನೇ ಮಹಡಿ ಭಾರೀ ಮೊತ್ತಕ್ಕೆ ಬಾಡಿಗೆ; ಎಷ್ಟು ಗೊತ್ತಾ?
ಹೆಬ್ಬಾಳ ಕಿರು ಸುರಂಗ ಮಾರ್ಗ ವಿವಾದ: ಐಐಟಿ-ಬಾಂಬೆ ವರದಿಗೆ ಬೆಂಗಳೂರು ಐಐಎಸ್‌ಸಿ ಮತ್ತು ತಜ್ಞರ ತೀವ್ರ ಆಕ್ಷೇಪ