ಹೆಬ್ಬಾಳ ಕಿರು ಸುರಂಗ ಮಾರ್ಗ ವಿವಾದ: ಐಐಟಿ-ಬಾಂಬೆ ವರದಿಗೆ ಬೆಂಗಳೂರು ಐಐಎಸ್‌ಸಿ ಮತ್ತು ತಜ್ಞರ ತೀವ್ರ ಆಕ್ಷೇಪ

Published : Sep 29, 2026, 12:48 PM IST
Hebbal Short Tunnel

ಸಾರಾಂಶ

ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಸಂಚಾರ ದಟ್ಟಣೆ ನಿವಾರಣೆಗೆ ಪ್ರಸ್ತಾವಿಸಲಾದ ಕಿರು ಸುರಂಗ ಮತ್ತು ಎತ್ತರಿಸಿದ ಕಾರಿಡಾರ್ ಯೋಜನೆಗಳು ತಾಂತ್ರಿಕ ವಿವಾದಕ್ಕೆ ಸಿಲುಕಿವೆ. ಐಐಟಿ-ಬಾಂಬೆ ವರದಿಯು ಎತ್ತರಿಸಿದ ಕಾರಿಡಾರ್‌ಗೆ ಆದ್ಯತೆ ನೀಡಿದ್ದರೂ, ಇದರಲ್ಲಿ ಗಂಭೀರ ಲೋಪಗಳಿವೆ ಎಂದು ಐಐಎಸ್‌ಸಿ ತಜ್ಞರು ಆಕ್ಷೇಪಿಸಿದ್ದಾರೆ. ವಿರೋಧದ ನಡುವೆಯೂ ಬಿಡಿಎ ಎರಡೂ ಯೋಜನೆಗಳನ್ನು ಸಮರ್ಥಿಸಿಕೊಂಡು ಕಾಮಗಾರಿ ಆರಂಭಿಸಿದೆ.

ಬೆಂಗಳೂರು: ನಗರದ ಅತ್ಯಂತ ಪ್ರಮುಖ ಸಂಚಾರ ದಟ್ಟಣೆಯ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪ್ರಸ್ತಾವಿಸಲಾಗಿರುವ ಹೆಬ್ಬಾಳ 'ಕಿರು ಸುರಂಗ ಮಾರ್ಗ' ಹಾಗೂ 'ಎತ್ತರಿಸಿದ ಕಾರಿಡಾರ್‌' ಯೋಜನೆಗಳು ಇದೀಗ ತಾಂತ್ರಿಕ ವಿವಾದದ ಸುಳಿಯಲ್ಲಿ ಸಿಲುಕಿವೆ. ಮೇಕ್ರಿ ವೃತ್ತ ಮತ್ತು ಪಶುವೈದ್ಯಕೀಯ ಕಾಲೇಜಿನ ನಡುವೆ ಪ್ರಸ್ತಾವಿತ ಎಲಿವೇಟರ್ ಕಾರಿಡಾರ್ ನಿರ್ಮಾಣವು, ಪ್ರಸ್ತಾವಿತ ಹೆಬ್ಬಾಳ ಕಿರು ಸುರಂಗಕ್ಕಿಂತ ಹೆಚ್ಚಿನ ಸಂಚಾರ ಪ್ರಯೋಜನಗಳನ್ನು ನೀಡುತ್ತದೆ. ಹೀಗಾಗಿ, ಆರಂಭಿಕ ಹಂತದಲ್ಲಿ ಯಾವುದಾದರೂ ಒಂದೇ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾದರೆ ಎತ್ತರಿಸಿದ ಕಾರಿಡಾರ್‌ಗೆ ಆದ್ಯತೆ ನೀಡಬೇಕು ಎಂದು ಇತ್ತೀಚಿನ ಸಾರಿಗೆ ಮೈಕ್ರೋಸಿಮ್ಯುಲೇಶನ್ ಅಧ್ಯಯನ ವರದಿ ತಿಳಿಸಿದೆ.

ಇದರ ಜೊತೆಗೆ ಈ ವರದಿಯಲ್ಲಿ ಗಂಭೀರ ತಾಂತ್ರಿಕ ಲೋಪಗಳು, ಹಳೆಯ ದತ್ತಾಂಶ ಹಾಗೂ ವಿಧಾನದ ನ್ಯೂನತೆಗಳಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರು , ರಸ್ತೆ ಸಾರಿಗೆ ತಜ್ಞರು ಬಹಿರಂಗಪಡಿಸಿದ್ದಾರೆ.

ಐಐಟಿ-ಬಾಂಬೆ ವರದಿಯ ಪ್ರಮುಖ ಮುಖ್ಯಾಂಶಗಳು

ಹೆಬ್ಬಾಳ ಕಿರು ಸುರಂಗ ನಿರ್ಮಾಣದ ಗುತ್ತಿಗೆ ಪಡೆದಿರುವ 'ರಿತ್ವಿಕ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ನಿಯೋಜಿಸಿದಂತೆ, ಐಐಟಿ-ಬಾಂಬೆಯ ಪ್ರೊ. ಅರ್ಚಕ್ ಮಿತ್ತಲ್ ಅವರು 26 ಪುಟಗಳ ತಾಂತ್ರಿಕ ಅಧ್ಯಯನ ವರದಿಯನ್ನು ಸಿದ್ಧಪಡಿಸಿದ್ದಾರೆ. 'ಇಂಟಿಗ್ರೇಟೆಡ್ ಟ್ರಾಫಿಕ್ ಮೈಕ್ರೋಸಿಮ್ಯುಲೇಶನ್ ಸ್ಟಡಿ - ಬೆಂಗಳೂರು: ಹೆಬ್ಬಾಳ ಫ್ಲೈಓವರ್ & ಹೆಬ್ಬಾಳ ಕಿರು ಸುರಂಗ' ಎಂಬ ಶೀರ್ಷಿಕೆಯ ಈ ವರದಿಯು ಐಐಟಿ-ಬಾಂಬೆಯ ಅಧಿಕೃತ ವರದಿಯಲ್ಲ, ಬದಲಿಗೆ ವ್ಯಕ್ತಿಯೊಬ್ಬರ ವೈಯಕ್ತಿಕ ಅಭಿಪ್ರಾಯ ಎಂಬುದು ಈಗಿರುವ ಆರೋಪವಾಗಿದೆ.

ಮೆಖ್ರಿ ವೃತ್ತದಿಂದ ಪಶುವೈದ್ಯಕೀಯ ಕಾಲೇಜಿನವರೆಗೆ ಪ್ರಸ್ತಾವಿಸಲಾದ ಎತ್ತರಿಸಿದ ಕಾರಿಡಾರ್ 1.78 ಕಿ.ಮೀ ಉದ್ದದ 4-ಪಥಗಳ ರಸ್ತೆಯಾಗಿದ್ದು, 4 ಇಳಿಜಾರುಗಳನ್ನು ಒಳಗೊಂಡಿರಲಿದೆ. ಇನ್ನು ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ಹಾದುಹೋಗುವ ಕಿರು ಸುರಂಗವು 2.22 ಕಿ.ಮೀ ಉದ್ದದ 6-ಪಥಗಳ ಮಾರ್ಗವಾಗಿದೆ. ಅಧ್ಯಯನದ ಪ್ರಕಾರ, ಸುರಂಗ ಮಾರ್ಗವನ್ನು ಸಂಪೂರ್ಣವಾಗಿ ತಳ್ಳಿಹಾಕದಿದ್ದರೂ, ಅದನ್ನು ಹೆಬ್ಬಾಳದ ಸಂಚಾರ ಸಮಸ್ಯೆಗೆ ಏಕೈಕ ಪರಿಹಾರವೆಂದು ಪರಿಗಣಿಸಲಾಗುವುದಿಲ್ಲ.

ವಿವರವಾದ ಯೋಜನಾ ವರದಿಯಲ್ಲಿ (DPR) 'ಮೂಲ- ತಲುಪುವ ಸ್ಥಳದ ಸಮೀಕ್ಷೆ' ಇಲ್ಲದಿರುವುದು ಪ್ರಮುಖ ಮಿತಿಯಾಗಿದೆ. ಸುರಂಗ ಮಾರ್ಗದ ಯಶಸ್ಸು ಅಲ್ಲಿಗೆ ತಿರುಗುವ ವಾಹನ ಸವಾರರ ಸಂಖ್ಯೆಯನ್ನು ಆಧರಿಸಿರುವುದರಿಂದ, ನೈಜ ಒಡಿ ಸಮೀಕ್ಷೆ ನಡೆಸುವುದು ಅತ್ಯಗತ್ಯ ಎಂದು ವರದಿ ಶಿಫಾರಸು ಮಾಡಿದೆ.

ಐಐಎಸ್‌ಸಿ ಹಾಗೂ ಸಾರಿಗೆ ತಜ್ಞರ ತೀವ್ರ ಆಕ್ಷೇಪ

ಐಐಟಿ-ಬಾಂಬೆ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದ ಐಐಎಸ್‌ಸಿಯ 'ಸುಸ್ಥಿರ ಸಾರಿಗೆ ಪ್ರಯೋಗಾಲಯ'ದ ಸಂಚಾಲಕರಾದ ಪ್ರೊ. ಆಶಿಶ್ ವರ್ಮಾ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯದ (DULT) ಮಾಜಿ ಮುಖ್ಯ ತಾಂತ್ರಿಕ ಸಲಹೆಗಾರ ಸತ್ಯಜಿತ್ ಅರಿಕುಥರಾಮ್ ಅವರು ವರದಿಯಲ್ಲಿರುವ ಹಲವು ಲೋಪಗಳನ್ನು ಎತ್ತಿ ತೋರಿಸಿದ್ದಾರೆ,

ಆಯ್ಕೆಗಳ ಕೊರತೆ ಹಾಗೂ ಹಳೆಯ ದತ್ತಾಂಶ

ಅಧ್ಯಯನವು ಆರಂಭದಲ್ಲಿ ಪ್ರಸ್ತುತ ಸ್ಥಿತಿ, ಎತ್ತರಿಸಿದ ಕಾರಿಡಾರ್, ಭೂಗತ ಸುರಂಗ ಮತ್ತು ಸಂಯೋಜಿತ ಮಾದರಿ ಹೀಗೆ 4 ಸನ್ನಿವೇಶಗಳನ್ನು ಪರಿಶೀಲಿಸುವುದಾಗಿ ತಿಳಿಸಿತ್ತಾದರೂ, ಅಂತಿಮವಾಗಿ ಪ್ರಸ್ತುತ ಸ್ಥಿತಿ ಮತ್ತು ಸಂಯೋಜಿತ ಮಾದರಿಯನ್ನು ಮಾತ್ರ ಪರಿಗಣಿಸಿದೆ. ಅಲ್ಲದೆ, 2026ರ ಜನವರಿಯಲ್ಲಿ ಹೆಬ್ಬಾಳ ಫ್ಲೈಓವರ್‌ನಲ್ಲಿ ಹೊಸ ರ್ಯಾಂಪ್ ತೆರೆದ ನಂತರ ಬದಲಾದ ಸಂಚಾರ ಸ್ಥಿತಿಗತಿಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಸಂಚಾರ ವೇಗದ ವ್ಯತ್ಯಾಸ

2027ರ ಗರಿಷ್ಠ ಸಂಚಾರ ಸಮಯದಲ್ಲಿ ವಾಹನಗಳ ಸರಾಸರಿ ವೇಗವನ್ನು ಐಐಟಿ ವರದಿ 13.74 ಕಿ.ಮೀ/ಗಂಟೆ ಎಂದು ಅಂದಾಜಿಸಿದೆ. ಆದರೆ, ಮೂಲ ಡಿಪಿಆರ್‌ನಲ್ಲಿ ಈ ವೇಗ ಕೇವಲ 4.29 ಕಿ.ಮೀ/ಗಂಟೆ ಎಂದು ನಮೂದಿಸಲಾಗಿತ್ತು. ಇಂತಹ ವ್ಯತ್ಯಾಸಗಳಿಗೆ ಸ್ಪಷ್ಟ ವಿವರಣೆಯಿಲ್ಲ.

ಸಂಪರ್ಕ ಹಾಗೂ ರ್ಯಾಂಪ್‌ಗಳ ಕೊರತೆ

ವಿಂಡ್ಸರ್ ಮ್ಯಾನರ್ ಕಡೆಗೆ ನೇರವಾಗಿ ಪ್ರಯಾಣಿಸುವ ವಾಹನಗಳಿಗೆ ಎತ್ತರಿಸಿದ ಕಾರಿಡಾರ್‌ನಲ್ಲಿ ಯಾವುದೇ ರ್ಯಾಂಪ್ ಸೌಲಭ್ಯವಿಲ್ಲ. ಇದರಿಂದಾಗಿ ಮೆಖ್ರಿ ವೃತ್ತದಿಂದ ತಿರುಗುವ ವಾಹನಗಳು ಮಾತ್ರ ಇದನ್ನು ಬಳಸಲು ಸಾಧ್ಯವಿದ್ದು, ನೇರವಾಗಿ ಹೋಗುವ ವಾಹನಗಳು ಹಳೆಯ ಅಂಡರ್‌ಪಾಸ್ ಅನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

ಭವಿಷ್ಯದ ಯೋಜನೆಗಳ ನಿರ್ಲಕ್ಷ್ಯ

ಪ್ರಸ್ತಾವಿತ ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗ, ಸಬರ್ಬನ್ ರೈಲು ಹಾಗೂ ಯಶವಂತಪುರ-ಕೆ.ಆರ್. ಪುರಂ ಪೂರ್ವಾಪರ ಕಾರಿಡಾರ್‌ಗಳ ಸಂಯೋಜನೆಯನ್ನು ಈ ವರದಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ವಿನ್ಯಾಸದ ಬದಲಾವಣೆ

ಸುರಂಗ ಮತ್ತು ಎತ್ತರಿಸಿದ ರಸ್ತೆಯ ನಡುವಿನ ಅಂತರವನ್ನು ಪ್ರಸ್ತುತ ನಿರ್ಧರಿಸಲಾಗಿರುವ 80 ಮೀಟರ್‌ನಿಂದ 250 ಮೀಟರ್‌ಗೆ ಹೆಚ್ಚಿಸಲು ವರದಿ ಶಿಫಾರಸು ಮಾಡಿದೆ. ಇದು ಇಡೀ ಯೋಜನೆಯ ಮೂಲ ವಿನ್ಯಾಸವೇ ಬದಲಾಗಲು ಕಾರಣವಾಗಲಿದೆ.

ಬಿಡಿಎ ಸಮರ್ಥನೆ ಮತ್ತು ಪ್ರಸ್ತುತ ಸ್ಥಿತಿ

ಸಾರ್ವಜನಿಕರ ವಿರೋಧ ಮತ್ತು ನಕಾರಾತ್ಮಕ ವರದಿಗಳ ಹಿನ್ನೆಲೆಯಲ್ಲಿ ಮೂರನೇ ವ್ಯಕ್ತಿಯ ಸಾಂಸ್ಥಿಕ ಮೌಲ್ಯಮಾಪನಕ್ಕಾಗಿ ಐಐಟಿ-ಬಾಂಬೆಯನ್ನು ನಿಯೋಜಿಸಲಾಗಿತ್ತು ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯಲ್ಲಿನ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದ್ದು, ಹೆಬ್ಬಾಳದ ಭವಿಷ್ಯದ ಸಂಚಾರ ನಿರ್ವಹಣೆಗೆ ಕಿರು ಸುರಂಗ ಹಾಗೂ ಎತ್ತರಿಸಿದ ಕಾರಿಡಾರ್ ಎರಡೂ ಅತ್ಯಗತ್ಯ. ಹೀಗಾಗಿ ಎತ್ತರಿಸಿದ ಕಾರಿಡಾರ್ ಯೋಜನೆಯನ್ನೂ ಪಕ್ಕದಲ್ಲೇ ಜಂಟಿಯಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಿಡಿಎ ಸ್ಪಷ್ಟಪಡಿಸಿದೆ. ಪ್ರಸ್ತುತ ಬಿಡಿಎ ಈಗಾಗಲೇ ಕಿರು ಸುರಂಗದ ಪ್ರಾಥಮಿಕ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈ ಯೋಜನೆಯನ್ನು 2028ರ ಜನವರಿ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನ 6ನೇ ಮಹಡಿ ಭಾರೀ ಮೊತ್ತಕ್ಕೆ ಬಾಡಿಗೆ; ಎಷ್ಟು ಗೊತ್ತಾ?
ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ನಿವಾರಣೆಗೆ ಮೆಗಾ ಪ್ಲಾನ್? ಗೂಡ್ಸ್ ವಾಹನ ಬ್ಯಾನ್!