
ಕೊಲ್ಹಾರ(ಆ.27): ರಸ್ತೆ ಅಪಘಾತವೊಂದರಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಸಾವಿಗೀಡಾದ ಘಟನೆ ಕೊಲ್ಹಾರ ತಾಲೂಕಿನ ಚೀರಲದಿನ್ನಿ ಕ್ರಾಸ್‌ನಲ್ಲಿ ಶನಿವಾರ ಸಂಜೆ ನಡೆದಿದೆ.
ಚೀರಲದಿನ್ನಿ ಗ್ರಾಮದ ನಾಗಮ್ಮರಮೇಶ ನಂದಿಹಾಳ (4) ಎಂಬ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಮೃತ ಮಗು ನಾಗಮ್ಮಕೊಲ್ಹಾರ ಪಟ್ಟಣಕ್ಕೆ ಹೊರಟಿದ್ದ ತನ್ನ ಅಜ್ಜಿಯನ್ನು ಬಸ್ ಹತ್ತಿಸಲು ಚೀರಲದಿನ್ನಿ ಕ್ರಾಸ್‌ಗೆ ಆಕೆಯ ಅಕ್ಕನೊಂದಿಗೆ ಬಂದಿದ್ದಳು. ಅಜ್ಜಿಯನ್ನು ಕೊಲ್ಹಾರ ಬಸ್ ಹತ್ತಿಸಿ ಇನ್ನೇನು ಮನೆಯತ್ತ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಕೊಲ್ಹಾರದಿಂದ ಬಸವನಬಾಗೇವಾಡಿಯತ್ತ ಹೊರಟಿದ್ದ ಲಾರಿಯೊಂದು ಮಗು ನಾಗಮ್ಮ ಮೇಲೆ ಹರಿದಿದೆ. ಕ್ಷಣಾರ್ಧದಲ್ಲಿ ಮಗು ಮೃತಪಟ್ಟಿದೆ.
ಬೆಂಗಳೂರು: ಮದ್ಯಪಾನ ಮಾಡಿ ಲಾರಿ ಚಲಾವಣೆ, ಸಿಕ್ಕ ಸಿಕ್ಕ ವಾಹನಗಳಿಗೆ ಗುದ್ದಿ ಸರಣಿ ಅಪಘಾತ: ಸವಾರ ಬಲಿ
ಕಣ್ಣೆದುರಿನಲ್ಲಿಯೇ ಈ ಘಟನೆ ಕಂಡು ಆಕ್ರೋಶಗೊಂಡ ಪ್ರತ್ಯಕ್ಷದರ್ಶಿಗಳು ಲಾರಿ ಚಾಲಕನನ್ನು ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಬಸವನಬಾಗೇವಾಡಿ ಸಿಪಿಐ ಅಶೋಕ ಚವ್ಹಾಣ, ಕೊಲ್ಹಾರ, ಕೂಡಗಿ ಎನ್‌ಟಿಪಿಸಿ ಠಾಣೆ ಪಿಎಸ್ಐ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಲಾರಿ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆಯನ್ನು ಪ್ರತ್ಯಕ್ಷವಾಗಿ ಕಂಡು ಆಘಾತಕ್ಕೊಳಗಾಗಿರುವ ಮೃತ ನಾಗಮ್ಮಳ ಅಕ್ಕಳನ್ನು 108 ಆಂಬುಲೆನ್ಸ್ ಮೂಲಕ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.