ಸಿಮೆಂಟ್‌ ಮಿಕ್ಸರ್‌ ಲಾರಿಗೆ ಕಾರು ಡಿಕ್ಕಿ; ಸ್ಥಳ​ದಲ್ಲೇ ನಾಲ್ವರ ದುರ್ಮರಣ

By Kannadaprabha NewsFirst Published Feb 1, 2021, 7:21 AM IST
Highlights

ಲಾರಿ ಹಿಂದಿಕ್ಕಲು ಹೋಗಿ ಅವಘಡ| ಸಂಬಂಧಿಯನ್ನು ಮನೆಗೆ ಬಿಡಲು ಹೋಗುವಾಗ ಅಪಘಾತ| ಬೆಂಗಳೂರಿನ ಘಟನೆ ಚಿಕ್ಕ​ಜಾಲ ಸಂಚಾರ ಠಾಣಾ ವ್ಯಾಪ್ತಿ​ಯಲ್ಲಿ ನಡೆದ ಘಟನೆ| 

ಬೆಂಗಳೂರು(ಫೆ.01):  ಅತೀ ವೇಗ​ವಾಗಿ ಚಲಿ​ಸು​ತ್ತಿದ್ದ ಕಾರೊಂದು ಸಿಮೆಂಟ್‌ ಮಿಕ್ಸ​ರ್‌ ಲಾರಿಗೆ ಹಿಂದಿ​ನಿಂದ ಡಿಕ್ಕಿ ಹೊಡೆ​ದ ಪರಿ​ಣಾಮ ಕಾರಿ​ನ​ಲ್ಲಿದ್ದ ಯುವ​ತಿ​ ಸೇ​ರಿ ನಾಲ್ವರು ಸ್ಥಳ​ದಲ್ಲೇ ಮೃತ​ಪ​ಟ್ಟಿ​ರುವ ಘಟನೆ ಚಿಕ್ಕ​ಜಾಲ ಸಂಚಾರ ಠಾಣಾ ವ್ಯಾಪ್ತಿ​ಯಲ್ಲಿ ಭಾನು​ವಾರ ನಸು​ಕಿ​ನಲ್ಲಿ ನಡೆ​ದಿ​ದೆ.

ಬಾಗ​ಲೂ​ರಿನ ಮಧು​ಸೂ​ದ​ನ್‌​(26), ಪಿ.ಶಿ​ವ​ಶಂಕ​ರ್‌ ​(26), ಮಿಲನ್‌ ರಾಜ್‌​ (19) ಹಾಗೂ ಎಂ.ಅ​ನು​ಷಾ ​(22) ಮೃತ​ರು. ಮಧು​ಸೂ​ದನ್‌ ಲಾರಿಗಳನ್ನು ಹೊಂದಿದ್ದು, ಸ್ವಂತ ವ್ಯವಹಾರ ಹೊಂದಿದ್ದರು. ಇನ್ನಿಬ್ಬರು ಸ್ನೇಹಿತರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರು.

ಶನಿವಾರ ತಡರಾತ್ರಿ ಶಿವಶಂಕರ್‌ ಮತ್ತು ಮಿಲನ್‌ರಾಜ್‌ ಸಾತನೂರಿನಲ್ಲಿರುವ ಮಧುಸೂದನ್‌ ಮನೆಗೆ ಬಂದಿದ್ದರು. ಸಂಬಂಧಿ ಅನುಷಾ ಕೂಡ ಮಧುಸೂದನ್‌ ಮನೆಗೆ ಆಗಮಿಸಿದ್ದರು. ಬಳಿಕ ಎಲ್ಲರೂ ಊಟ ಮುಗಿ​ಸಿ ಅನುಷಾ ಅವರನ್ನು ವಿದ್ಯಾರಣ್ಯಪುರದಲ್ಲಿರುವ ಅವರ ಮನೆಗೆ ಬಿಡಲು ತಡ​ರಾತ್ರಿ 12.30ರ ಸು​ಮಾ​ರಿ​ಗೆ ಕಾರಿ​ನಲ್ಲಿ ಹೊರ​ಟಿ​ದ್ದಾರೆ. ಈ ವೇಳೆ ಮಧು​ಸೂ​ದನ್‌ ಕಾರು ಚಾಲನೆ ಮಾಡು​ತ್ತಿ​ದ್ದರು.

ಹೊಸಪೇಟೆ: ಬೈಕ್‌ನಿಂದ ಬಿದ್ದು ಕೊಪ್ಪಳದ ಯುವಕರಿಬ್ಬರ ದುರ್ಮರಣ

ಮಾರ್ಗ​ಮಧ್ಯೆ ಬಾಗಲೂರಿನ ಕಣ್ಣೂರಿನಿಂದ ಬೆಳ್ಳಳ್ಳಿ ಕಡೆಗೆ ಹೋಗುತ್ತಿದ್ದ ಸಿಮೆಂಟ್‌ ಮಿಕ್ಸರ್‌ ಲಾರಿಯನ್ನು ಹಿಂದಿಕ್ಕಲು ಮಧುಸೂದನ್‌ ಯತ್ನಿಸಿದ್ದರು. ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಪರಿಣಾಮ ಹಿಂಬದಿಯಿಂದ ಸಿಮೆಂಟ್‌ ಮಿಕ್ಸರ್‌ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಧುಸೂದನ್‌, ಶಿವಶಂಕರ್‌, ಮಿಲನ್‌ರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅನುಷಾ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀ​ಸರು ಹೇಳಿ​ದ​ರು.

ಘ​ಟ​ನೆ​ಯಲ್ಲಿ ಕಾರಿನ ಮುಂಭಾಗ ಸಂಪೂ​ರ್ಣ​ವಾಗಿ ನಜ್ಜು​ಗು​ಜ್ಜಾ​ಗಿದ್ದು, ಅಪಘಾತ ನಡೆಯುತ್ತಿದ್ದಂತೆ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಜಪ್ತಿ ಮಾಡಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಚಾ​ರ ​ವಿ​ಭಾ​ಗದ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌.ರವೀಕಾಂತೆಗೌಡ, ಸಂಚಾರ ಉತ್ತರ ವಿಭಾಗದ ಡಿಸಿಪಿ ವಿ.ಜೆ.ಸಜೀತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಮದ್ಯ ಸೇವನೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ವೈದ್ಯರ ಬಳಿ ವರದಿ ಕೇಳಲಾಗಿದೆ. ಮೇಲ್ನೋಟಕ್ಕೆ ವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ಅವಘಡ ಸಂಭವಿಸಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!