ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿ ಕುಲಪತಿಗಳೇ ಗತಿ!

Kannadaprabha News   | Asianet News
Published : Sep 02, 2020, 11:25 AM IST
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿ ಕುಲಪತಿಗಳೇ ಗತಿ!

ಸಾರಾಂಶ

ಒಂದು ವರ್ಷದ ಅವಧಿಯಲ್ಲಿ ನಾಲ್ಕು ಜನರು ಪ್ರಭಾರಿ ಕುಲಪತಿಗಳು| ಪ್ರೊ. ಪ್ರಮೋದ ಗಾಯಿ ನಂತರ ಇನ್ನೂ ನೇಮಕವಿಲ್ಲ ಕಾಯಂ ಕುಲಪತಿ| ಶೋಧನಾ ಸಮಿತಿಯಿಂದ ಮೂವರು ಹೆಸರು ಸರ್ಕಾರಕ್ಕೆ| ಸಡಿಲಗೊಂಡ ಆಡಳಿತ ಯಂತ್ರ, ಗುತ್ತಿಗೆದಾರರಿಗೆ ಹಣ ಪಾವತಿ ಸಮಸ್ಯೆ?|

ಬಸವರಾಜ ಹಿರೇಮಠ

ಧಾರವಾಡ(ಸೆ.02): ರಾಜ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿ ಇದೆಯೋ ಅಥವಾ ಇಲ್ಲವೋ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ವಿಶ್ವವಿದ್ಯಾಲಯದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರುತ್ತಿದ್ದು, ವಿವಿಗೆ ಅತಿಥಿ ಉಪನ್ಯಾಸಕರಂತೆ ಅತಿಥಿ ಕುಲಪತಿಗಳೇ ಗತಿ ಎನ್ನುವಂತಾಗಿದೆ.

ಕಳೆದ ಒಂದು ವರ್ಷದಿಂದ ಕಾಯಂ ಕುಲಪತಿಗಳಿಲ್ಲದೇ ಸೊರಗಿರುವ ರಾಜ್ಯದ 2ನೇ ವಿಶ್ವವಿದ್ಯಾಲಯದ ಖ್ಯಾತಿ ಹೊಂದಿರುವ ಕವಿವಿಗೆ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಜನ ಪ್ರಭಾರಿ ಕುಲಪತಿಗಳ ಆಗಮನವಾಗಿದೆ. ಬರೀ ಪ್ರಭಾರ ಆಡಳಿತದಲ್ಲಿಯೇ ವಿವಿ ಮುನ್ನಡೆಯುತ್ತಿದ್ದು, ಕಾಯಂ ಕುಲಪತಿಗಳ ನೇಮಕ ಮಸುಕಾಗಿದೆ.

ಕುಲಪತಿಯಾಗಿದ್ದ ಪ್ರೊ. ಪ್ರಮೋದ ಗಾಯಿ ಅವರ ಅವಧಿ ಪೂರ್ಣಗೊಂಡ ನಂತರ ಪ್ರೊ. ಅಶೋಕ ಶಿರಾಳಶೆಟ್ಟಿಅಧಿಕಾರ ವಹಿಸಿಕೊಂಡಿದ್ದರು. ಅವರ ಬಳಿಕ ಡಾ. ಟಿ.ಎಂ. ಭಾಸ್ಕರ ಹಾಗೂ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ಪ್ರೊ. ಶಿವಪ್ಪ ಅವರು ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಎರಡು ದಿನಗಳ ಹಿಂದಷ್ಟೇ ಕಾನೂನು ಮಹಾವಿದ್ಯಾಲಯದ ಪ್ರೊ. ವಿಶ್ವನಾಥ ಅವರನ್ನು ಪ್ರಭಾರಿಯನ್ನಾಗಿ ಮಾಡಲಾಗಿದೆ.

ಲಾಕ್‌ಡೌನ್‌: ಆನ್‌ಲೈನ್‌ ಬೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಅಸ್ತು!

ಸುಭದ್ರ ಸರ್ಕಾರ ರಚನೆಯಾಗಿ ಆಡಳಿತ ಯಂತ್ರ ಸುಸೂತ್ರವಾಗಿ ನಡೆಯುತ್ತಿದೆ ಎಂಬಷ್ಟರಲ್ಲೇ ಪ್ರವಾಹ ಎದುರಾಗಿತ್ತು. ಇದು ಮುಗಿಯುವಷ್ಟರಲ್ಲಿ ಕೊರೋನಾ ಹಾವಳಿ. ಹೀಗಾಗಿ ಸರ್ಕಾರ ಇತ್ತ ಲಕ್ಷ್ಯ ವಹಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಕೊರೋನಾ ಹಾವಳಿ ಹಿನ್ನೆಲೆ ಡಾ. ಬಿ.ಎನ್‌. ಗಂಗಾಧರ ಅಧ್ಯಕ್ಷತೆಯ ಶೋಧನಾ ಸಮಿತಿ ಸಭೆ ನಡೆಸಲು ಸಹ ಸಾಧ್ಯವಾಗಿರಲಿಲ್ಲ. ಕಳೆದ ತಿಂಗಳಷ್ಟೇ ಸಮಿತಿ ಸದಸ್ಯರು ಆನ್‌ಲೈನ್‌ನಲ್ಲಿ ಸಭೆ ನಡೆಸುವ ಮೂಲಕ ಕೆಲವರ ಬಯೋಡೇಟಾವನ್ನು ಪರಿಶೀಲನೆ ನಡೆಸಿ, ಮೂವರ ಹೆಸರನ್ನು ಶಿಫಾರಸು ಮಾಡಿದೆ ಎಂಬ ಮಾಹಿತಿ ಇದೆ.

ಡಾ. ಎಸ್‌. ಕೋರಿ, ಪ್ರೊ, ಟಿ.ಎಸ್‌. ತಾರಾನಾಥ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಬಿ. ಗುಡಸಿ ಅವರ ಹೆಸರನ್ನು ಸರ್ಕಾರಕ್ಕೆ ಕಳಿಸಲು ಸಮಿತಿ ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಈ ಮೂವರಲ್ಲಿ ಯಾರನ್ನಾದರೂ ನೇಮಕ ಮಾಡುವುದೇ ಅಥವಾ ಮತ್ತೇನಾದರೂ ಬೇರೆ ನಿರ್ಧಾರ ತೆಗೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.
ವಿವಿ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಸೇರಿದಂತೆ ಒಟ್ಟಾರೆ ಹಿತದೃಷ್ಟಿಯಿಂದ ಸಮರ್ಥ ಆಡಳಿತಗಾರನ ಅಗತ್ಯತೆ ಸಾಕಷ್ಟಿದೆ. ಹೀಗಾಗಿ ಅತ್ಯಂತ ಉತ್ತಮ ಆಡಳಿತ ನಡೆಸುವ ವ್ಯಕ್ತಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಗ್ರಹಿಸುತ್ತಾರೆ.

ಸಡಿಲಗೊಂಡ ಆಡಳಿತ ಯಂತ್ರ

ಕಾಯಂ ಕುಲಪತಿಗಳಿಲ್ಲದ ಹಿನ್ನೆಲೆ ವಿವಿ ಆಡಳಿತ ಯಂತ್ರ ತುಂಬ ಸಡಿಲಗೊಂಡಿದೆ. ಜತೆಗೆ ಇದು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವಿವಿ ಗುತ್ತಿಗೆದಾರರಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಮೊದಲೇ ಕೊರೋನಾ ಹಿನ್ನೆಲೆ ಪಾಠ- ಪ್ರವಚನ ನಡೆಯುತ್ತಿಲ್ಲ. ಜತೆಗೆ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗೆ ಸಂಬಳದ ಸಮಸ್ಯೆಯಾಗಿದೆ. ಇನ್ನು, ಪ್ರಭಾರಿ ಕುಲಪತಿಗಳಿಗೆ ಹೆಚ್ಚಿನ ಅಧಿಕಾರ ಇಲ್ಲದ ಹಿನ್ನೆಲೆ ಹೊಸ ಯೋಜನೆಗಳ ಜಾರಿ, ದೊಡ್ಡ ಟೆಂಡರ್‌ ನೀಡುವುದು, ಗುತ್ತಿಗೆದಾರರಿಗೆ ಹಣ ಬಿಡುಗಡೆ ಕೆಲಸವಾಗುತ್ತಿಲ್ಲ. ಕೈಯಿಂದ ಹಣ ಹಾಕಿ ಕೆಲಸಗಳನ್ನು ಮಾಡಲಾಗಿದೆ. ಕಳೆದ ಫೆಬ್ರವರಿ ತಿಂಗಳಿಂದ ಲಕ್ಷಗಟ್ಟಲೇ ಹಣ ಪಾವತಿ ಮಾಡಬೇಕಿದ್ದು, ರಾಜಕೀಯಪ್ರೇರಿತ ಗುತ್ತಿಗೆದಾರರು ಹಣ ಪಡೆದುಕೊಳ್ಳುತ್ತಿದ್ದಾರೆ. ನಮ್ಮಂಥವರು ನಿತ್ಯ ಪ್ರಭಾರಿ ಕುಲಪತಿಗಳ ಬೆನ್ನು ಬೀಳುವಂತಾಗಿದೆ ಎಂದು ಗುತ್ತಿಗೆದಾರರೊಬ್ಬರು ‘ಕನ್ನಡಪ್ರಭ’ ಜತೆ ತಮ್ಮ ಗೋಳು ಹೇಳಿಕೊಂಡರು.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!