ಕಲಬುರಗಿಯಲ್ಲಿ ಗುರುವಾರ ಕೊರೋನಾದಿಂದ ಗುಣಮುಖರಾಗಿ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆ| ಜಿಲ್ಲೆಯಲ್ಲಿ ಸೋಂಕು ಮುಕ್ತರಾದವರ ಒಟ್ಟು ಸಂಖ್ಯಾಬಲ 12 ಕ್ಕೆ ಹೆಚ್ಚಳ| ಬಾಲಕ ಕೊರೋನಾ ಸೋಂಕಿನೊಂದಿಗೆ ಹೋರಾಟ ನಡೆಸಿ ಸಂಪೂರ್ಣ ಸೋಂಕು ಮುಕ್ತನಾಗಿ ತನ್ನೂರಿಗೆ ಹೋದಾಗ ಬಡಾವಣೆಯ ಜನತೆ, ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಆತನಿಗೆ ಹೂವಿನ ಹಾರ ಹಾಕಿ, ಹಣ್ಣು ನೀಡಿ ಸ್ವಾಗತಿಸಿದ್ದಾರೆ|
ಕಲಬುರಗಿ(ಮೇ.01): ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರ ಪೈಕಿ ವಾಡಿಯ ಪೀಲಕಮ್ಮ ಬಡಾವಣೆ ನಿವಾಸಿ 2 ವರ್ಷದ ಬಾಲಕ ಸೇರಿದಂತೆ ನಾಲ್ವರು ಸಂಪೂರ್ಣ ಗುಣಮುಖರಾಗಿ ಕಲಬುರಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಮುಕ್ತರಾಗಿ ಮನೆ ಸೇರಿದವರ ಒಟ್ಟು ಸಂಖ್ಯಾಬಲ 12 ಕ್ಕೆ ಹೆಚ್ಚಿದೆ.
ಹೀಗೆ ಗುರುವಾರ ಬಿಡುಗಡೆಗೊಂಡವರಲ್ಲಿ ವಾಡಿಯ ಪಿಲಕಮ್ಮ ಬಡಾವಣೆಯ 2 ವರ್ಷದ ಬಾಲಕನೂ ಸೇರಿದ್ದಾನೆ. ಈ ಬಾಲಕ ಕೊರೋನಾ ಸೋಂಕಿನೊಂದಿಗೆ ಹೋರಾಟ ನಡೆಸಿ ಸಂಪೂರ್ಣ ಸೋಂಕು ಮುಕ್ತನಾಗಿ ತನ್ನೂರಿಗೆ ಹೋದಾಗ ಬಡಾವಣೆಯ ಜನತೆ, ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಆತನಿಗೆ ಹೂವಿನ ಹಾರ ಹಾಕಿ, ಹಣ್ಣು ನೀಡಿ ಸ್ವಾಗತಿಸಿದ್ದಾರೆ.
ವಾಡಿಯಲ್ಲಿ ಮಗುವಿಗೆ ಕೊರೋನಾ ಸೋಂಕು: ಯಾದಗಿರಿಯಲ್ಲಿ ನಿರ್ಲಕ್ಷ್ಯ ಮಾಡ್ಬೇಡಿ..!
ಈ ಬಾಲಕ ಆಟವಾಡುವಾಗ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದ, ಅಲ್ಲಿನ ವೈದ್ಯರು ಈತನಿಗೆ ಕೋವಿಡ್ ಪರೀಕ್ಷೆ ಮಾಡಿದ್ದಾಗ ಸೋಂಕು ಪತ್ತೆಯಾಗಿ ಆಸ್ಪತ್ರೆಗೆ ಸೇರಿದ್ದ. ಈತನ ಪೋಷಕರು ರೈಲಿನಲ್ಲಿ ಬೊಂಬೆ ಮಾರಾಟ ಮಾಡುವ ಕಾಯಕದವರು. ಉಪ್ರ ಮೂಲದ ಈ ಪೋಷಕರ ಮನೆವರೆಗೂ ಅದ್ಹೇಗೆ ಸೋಂಕು ಬಂತು ಎಂಬುದೇ ಇಂದಿಗೂ ನಿಗೂಢ.
ಈ ಬಾಲಕನ ಜೊತೆಗೇ ಗುರುವಾರ ಸಂಪೂರ್ಣ ಗುಣಮುಖರಾಗಿರುವ ಇನ್ನೂ ನಾಲ್ವರು ಸೋಂಕಿತರು ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡು ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಸೇರಿದವರ ಸಂಖ್ಯೆ ಇದೀಗ ಜಿಲ್ಲೆಯಲ್ಲಿ 12 ಕ್ಕೆ ಏರಿದೆ.