ಕ್ವಾರಂಟೈನ್ ಪ್ರದೇಶದಲ್ಲಿ ನೂರು ಮೀಟರ್ ನಿಷೇಧ| ಹಾವೇರಿ ಜಿಲ್ಲೆ ರಾಣಿಬೆನ್ನೂರು ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ವಲಸೆ ಕಾರ್ಮಿಕರ ಪೈಕಿ ನಾಲ್ಕು ಜನರ ಕೊರೊನಾ ಸೋಂಕು ದೃಢ| ಕ್ವಾರಂಟೈನ್ ಕೇಂದ್ರದ ಸುತ್ತಮುತ್ತಲಿನ ನೂರು ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ಆಗಿ ಪರಿವರ್ತನೆ|
ಹಾವೇರಿ(ಮೇ.31): ಮಹಾರಾಷ್ಟ್ರದಿಂದ ಸೇವಾ ಸಿಂಧು ಪಾಸ್ ಮೂಲಕ ಜಿಲ್ಲೆಯ ರಾಣಿಬೆನ್ನೂರು ತಾಲೂಕಿಗೆ ಆಗಮಿಸಿ ಇಲ್ಲಿನ ಈಶ್ವರನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ವಲಸೆ ಕಾರ್ಮಿಕರ ಪೈಕಿ ಶನಿವಾರ ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಇದರ ಸುತ್ತಮುತ್ತಲಿನ ನೂರು ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ಆಗಿ ಪರಿವರ್ತಿಸಲಾಗಿದೆ. ಇನ್ನು ಕ್ವಾರಂಟೈನ್ ಕಟ್ಟಡದ ಬಳಿ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದ್ದು ಕಾಂಪೌಂಡ್‌ಗೆ ಹೊಂದಿಕೊಂಡಿರುವ ಜಾಗೆಯಲ್ಲಿ ಮುಳ್ಳಿನ ಬೇಲಿ ಹಾಕಲಾಗಿದೆ. ಇದಲ್ಲದೆ ಇದರ ಬಳಿ ಕೈಗೊಳ್ಳಲಾಗುತ್ತಿರುವ ಖಾಸಗಿ ವ್ಯಕ್ತಿಗಳಿಗೆ ಸೇರಿದ ಕಟ್ಟಡ ಕಾಮಗಾರಿಯನ್ನು ಮುಂದಿನ 14 ದಿನಗಳ ಕಾಲ ನಿಲ್ಲಿಸುವಂತೆ ಸೂಚಿಸಲಾಗಿದೆ.
ಹಾಸ್ಟೆಲ್‌ನಲ್ಲಿ ಒಟ್ಟು 41 ಜನರಿದ್ದು ಆ ಪೈಕಿ ನಾಲ್ಕು ಜನರ ವರದಿ ಪಾಸಿಟಿವ್ ಬಂದಿದ್ದು ಇನ್ನು 37 ಜನರ ವರದಿ ಬರಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷ ತಿಳಿಸಿದರು.
ಕೊರೋನಾ ಭೀತಿ: ಸರ್ಕಾರಿ ಕಚೇರಿಗಳಲ್ಲೇ ಪಾಲನೆಯಾಗದ ನಿಯಮ
ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷ, ಬಿಸಿಎಂ ಇಲಾಖೆ ಅಧಿಕಾರಿ ವಿ.ಎಸ್. ಹಿರೇಮಠ, ಶಹರ ಸಿಪಿಐ ಲಿಂಗನಗೌಡ ನೆಗಳೂರ, ಹಾಸ್ಟೆಲ್ ವಾರ್ಡನ್ ಎಸ್.ಕೆ. ಹಾವನೂರ, ಆರೋಗ್ಯ ಇಲಾಖೆಯ ಎಸ್.ಸಿ. ಕೋರಿ ಸ್ಥಳಕ್ಕೆ ತೆರಳಿ ಕಂಟೈನ್‌ಮೆಂಟ್ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.