ಮೋದಿ ಹುಟ್ಟದಿದ್ದರೆ ದೇಶ ನಡೆಯುತ್ತಿರಲಿಲ್ಲವೇನೋ| ಮೋದಿ ಒಬ್ಬರೇ ದೇಶಭಕ್ತಿಯ ಗುತ್ತಿಗೆ ಪಡೆದಂತೆ ಮಾತಾಡುತ್ತಾರೆ| ಗೋಡ್ಸೆ ವಿರೋಧಿಸಿದರೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಿಡಿದೇಳುತ್ತದೆ| ತಾಕತ್ತಿದ್ದರೆ ಗಾಂಧಿ ಕೊಲೆ ಮಾಡಿದ ಕುರಿತು ಬರೆಯುವ ಪುಸ್ತಕ ಬಂದ್ ಮಾಡಿ|
ಕಲಬುರಗಿ[ಜ.31]: ನರೇಂದ್ರ ಮೋದಿ ಹುಟ್ಟದಿದ್ದರೆ ದೇಶ ನಡೆಯುತ್ತಿರಲಿಲ್ಲವೇನೋ ಎಂಬಂತೆ ಇಂದಿನ ಯುವಕರು ಮೋದಿ ಮೋದಿ ಎಂದು ಹೊಗಳುತ್ತಿರುವುದನ್ನು ನೋಡಿದರೆ ದೇಶ ಯಾವ ಕಡೆಗೆ ಹೊರಟಿದೆ ಎಂಬ ಚಿಂತೆ ಕಾಡುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಜಗತ್ ವೃತ್ತದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ಹುಟ್ಟದಿದ್ದರೆ ಅವರಂತವರು ಮತ್ಯಾರೋ ಹುಟ್ಟಿ ಪ್ರಧಾನಿಯಾಗುತ್ತಿದ್ದರು. ಮೋದಿಯೊಬ್ಬರೇ ದೇಶಭಕ್ತಿಯ ಗುತ್ತಿಗೆ ಪಡೆದಂತೆ ಮಾತಾಡುತ್ತಾರೆ. ಪಂಡಿತ ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಚಂದ್ರಶೇಖರ ಅಜಾದ್, ಭಗತ್‌ಸಿಂಗ್ ರಾಜಗುರು ಇವರೆಲ್ಲ ದೇಶಭಕ್ತರಲ್ಲವೇ? ಮೋದಿ ಅಮಿತ್ ಶಾ ಜರ್ಮನಿ ಹಿಟ್ಲರ್ ಹಾಗೂ ಇಟಲಿ ಮುಸಲೋನಿಯಂತಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಗುಂಡು ಹೊಡೆದು ಕೊಲೆ ಮಾಡಿದವರಿಗಾಗಿ ಗುಡಿ ಕಟ್ಟಿ ಪೂಜೆ ಮಾಡಲಾಗುತ್ತಿದೆ. ಗಾಂಧೀಜಿ ಅವರ ಕೊಲೆ ಕೇವಲ ಒಂದೇ ದಿನ ಆ ಕ್ಷಣಕ್ಕಾಗಿ ನಡೆದುದ್ದಲ್ಲ. ಇದೊಂದು ದೀರ್ಘಕಾಲದ ಯೋಜನೆಯಾಗಿತ್ತು. ಅವರ ತತ್ವಾದರ್ಶ ಅಡಗಿಸುವ ಕುತಂತ್ರದಿಂದಾಗಿ ನಾಥೂರಾಮ್ ಗೋಡ್ಸೆ, ಆಪ್ಟೆ ಹಾಗೂ ಅವರ ತಂಡ ಸೇರಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂಬುದರ ಕುರಿತು ಪುಸ್ತಕಗಳಲ್ಲಿ ಬರೆಯಲಾಗಿದೆ. ಗೋಡ್ಸೆಯನ್ನು ವಿರೋಧಿಸಿದರೆ ಕಾಂಗ್ರೆಸ್ ವಿರುದ್ಧ ಸಿಡಿದೇಳುವ ಬಿಜೆಪಿಯವರಿಗೆ ತಾಕತ್ತಿದ್ದರೆ ಮಹಾತ್ಮ ಗಾಂಧಿ ಅವರನ್ನು ಕೊಲೆ ಮಾಡಿದ ಕುರಿತು ಬರೆಯುವ ಪುಸ್ತಕಗಳನ್ನು ಬಂದ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರಲು ಬಯಸಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಕೆಲವೇ ವ್ಯಕ್ತಿಗಳು ತಾವೇ ಶ್ರೇಷ್ಠ, ತಮ್ಮ ವಿಚಾರಗಳೇ ಅತ್ಯುತ್ತಮವೆಂದು ಭಾವಿಸಿ ಗಾಂಧೀಜಿ ಅವರ ತತ್ವಾದರ್ಶ ವಿರೋಧಿಸಿ ಕೊಲೆ ಮಾಡಿದ್ದಾರೆ. ಇಂತಹವರನ್ನು ವಿರೋಧಿಸಬೇಕು. ಗಾಂಧೀಜಿ ಅವರ ತತ್ವಾದರ್ಶ ಆದರ್ಶಿಸಬೇಕೋ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕೆಂದರು.
ಬಿಜೆಪಿ ಗಾಂಧಿ ಜಯಂತಿ ಬಿಜೆಪಿ ಎಂದು ಆಚರಿಸುವುದಿಲ್ಲ. ಇಂದಿಗೂ ಸಹ ನಾಗಪುರದಲ್ಲಿ ಗಾಂಧಿಯವರ ಶ್ರದ್ಧಾಂಜಲಿ ಸಹ ಮಾಡುವುದಿಲ್ಲ. ಅಧಿಕಾರಕ್ಕೆ ಬಂದನಂತರ ಜನರಿಗೆ ತೋರಿಸುವುದಕ್ಕಾಗಿ ಗಾಂಧಿ ಜಯಂತಿ, ಪುಣ್ಯತಿಥಿ ಆಚರಿಸುತ್ತಾರೆ. ಲಕ್ನೋದಲ್ಲಿ ಗೋಡ್ಸೆ ಮೂರ್ತಿ ಪ್ರತಿಷ್ಠಾಪಿಸಿ ದೇವರೆಂದು ಪೂಜಿಸುವ ಕಾಲದಲ್ಲಿ ಗಾಂಧೀಜಿ ಅವರ ತತ್ವಾದರ್ಶ ಕೊಲ್ಲಲಾಗುತ್ತಿದ್ದರಿಂದ ದೇಶದ ಜನತೆ ಗಾಂಧಿಯ ಅಹಿಂಸಾ, ಸತ್ಯದ ಮಾರ್ಗದಲ್ಲಿ ನಡೆಯುವುದು ಅತೀ ಅವಶ್ಯವಾಗಿದೆ ಎಂದರು.
ಮೀನಾಕ್ಷಿ ಬಾಳಿ ಮಾತನಾಡಿ, ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಗೆ ದ್ವಿತೀಯ ದರ್ಜೆ ನಾಗರಿಕ ಹಕ್ಕು ಕೊಡುತ್ತಿರುವುದನ್ನು ವಿರೋಧಿಸಿದ ಮಹಾತ್ಮ ಗಾಂಧಿ ಅವರ ನಾಡಿನಲ್ಲಿ ಇಂದು ಹಕ್ಕಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ಅವರನ್ನು ಕೊಲೆ ಮಾಡಲು ನಾಲ್ಕು ಸಲ ಪ್ರಯತ್ನಿಸಲಾಗಿತ್ತು. ಗಾಂಧಿ ಅವರ ಕೊಲೆಯನ್ನು ಬೀದಿ ನಾಟಕ, ಅಣುಕ ಮಾಡುವಂತಹ ಸ್ಥಿತಿಯನ್ನು ಕಣ್ಣಾರೆ ನೋಡುವಂತಹ ನಿರ್ಲಜ್ಜ ಸ್ಥಿತಿಗೆ ತಲುಪಿದ್ದೇವೆ. ಗಾಂಧಿ ಒಂದು ದಿನ ಸ್ಮರಣೆಗೆ ಸೀಮಿತವಾಗಬಾರದು ಎಂದು ಹೇಳಿದರು.
ಶಾಸಕರಾದ ಪ್ರಿಯಾಂಕ್ ಖರ್ಗೆ, ತಿಪ್ಪಣ್ಣಪ್ಪ ಕಮಕನೂರ, ಕನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮೌಲಾನಾ ಶರೀಫ್, ಸುಭಾಷ್ ರಾಠೋಡ, ಬಾಬಾಖಾನ್, ಮಲ್ಲಮ್ಮ ವಳಕೇರಿ ಇದ್ದರು.
ಆರ್‌ಎಸ್‌ಎಸ್, ಬಿಜೆಪಿಯವರ ಸಿದ್ಧಾಂತ ದೇಶಕ್ಕೆ ಮಾರಕವಾಗಿದೆ. ದೇಶದ ಜನರನ್ನು ಧರ್ಮದ ಆಧಾರದ ಮೇಲೆ ಒಡೆದಾಳುತ್ತಿದ್ದರಿಂದ ಗಾಂಧೀಜಿ ಅವರ ತತ್ವಾದರ್ಶಗಳ ಮೇಲೆ ಸಂವಿಧಾನವನ್ನು ಉಳಿಸಬೇಕಾಗಿದೆ. ಜನವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಹೋರಾಟ ಮಾಡಲು ಕಾಂಗ್ರೆಸ್ ತಯಾರಾಗಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಸಣ್ಣ ಇರುವೆ ಸಾವನ್ನು ನೋಡದ ಮಹಾತ್ಮ ಗಾಂಧೀಜಿ ಅವರನ್ನು ಕೊಲೆ ಮಾಡಿದ ವರಿಗೆ ವೈಭವೀಕರಿಸಿ, ಭಾರತರತ್ನ ಪ್ರಶಸ್ತಿ ಕೊಡಲು ಹೊರಟ ಇಂದಿನ ಪರಿಸ್ಥಿತಿಯಲ್ಲಿ ದೇಶದ ಜನರು ಒಗ್ಗಟ್ಟಾಗಿ ಸೇರಿ ಗಾಂಧೀಜಿ ಅವರ ತತ್ವಾದರ್ಶಗಳ ಮೇಲೆ ನಡೆಯಬೇಕು ಎಂದು ಪ್ರಗತಿಪರ ಚಿಂತಕ ಆರ್.ಕೆ. ಹುಡಗಿ ಹೇಳಿದ್ದಾರೆ.