ಬೆಂಬಲಿಗರಿಗಾಗಿ ರಮೇಶ್ ಕುಮಾರ್ ಲಾಬಿ : ಹುದ್ದೆಗಾಗಿ ಕಸರತ್ತು!

By Web DeskFirst Published Aug 24, 2019, 2:07 PM IST
Highlights

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇದೀಗ ತಮ್ಮ ಬೆಂಬಲಿಗರಿಗಾಗಿ ಲಾಬಿ ಶುರು ಮಾಡಿದ್ದಾರೆ. ಹುದ್ದೆಗಾಗಿ ಕಸರತ್ತು ನಡೆಸಲಾಗುತ್ತಿದೆ. 

ಕೋಲಾರ [ಆ.24]: ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸುವ ನಿಟ್ಟಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಂಸದ ಕೆ.ಎಚ್. ಮುನಿಯಪ್ಪರ ನಡುವೆ ಕಸರತ್ತು ಆರಂಭವಾಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ಬದಲಾಯಿಸಲು ಕೆಪಿಸಿಸಿ ತೆಗೆದುಕೊಂಡಿರುವ ತೀರ್ಮಾನದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯುತ್ತಿವೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಮುಖಂಡರ ಅಭಿಪ್ರಾಯ
ಸಂಗ್ರಹಿಸಲು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರನ್ನು ನೇಮಿಸಲಾಗಿದೆ.

ಸಡಿಲವಾದ ಮುನಿಯಪ್ಪ ಮುಷ್ಟಿ: ಕಳೆದ 23 ವರ್ಷಗಳಿಂದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡು ತಮಗೆ ಬೇಕಾದವರನ್ನು ನೇಮಿಸಿಕೊಂಡು ಬರುತ್ತಿದ್ದ ಮಾಜಿ ಸಂಸದ ಕೆ. ಎಚ್.ಮುನಿಯಪ್ಪ ಅವರ ಮುಷ್ಟಿ ಸಡಿಲಗೊಂಡಂತೆ ಕಾಣುತ್ತಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ತಮಗೆ ಬೇಕಾದವರನ್ನು ಈ ಕುರ್ಚಿಯಲ್ಲಿ ಕೂರಿ ಸುತ್ತಾ ಬಂದಿದ್ದ ಮುನಿಯಪ್ಪ ಅವರಿಗೆ ಈ ಬಾರಿ ತೊಡಕಾಗುವ ಲಕ್ಷಣಗಳು ಕಾಣುತ್ತಿವೆ. 

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತನ್ನದೇ ಆದ ಸ್ಥಾನ ಮಾನವನ್ನು ಉಳಿಸಿಕೊಂಡು ಬಂ ದಿದೆ. ಈ ಸ್ಥಾನಕ್ಕೆ ಜಿಲ್ಲೆಯ ಘಟಾನುಘಟಿ ನಾಯ ಕರೇ ಆಯ್ಕೆಯಾಗಿ ದ್ದರು, ಮಾಜಿ ಸಚಿವ ದಿವಂಗತ ಆಂಜಿನೇಯರೆಡ್ಡಿ ಅವರಿಂದ ಹಿಡಿದು ಚೌಡರೆಡ್ಡಿ ಮುಂತಾದವರೆಲ್ಲ ಈ ಕುರ್ಚಿಯನ್ನು ಅಲಂಕರಿಸಿದ್ದರು. 

ಚಂದ್ರಾರೆಡ್ಡಿ ಬದಲಾವಣೆಗೆ ಕಸರತ್ತು: ಮಾಜಿ ಶಾಸಕ ಎ.ನಾಗರಾಜು ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿದ ನಂತರ ಅಂದರೆ 1996 ರಲ್ಲಿ ಅವರು ಜಿಲ್ಲಾಧ್ಯಕ್ಷ ಸ್ಥಾನದ ಕುರ್ಚಿಯಿಂದ ಕೆಳಗಿಳಿದ ನಂತರ ಗೌರಿಬಿದನೂರು ಅಶ್ವತ್ಥನಾರಾಯಣರೆಡ್ಡಿ ಅವರಿಂದ ಹಿಡಿದು ಬಿ.ಎನ್.ಬಿಸ್ಸೇಗೌಡ, ಅನಿಲ್ ಕುಮಾರ್ ಹಾಗು ಚಂದ್ರರೆಡ್ಡಿ ಅವರುಗಳು ಆಯ್ಕೆ ಆಗಿದ್ದರು, ಇವರೆಲ್ಲರೂ ಕೆ.ಎಚ್.ಮುನಿಯಪ್ಪ ಅವರ ಕೃಪಾಕಟ್ಟಾಕ್ಷದಿಂದಲೇ ಆಯ್ಕೆ ಆಗಿ ಬಂದವರು. 

ಇದರಲ್ಲಿ ಅಶ್ವತ್ಥನಾರಾಯಣರೆಡ್ಡಿ6  ವರ್ಷಗಳ ಕಾಲ (ಎರಡು ಅವಗೆ ಬಿಸ್ಸೇಗೌಡ 6 ವರ್ಷ( ಎರಡು ಅವಧಿಗೆ) ಅನಿಲ್ ಕುಮಾರ್ 5 ವರ್ಷ 4 ತಿಂಗಳ ಆಯ್ಕೆ ಆಗಿದ್ದರು. ಇದೀಗ ಚಂದ್ರಾರೆಡ್ಡಿ ಅಧ್ಯಕ್ಷರಾಗಿದ್ದು ಅವರನ್ನು ಬದಲಾಯಿಸುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಕಸರತ್ತು ನಡೆಯುತ್ತಿದೆ.  ಇಬ್ಬರು ನಾಯಕರ ನಡುವೆ ಜಿದ್ದಾಜಿದ್ದಿ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಮುನಿಯಪ್ಪ ಮಯವಾಗಿತ್ತು, ಅವರು ಹೇಳಿದಂತೆ ಪಕ್ಷದ  ಚಟುವಟಿಕೆಗಳು ನಡೆಯುತ್ತಿದ್ದವು, ಇದರಿಂದಾಗಿಯೇ ಮುನಿಯಪ್ಪ ಮತ್ತು ರಮೇಶ್ ಕುಮಾರ್ ನಡುವೆ ಜಿದ್ದಾಜಿದ್ಧಿ ಬೆಳೆದದ್ದು, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಯಲ್ಲಿ ಮುನಿಯಪ್ಪ ಅವರನ್ನು ಸೋಲಿಸಲೂ ಇದೇ ಕಾರಣ. 

ಮುನಿಯಪ್ಪರಿಗೆ ಪಕ್ಷದಲ್ಲಿ ಹಿಡಿತ ತಪ್ಪಿಸಲೆಂದೇ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಒಗ್ಗೂಡಿ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಬಿಜೆಪಿ ಯತ್ತ ತಿರುಗಿಸಿ ಮುನಿಯಪ್ಪರನ್ನು ಸೋಲಿಸಿದರು. ಆದರೆ ಸೋಲಿನ ನಂತರವೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿಯೇ ಕಾಣಿಸಿಕೊಳ್ಳುತ್ತಿರುವ ಮುನಿಯಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತಮ್ಮ ಹಿಡಿತದಲ್ಲೇ ಇಟ್ಟು ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಈ ವಿಚಾರದಲ್ಲಿ ಮುನಿಯಪ್ಪರಿಗೆ ಸರಿಯಾದ ಪೆಟ್ಟು ಕೊಟ್ಟು ಅವರಿಂದ ಜಿಲ್ಲಾ ಕಾಂಗ್ರೆಸ್ ಹಿಡಿತ ತಪ್ಪಿಸಲು ರಮೇಶ್ ಕುಮಾರ್ ಸದ್ಧು ಗದ್ಧಲವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಮುನಿಯಪ್ಪರ ಪರ ಶಾಸಕ ನಂಜೇಗೌಡ ಮತ್ತು ರೂಪಶಶಿಕಲಾ ಇದ್ದಾರೆ. ಇತ್ತ ರಮೇಶ್ ಕುಮಾರ್ ಪರ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ, ನಸೀರ್ ಅಹಮದ್ ಇದ್ದಾರೆ.

ಮುನಿಯಪ್ಪ ಧ್ವಯರ ಕಿತ್ತಾಟ: ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಿಂದೆ ಕೆ.ಎಚ್.ಮುನಿಯಪ್ಪ ಮತ್ತು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ  ಅವರ ನಡುವೆ ಗಲಾಟೆ ನಡೆದಿತ್ತು, ಆಗ ಮುನಿಯಪ್ಪ ಹೊಸದಾಗಿ ಸಂಸದರಾಗಿ ಆಯ್ಕೆ ಆಗಿದ್ದ ದಿನಗಳು, ಕುರುಡಮಲೆ ಯಲ್ಲಿ ಅಧ್ಯಕ್ಷ ಆಯ್ಕೆಗೆ ಸಭೆ ಕರೆಯಲಾಗಿತ್ತು. ಆದರೆ ರಾಜಕೀಯವಾಗಿ ಇನ್ನೂ ಪಳಗದ ಕೆ.ಎಚ್. ಮುನಿಯಪ್ಪ ಚಿಂತಾಮಣಿಯ ಚೌಡರೆಡ್ಡಿ ಅವರನ್ನು ಆಯ್ಕೆ ಮಾಡಿಬಿಟ್ಟರು, ಸಭೆಗೆ ಸ್ವಲ್ಪ ನಿಧಾನವಾಗಿ ಬಂದ ವಿ.ಮುನಿಯಪ್ಪ ಈ ವಿಷಯ ತಿಳಿದು ಕೆ. ಎಚ್.ಮುನಿಯಪ್ಪಗೆ ಬಹಿರಂಗವಾಗಿಯೇ ಕೆನ್ನೆಗೆ ಭಾರಿಸಿದ್ದರು. ಈ ನೋವಿನಿಂದಲೇ ಕೆ.ಎಚ್.ಮುನಿಯಪ್ಪ ರಾಜಕೀಯವಾಗಿ ವಿ.ಮುನಿಯಪ್ಪ ಅವರಿಗೆ ಸಾಕಷ್ಟು ಪೆಟ್ಟುಗಳನ್ನು ನೀಡಿದ್ದು ಇತಿಹಾಸ. 

ಸದ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕೆ.ಎ.ನಿಸಾರ್ ಅಹಮದ್, ವೆಂಕಟಮುನಿ  ಯಪ್ಪ, ಮಾಲೂರು ರಘು, ದಳಸನೂರು ಗೋಪಾಲಕೃಷ್ಣ ಮುಂತಾದವರ ಹೆಸರು ಕೇಳಿಬರುತ್ತಿವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗುಂಪುಗಳ ನಡುವೆ ಮತ್ತಷ್ಟು ಕಾವೇರಲಿದೆ.

click me!