* ಗನ್ ಹಿಡಿಯೋದು ನಮ್ಮ ಜನ್ಮ ಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು?: ಬೋಪಯ್ಯ
* ಎಸ್‌ಡಿಪಿಐಗೆಲ್ಲ ಪ್ರತಿಕ್ರಿಯಿಸೊಲ್ಲ
* ಎಸ್‌ಡಿಪಿಐ, ಪಿಎಫ್‌ಐ ಈ ದೇಶಕ್ಕೆ ಮಾರಕ, ಅವುಗಳನ್ನ ಬ್ಯಾನ್ ಮಾಡಬೇಕು
ಮಡಿಕೇರಿ(ಮೇ.18): ಇದು ಕೊಡಗಿನ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಶಾಸಕ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಏಕವಚನದಲ್ಲಿ ನೀಡಿರುವ ತಿರುಗೇಟು. ಆರೆಸ್ಸೆಸ್ ಶಿಬಿರದಲ್ಲಿ ಶಾಸಕರು ಭಾಗವಹಿಸಬಾರದು ಅಂತ ಕಾನೂನಿದ್ಯಾ? ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಭೇಟಿ ಕೊಡೋದು ನನ್ನ ಕರ್ತವ್ಯ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿ ವರ್ಷ ಅಭ್ಯಾಸ ವರ್ಗ ಮಾಡುತ್ತಾರೆ. ಈ ವರ್ಷ ಕೊಡಗಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ. ಏರ್‌ಗನ್ ಬಳಸಲು ಲೈಸನ್ಸ್ ಬೇಕಿಲ್ಲ. ಇನ್ನು ಏನಾದ್ರೂ ತ್ರಿಶೂಲ ಬ್ಯಾನ್ ಆಗಿದೆಯಾ ಎಂದು ಬೋಪಯ್ಯ ಪ್ರಶ್ನಿಸಿದರು.
ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ ಹೌದು, ಆದರೆ ಅದು ಖಾಸಗಿ ಶಾಲೆ. ಸಿದ್ದರಾಮಯ್ಯ ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಚೆನ್ನಾಗಿರುವುದಿಲ್ಲ. ನಮಗೂ ಮಾತನಾಡುವುದಕ್ಕೆ ಬರುತ್ತದೆ ಎಂದರು.
ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ತಾಲಿಬಾನ್ ಸಂಸ್ಕೃತಿ: ಖಾದರ್
ಸಿದ್ದು ಚರಿತ್ರೆ ಗೊತ್ತು:
ಸಿದ್ದರಾಮಯ್ಯರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಅವರ ದಿನಚರಿ ಶುರುವಾಗುವುದೇ ಅಲ್ಪಸಂಖ್ಯಾತರನ್ನು ಓಲೈಸುವುದು ಹೇಗೆ ಎಂದು. ನಮಗೆ ಸಿದ್ದರಾಮಯ್ಯ ಸಂವಿಧಾನದ ಬದ್ಧತೆ ಬಗ್ಗೆ ಹೇಳಿ ಕೊಡುವ ಅಗತ್ಯ ಇಲ್ಲ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಕಾಂಗ್ರೆಸಿನ ಓರ್ವ ಶಾಸಕ ದಲಿತನ ಮನೆಗೆ ಬೆಂಕಿ ಹಾಕಿದಾಗ ಸಂವಿಧಾನ ಎಲ್ಲೋಗಿತ್ತು? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದಾಗ ಸಂವಿಧಾನ ಇರಲಿಲ್ವಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು ಎಂದು ಕಿವಿಮಾತು ಹೇಳಿದರು.
ಎಸ್‌ಡಿಪಿಐಗೆಲ್ಲ ಪ್ರತಿಕ್ರಿಯಿಸೊಲ್ಲ:
ಹಿಂದೂ ಸಮಾಜದ ರಕ್ಷಣೆಗೆ ಅಭ್ಯಾಸ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ. ಎಸ್‌ಡಿಪಿಐ ಅವರು ಹಾದಿ ಬೀದಿಯಲ್ಲಿ ಹೋಗೋರು. ಅವರಿಗೆಲ್ಲ ಪ್ರತಿಕ್ರಿಯೆ ಕೊಡುವುದಿಲ್ಲ. ಎಸ್‌ಡಿಪಿಐ, ಪಿಎಫ್‌ಐ ಈ ದೇಶಕ್ಕೆ ಮಾರಕ. ಅವುಗಳನ್ನ ಬ್ಯಾನ್ ಮಾಡಬೇಕು. ಎಸ್‌ಡಿಪಿಐ ಪ್ರಕರಣ ದಾಖಲು ಮಾಡಿದೆ. ಮಾಡಲಿ, ಎದುರಿಸುವ ಶಕ್ತಿ ನನಗಿದೆ ಎಂದು ಹೇಳಿದರು.