
ಆನೇಕಲ್: ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಕೇರಳ ಮೂಲದ ಕಿಡ್ನಾಪ್ ಗ್ಯಾಂಗ್ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು, ಬಿಟ್ಟುಕಳಿಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ಸೋಮವಾರ ತಡರಾತ್ರಿ ನಡೆದಿದೆ.
ರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ತಡರಾತ್ರಿ ಗೋಲ್ಡ್ ಕಾಯಿನ್ ಕ್ಲಬ್ನಿಂದ ದಯಾನಂದರೆಡ್ಡಿ ಹೊರಟಿದ್ದರು. ಬೈಕಲ್ಲಿ ಬಂದ ಕೇರಳ ಮೂಲದವರು ದಯಾನಂದರೆಡ್ಡಿ ಕಾರನ್ನು ಅಡ್ಡಗಟ್ಟಿ ಗಿಫ್ಟ್ ಬಂದಿದೆ ಎಂದು ಎಂದಿದ್ದಾರೆ.
ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಕಾರಿಗೆ ನುಗ್ಗಿರುವ ಓರ್ವ, ಗನ್ ತೋರಿಸಿ ಹೇಳಿದ ಕಡೆ ಕಾರು ಚಲಾಯಿಸಲು ಸೂಚಿಸಿದ್ದಾನೆ. ಬಳಿಕ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಇವರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆ ಕೆಎಚ್ಬಿ ಬಡಾವಣೆ ಬಳಿ ಕರೆದೊಯ್ದು ‘ನಿನ್ನ ಹತ್ಯೆಗೆ ₹10 ಕೋಟಿ ಸುಪಾರಿ ಕೊಟ್ಟಿದ್ದಾರೆ’ ಎಂದು ದಯಾನಂದರೆಡ್ಡಿ ಕುತ್ತಿಗೆಗೆ ಗನ್ ಇಟ್ಟಿದ್ದಾರೆ.
‘ಆ ಹಣವನ್ನು ತಾನೇ ಕೊಡುತ್ತೇನೆ, ಕೊಲ್ಲಬೇಡಿ’ ಎಂದು ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ₹3 ಕೋಟಿ ಕೇಳಿದ್ದ ಗ್ಯಾಂಗ್ ಕೊನೆಗೆ ₹2 ಕೋಟಿಗೆ ಒಪ್ಪಿದ್ದಾರೆ. ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ನೀಡೋದಾಗಿ ದಯಾನಂದರೆಡ್ಡಿ ಕೇಳಿಕೊಂಡಿದ್ದು, ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ತಿಳಿಸಿ ಅವರನ್ನು ಬಿಟ್ಟುಕಳುಹಿಸಿದ್ದಾರೆ.