ಮರಿಯಮ್ಮನಹಳ್ಳಿಗೆ ಹೋಗುವ ರಾಜ್ಯ ಹೆದ್ದಾರಿಯ ಮಾರ್ಗಮಧ್ಯದಲ್ಲಿ ಬಿದ್ದಿದ್ದ ವ್ಯಕ್ತಿ| ಆ್ಯಂಬುಲೆನ್ಸ್ 108ಗೆ ಕರೆಮಾಡಿ ನಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸುವ ಮೂಲಕ ಅನಾಮಿಕ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿಸಿದ ಮಾಜಿ ಶಾಸಕ ಸಿರಾಜ್‌ಶೇಕ್|
ಹಗರಿಬೊಮ್ಮನಹಳ್ಳಿ(ಮೇ.04): ಪಟ್ಟಣಕ್ಕೆ ಹತ್ತಿರದಲ್ಲಿರುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಅನಾಮಿಕ ವ್ಯಕ್ತಿ ಬಿದ್ದಿದ್ದು, ಮಾರ್ಗ ಮಧ್ಯದಲ್ಲಿ ಹಾದು ಹೋಗುತ್ತಿದ್ದ ಕೆಪಿಸಿಸಿ ಟಾಸ್ಕ್‌ಫೋರ್ಸ್ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್‌ಶೇಕ್ ಪರಿಶೀಲಿಸಿ ಹೃದಯಸ್ಪರ್ಶಿ ಸ್ಪಂದಿಸಿದ ಘಟನೆ ಭಾನುವಾರ ಜರುಗಿದೆ.
ಉರಿಬಿಸಿಲ ಮಧ್ಯಾಹ್ನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಆಟೋ ಚಾಲಕ ಹಾಗೂ ಮಾಲೀಕರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿ ಹಗರಿಬೊಮ್ಮಹಳ್ಳಿಗೆ ಹಿಂದಿರುಗುವಾಗ ಪಟ್ಟಣದಿಂದ 1 ಕಿ.ಮೀ.ದೂರದಲ್ಲಿ ಮರಿಯಮ್ಮನಹಳ್ಳಿಗೆ ಹೋಗುವ ರಾಜ್ಯ ಹೆದ್ದಾರಿಯ ಮಾರ್ಗಮಧ್ಯದಲ್ಲಿ ವ್ಯಕ್ತಿಯೋರ್ವ ಬಿದ್ದಿದ್ದನು. ಕೂಡಲೇ ಹತ್ತಿರ ಹೋಗಿ ಪರಿಶೀಲಿಸಲಾಗಿ ನರಳುತ್ತಾ ಬಿದ್ದಿರುವ ವ್ಯಕ್ತಿಯನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.
ಕನ್ನಡಿಗರಿಗೆ ರೇಷನ್ ಕಿಟ್ ಕೊಡಲು ಹಿಂದೇಟು: ಆಂಧ್ರದಲ್ಲಿ ಆಹಾರಕ್ಕಾಗಿ ಗರ್ಭಿಣಿ ಸೇರಿ 70 ಕೂಲಿ ಕಾರ್ಮಿಕರ ಪರದಾಟ
ಈ ಬಗ್ಗೆ ಸಿರಾಜ್ ಶೇಕ್ ಪ್ರತಿಕ್ರಿಯಿಸಿ, ಅನಾಮಿಕ ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಬಿದ್ದು ನರಳುತ್ತಿರುವುದನ್ನು ಕಂಡು ತಮ್ಮ ವಾಹನವನ್ನು ನಿಲ್ಲಿಸಿ ನೋಡಲಾಗಿ ಮೈಮೇಲೆ ಬೆಡ್‌ಸೀಟ್ ಇದ್ದು, ಆಯಾಸದಿಂದ ಬಳಲುತ್ತಿದ್ದ, ಅತಿ ದೂರದಿಂದ ನಡೆದುಕೊಂಡು ಬಂದು ಬಿದ್ದಿರಬಹುದೆಂದು ಊಹಿಸಿ, ಆ್ಯಂಬುಲೆನ್ಸ್ 108ಗೆ ಕರೆಮಾಡಿ ನಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸುವ ಮೂಲಕ ಅನಾಮಿಕ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದೆವು ಎಂದರು.
ವ್ಯಕ್ತಿಗೆ ನೀರು ಕುಡಿಸಿದ ಬಳಿಕ, ಸ್ಥಳಕ್ಕೆ ಆಗಮಿಸಿದ ವೈದ್ಯರು ಜ್ವರ ಪರೀಕ್ಷಿಸಿದರು. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂಜೆಯಾದರೂ ಇನ್ನೂ ಪ್ರಜ್ಞೆಬಾರದಿರುವ ವಿಷಯ ತಿಳಿಯಿತು. ಅಲ್ಲದೆ, ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವುದಾಗಿ ವೈದರು ತಿಳಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳಿಸಿಕೊಡುವಂತ ಕೆಲಸ ತಾಲೂಕು ಆಡಳಿತ ಮಾಡಲಿದೆ ಎಂದರು.