ನ್ಯಾಯಾಧಿಕರಣದ ಆದೇಶದಂತೆ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ಅದು ವಿವಿಧ ಕಾರಣಕ್ಕೆ ಹಾಗೂ ಬಿಜೆಪಿ ನಾಯಕರ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗಿ, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದ ಕೋನರಡ್ಡಿ
ಹುಬ್ಬಳ್ಳಿ(ಅ.07): ಮಹದಾಯಿ ಮತ್ತು ಕಳಸಾಬಂಡೂರಿ ಕಾಮಗಾರಿಯ ಮೂಲಸ್ವರೂಪವನ್ನೇ ರಾಜ್ಯ ಸರ್ಕಾರ ಬದಲಿಸಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಇದರ ಸಾಧಕ ಬಾಧಕ ಚರ್ಚಿಸಲು ಅ. 23ರಂದು ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಧಿಕರಣದ ಆದೇಶದಂತೆ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ಅದು ವಿವಿಧ ಕಾರಣಕ್ಕೆ ಹಾಗೂ ಬಿಜೆಪಿ ನಾಯಕರ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗಿ, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು.
ಮೂಲ ಸ್ವರೂಪ ಬದಲು:
ರಾಜ್ಯ ಸರ್ಕಾರ ಮಹದಾಯಿ ಯೋಜನೆ ಅನುಷ್ಠಾನಕ್ಕೆ ತಯಾರಿಸಿದ್ದ ಮೊದಲ ಡಿಪಿಆರ್ನಲ್ಲಿ 28 ಮೀಟರ್ ಎತ್ತರದ ಆಣೆಕಟ್ಟು ಕಟ್ಟಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಯೋಜನೆಯ ಕಾಮಗಾರಿಯಲ್ಲಿ ಅನೇಕ ಬದಲಾವಣೆ ಮಾಡಿದ್ದು ಹೊಸ ಡಿಪಿಆರ್ ಸಿದ್ಧಪಡಿಸಿದೆ. ಅದರಲ್ಲಿ ಆಣೆಕಟ್ಟಿನ ಎತ್ತರವನ್ನು 11 ಮೀಟರ್ಗೆ ಇಳಿಕೆ ಮಾಡಲಾಗಿದೆ. ಇದು ಮಹದಾಯಿ ಯೋಜನೆಯ ಮೂಲ ಸ್ವರೂಪವನ್ನೇ ಬದಲಾವಣೆ ಮಾಡಿದಂತಾಗಿದೆ. ಇದರಿಂದ ರಾಜ್ಯದ ಜನತೆಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ಧಾರವಾಡ ಜಿಲ್ಲೆಯ ರೈತರ ಪಾಲಿಗೆ ಕಹಿಯಾದ ಕಬ್ಬು!
ನೂತನ ಡಿಪಿಆರ್ನಲ್ಲಿ ಮಹದಾಯಿ-ಕಳಸಾ ಬಂಡೂರಿಯ ವಿವಿಧ ನಾಲಾಗಳಿಂದ ಬರುವ ನೀರನ್ನು ಲಿಫ್ಟ್ ಮೂಲಕ ಮಲಪ್ರಭಾ ನದಿಗೆ ಸೇರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಅ. 23ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯಲ್ಲಿ ತಜ್ಞರ ಹಾಗೂ ವಿವಿಧ ಸಂಘಟನೆ, ರೈತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ, ಚರ್ಚಿಸಲಾಗುವುದು ಎಂದು ತಿಳಿಸಿದರು.
ಪರಿಹಾರದಲ್ಲಿ ತಾರತಮ್ಯ:
ಸರ್ಕಾರ ಧಾರವಾಡ ಜಿಲ್ಲೆಯ ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಉಳಿದ ಜಿಲ್ಲೆಗಿಂತ ಕಡಿಮೆ ಪರಿಹಾರ ನೀಡುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಮುಂಗಾರು ಬೆಳೆ ಮಳೆಯಿಂದ ಸಂಪೂರ್ಣ ಹಾನಿಯಾಗಿವೆ. ಸರ್ಕಾರಿ ಬೆಳೆಹಾನಿ ಪರಿಹಾರವಾಗಿ ಒಣಬೇಸಾಯದ ಪ್ರತಿ ಹೇಕ್ಟೆರ್ ಬೆಳೆಗೆ . 13,600, ನೀರಾವರಿ ಬೆಳೆಗೆ . 25 ಸಾವಿರ ಹಾಗೂ ತೋಟಗಾರಿಕೆ ಬೆಳೆಗೆ . 28 ಸಾವಿರ ನಿಗದಿಪಡಿಸಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ . 13 ಸಾವಿರದಿಂದ . 27 ಸಾವಿರ ಮಾತ್ರ ಬೆಳೆ ಪರಿಹಾರ ನೀಡಲಾಗುತ್ತಿದೆ. ಅನೇಕ ರೈತರ ಖಾತೆಗೆ ಇಂದಿಗೂ ಹಣ ಜಮೆಯಾಗಿಲ್ಲ ಎಂದು ಕೋನರಡ್ಡಿ ದೂರಿದರು.
ಧಾರವಾಡ: ಸೌಂಡ್ ಸ್ಪೀಕರ್ ಹಚ್ಚಿದಕ್ಕೆ ದುರ್ಗಾಮಾತಾ ಮಂಟಪಕ್ಕೆ ನುಗ್ಗಿ ಮಹಿಳಾ ಅಧಿಕಾರಿಯಿಂದ ದರ್ಪ..!
ಗದಗ ಜಿಲ್ಲೆಯ ರೈತರಿಗೆ ಪ್ರತಿ ಹೆಕ್ಟೇರ್ಗೆ . 50 ಸಾವಿರ ವರೆಗೆ (ಡಬ್ಬಲ್) ಸರ್ಕಾರ ಪರಿಹಾರ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯ ರೈತರಿಗೆ ಸರ್ಕಾರ ಹಾಗೂ ಸ್ಥಳೀಯ ಸಚಿವರು ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ಕೂಡಲೇ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿಗೂ ಪ್ರತಿ ಹೆಕ್ಟೇರ್ಗೆ 50 ಸಾವಿರ ಬೆಳೆ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಮುಂಬರುವ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಹುಬ್ಬಳ್ಳಿ ಸೇರಿದಂತೆ ಅನೇಕರಿದ್ದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ ಜೋಡೋ ಯಾತ್ರೆಗೆ ಜನ ಮೆಚ್ಚಿಗೆ ದೊರೆಯುತ್ತಿದೆ. ಅದನ್ನು ಸಹಿಸಲಾಗದೇ ಬಿಜೆಪಿಯವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಯಾತ್ರೆಯಲ್ಲಿ ನಾನು ಕೂಡಾ ಭಾಗವಹಿಸುತ್ತೇನೆ ಅಂತ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದ್ದಾರೆ.