ತೆರವು ಕಾರ್ಯಾಚರಣೆ ಮಾಡ್ತಿದ್ದ ಜೆಸಿಬಿ ಡ್ರೈವರ್ ಮೇಲೆ ಮಾಜಿ ಶಾಸಕ ಹಲ್ಲೆ

By Kannadaprabha NewsFirst Published Jul 10, 2020, 12:31 PM IST
Highlights

ಹಳೆ ಬಸ್‌ ನಿಲ್ದಾಣ ಹಾಗೂ ಗ್ರಾಪಂ ಕಟ್ಟಡ ತೆರವುಗೊಳಿಸಿ ನಡೆಸುತ್ತಿದ್ದ ರಸ್ತೆ ಅಭಿವೃದ್ಧಿ ಕಾರ್ಯಾಚರಣೆಗೆ ಮಾಜಿ ಶಾಸಕ ಮತ್ತು ಅವರ ಬೆಂಬಲಿಗರು ತಡೆದು ಜೆಸಿಬಿ ಯಂತ್ರವನ್ನು ಹಾನಿಗೊಳಿಸಿ ಯಂತ್ರದ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಶ್ರೀರಂಗಪಟ್ಟಣ(ಜು.10): ಹಳೆ ಬಸ್‌ ನಿಲ್ದಾಣ ಹಾಗೂ ಗ್ರಾಪಂ ಕಟ್ಟಡ ತೆರವುಗೊಳಿಸಿ ನಡೆಸುತ್ತಿದ್ದ ರಸ್ತೆ ಅಭಿವೃದ್ಧಿ ಕಾರ್ಯಾಚರಣೆಗೆ ಮಾಜಿ ಶಾಸಕ ಮತ್ತು ಅವರ ಬೆಂಬಲಿಗರು ತಡೆದು ಜೆಸಿಬಿ ಯಂತ್ರವನ್ನು ಹಾನಿಗೊಳಿಸಿ ಯಂತ್ರದ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ತಾಲೂಕಿನ ಅರಕೆರೆಯಲ್ಲಿ ಗುರುವಾರ ಘಟನೆ ನಡೆದಿದ್ದು, ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಮತ್ತು ಅವರ ಬೆಂಬಲಿಗರು ರಸ್ತೆ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಜೆಸಿಬಿ ಯಂತ್ರವನ್ನು ಕಲ್ಲಿನಿಂದ ಹಾನಿಗೊಳಿಸಿ ಚಾಲಕ ನಾಗರಾಜು ಅಲಿಯಾಸ್‌ ನಾಗೇಂದ್ರನನ್ನು ಥಳಿಸಿದ್ದಾರೆ. ಜೊತೆಗೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ಘಟನೆ ವಿವರ:

ಅರಕೆರೆ ಗ್ರಾಮ ಪರಿಮಿತಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಹಳೆಯ ಬಸ್‌ ನಿಲ್ದಾಣ ಹಾಗೂ ಅದಕ್ಕೆ ಹೊಂದಿಕೊಂಡಂತಿದ್ದ ಗ್ರಾಪಂ ಮಳಿಗೆಯ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ್ದಾರೆ. ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಅಸಹಾಯಕರಾಗಿ ನಿಂತ ಪರಿಣಾಮ ಚಾಲಕನಿಗೆ ಸಾರ್ವಜನಿಕರೂ ಸಹ ಹಲ್ಲೆ ನಡೆಸಿದ್ದಾರೆ.

ಹಿನ್ನೆಲೆ ಏನು?

ಗ್ರಾಮದ ಶಿಥಿಲಾವಸ್ಥೆಯಲ್ಲಿದ್ದ ಬಸ್‌ ನಿಲ್ದಾಣವನ್ನು ತೆರವುಗೊಳಿಸಿ ನೂತನ ಬಸ್‌ ನಿಲ್ದಾಣ ನಿರ್ಮಿಸಲು ಮತ್ತು ಗ್ರಾಪಂ ಕಟ್ಟಡಗಳನ್ನು ರಸ್ತೆಯ ಅನೂಕೂಲಕ್ಕಾಗಿ ತೆರವುಗೊಳಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಕಟ್ಟಡದಲ್ಲಿದ್ದ ಬಾಡಿಗೆದಾರರಿಗೆ ಖಾಲಿ ಮಾಡುವಂತೆ ಮೊದಲೇ ನೋಟಿಸ್‌ ನೀಡಿ ಮನವಿ ಮಾಡಲಾಗಿತ್ತು.

ಆದರೂ ಕೆಲವರು ಉದ್ದೇಶಪೂರ್ವಕವಾಗಿ ಖಾಲಿ ಮಾಡದೇ ಮಳಿಗೆಗಳಿಗೆ ಬೀಗ ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಿಯ ಗ್ರಾಪಂ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ತೆರವು ಮಾಡಿ ಕಾಮಗಾರಿಗೆ ಬಳಸಿಕೊಳ್ಳುವಂತೆ ನೀಡಿದ ಸೂಚನೆ ನ್ನಲೆಯಲ್ಲಿ ತಾಪಂ ಇಒ ನೀಡಿದ ಅನುಮತಿ ಪತ್ರದೊಂದಿಗೆ ಲೋಕೋಪಯೋಗಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ, ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಕಾಮಗಾರಿ ವಿರೋಧಿಸಿ ಮೊದಲು ಪರಿಹಾರ ನೀಡುವಂತೆ ಪಟ್ಟು ಹಿಡಿದು ದಾಂಧಲೆ ನಡೆಸಿದ್ದಾರೆ.

 

ತಾಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ರಾಜಕೀಯ ಪೈಪೋಟಿ ತಾರಕ್ಕಕ್ಕೇರಿದ್ದು, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಪ್ರತಿಷ್ಠೆ ತಲೆದೋರಿದೆ. ಅರಕೆರೆ ಗ್ರಾಮದಲ್ಲಿ ಚತುಷ್ಟಥ ರಸ್ತೆ ವಿಸ್ತರಣೆ ಯೋಜನೆ ಕೈಗೆತ್ತಿಕೊಂಡಿದ್ದು, ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೋಭರಾಣಿ, ತಹಸೀಲ್ದಾರ್‌ ಎಂ.ರೂಪಾ, ತಾಪಂ ಇಒ ನಾಗವೇಣಿ ಸೇರಿದಂತೆ ಅಧಿಕಾರಿಗಳು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಇತರೆ ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಶಾಂತಿ ಸಭೆ ನಡೆಸಿ ಕಾಮಾಗಾರಿ ತಡೆಡಿದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿ ಕೆಲವು ದಿನಗಳ ಒಳಗಾಗಿ ಸರ್ವೆ ಕಾರ್ಯ ನಡೆಸುವಂತೆ ಆದೇಶಿಸಿದ್ದಾರೆ.

ಅರಕೆರೆ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಖ್ಯ ಬೀದಿ, ಮಾರಿಗುಡಿ ಸರ್ಕಲ್‌, ಪಾಲಿಟೆಕ್ನಿಕ್‌ ಕಾಲೇಜು ವೃತ್ತದ ಬಳಿ ಹೆಚ್ಚು ಪೊಲೀಸರನ್ನು ಹಾಕಲಾಗಿದೆ. ಡಿಎಆರ್‌ ಮತ್ತು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

 

ಶಾಸಕ ರವೀಂದ್ರ ಆಕ್ರೋಶ

ಕ್ಷೇತ್ರದ ಪ್ರಗತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅಭಿವೃದ್ಧಿಯನ್ನು ಸಂಪೂರ್ಣ ತಡೆಯುತ್ತಿದ್ದಾರೆ. ಕ್ಷೇತ್ರ ಮತ್ತು ಗ್ರಾಮದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟು ಜನರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಆ ರಸ್ತೆಗೆ ಅವರ ತಂದೆ ಮಾಜಿ ಸಚಿವ ದಿ. ಬಂಡಿಸಿದ್ದೇಗೌಡರ ಹೆಸರನ್ನೇ ಇಡಲಿ. ಆದರೆ ಈ ರೀತಿ ಪುಂಡಾಟಿಕೆ ನಡೆಸುವುದು ಸರಿಯಲ್ಲ. ಇಂದಿನ ಘಟನೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಪ್ರಭಾವಿಗಳ ಎದುರು ಮಂಡಿಯೂರಿರುವುದಕ್ಕೆ ಸಾಕ್ಷಿಯಾಗಿದೆ. ಒಂದು ವೇಳೆ ಘಟನೆಯಿಂದ ಜೆಸಿಬಿ ಯಂತ್ರದ ಚಾಲಕ ಮೃತಪಟ್ಟಿದ್ದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಆಗ್ರಹ

ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಮಾಡುವ ಮುನ್ನ ಮನೆ ಹಾಗೂ ಅಂಗಡಿ ಮಳಿಗೆಗಳನ್ನು ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ಕೊಟ್ಟು ಕಾಮಗಾರಿ ಆರಂಭಿಸಲಿ. ಅದನ್ನು ಬಿಟ್ಟು ಏಕಾಏಕಿ ತೆರವುಗೊಳಿಸಿದರೆ ಅವರ ಜೀವನದ ಗತಿ ಏನು ಎನ್ನುವುದು ನನ್ನ ಹಾಗೂ ಬೆಂಬಲಿಗರ ಒತ್ತಾಯ.

ದೂರು, ಪ್ರತಿದೂರು:

ತೆರವು ಕಾರ್ಯಚರಣೆ ಸಂಬಂಧಿಸಿದಂತೆ ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಹಾಗೂ ಜೆಸಿಬಿ ಯಂತ್ರದ ಚಾಲಕ ವೆಂಕಟೇಶ್‌ ಎಂಬಾತನ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ತಾಪಂ ಸದಸ್ಯ ಸಂತೋಷ್‌ ಮತ್ತು ಎಬಿಆರ್‌ ಅಭಿಮಾನಿ ಸಂಘದ ಅಧ್ಯಕ್ಷ ಶಶಾಂಕ್‌ ಸೇರಿದಂತೆ ಹಲವರ ಮೇಲೆ ಲೋಕೋಪಯೋಗಿ ಇಲಾಖೆಯ ಎಇಇ ಮಹೇಶ್‌ ಅರಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿ ದೂರು: ಗ್ರಾಮ ಪಂಚಾಯಿತಿ ವತಿಯಿಂದ ಬಾಡಿಗೆಗೆ ಪಡೆದಿದ್ದ ಸುಮಾ ಲೋಕೋಪಯೋಗಿ ಇಲಾಖೆ ಎಇಇ ಮಹೇಶ್‌, ಎಇ ರೇವಣ್ಣ ಮತ್ತು ಜೆಸಿಬಿ ಚಾಲಕನ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

ಪ್ರಕರಣ ತಿರುಚಲು ಯತ್ನ

ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಪ್ರಕರಣವನ್ನು ತಿರಚಲು ಮುಂದಾದ ಮಾಜಿ ಶಾಸಕರ ಕೆಲ ಬೆಂಬಲಿಗರು ತೆರವುಗೊಳಿಸುತ್ತಿದ್ದ ಖಾಲಿ ಸ್ಥಳದಲ್ಲಿ ಮಳೆಯೊಬ್ಬರನ್ನು ಕೂರಿಸಿ ತಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ ಎಂದು ನಾಟಕೀಯ ಬೆಳವಣಿಗೆಯನ್ನು ಸೃಷ್ಟಿಸಿದ ಘಟನೆ ಗುರುವಾರ ನಡೆಯಿತು. ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಸಾರ್ವಜನಿಕವಾಗಿ ಜೆಸಿಬಿ ಯಂತ್ರದ ಚಾಲಕನಿಗೆ ಹಲ್ಲೆ ನಡೆಸಿದ್ದರೂ, ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ, ಸಾಮಾನ್ಯ ಜನರಿಗೆ ಒಂದು ನ್ಯಾಯ, ಮಾಜಿ ಶಾಸಕರಿಗೆ ಒಂದು ನ್ಯಾಯ, ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ, ಸಾರ್ವಜನಿಕವಾಗಿ ಹಲ್ಲೆ ನಡೆಸಿದವರ ಮೇಲೆ ಸುಮುಟೋ ಪ್ರಕರಣ ದಾಖಲಿಸದೆ ಬಿಟ್ಟಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನ ಮೂಡಿಸುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಮರೀಗೌಡ ಆರೋಪಿಸಿದರು.

click me!