ಬಿಜೆಪಿಯಿಂದ ದ್ವೇಷ ರಾಜಕಾರಣ, ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದ ತಂಗಡಗಿ

By Kannadaprabha NewsFirst Published Nov 5, 2020, 11:30 AM IST
Highlights

ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸಿ ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರವನ್ನು ಬಿಜೆಪಿ ನಡೆಸಿದೆ: ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪ| ಸುಳ್ಳು ಕೇಸ್‌ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು| 

ಕನಕಗಿರಿ(ನ.05): ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ದಾಖಲಿಸುವ ಮೂಲಕ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ. 

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸಿ ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಈ ಹಿಂದೆ ತಿಪ್ಪನಾಳ ಗ್ರಾಮದ ಕೃಷ್ಣಪ್ಪ ಉಪ್ಪಾರ ಮೇಲೆ ರಸ್ತೆ ಡಾಂಬರೀಕರಣದ ಸಲುವಾಗಿ ದೌರ್ಜನ್ಯವೆಸಗಿದ್ದರು. ಇದೀಗ ಕನಕಗಿರಿ ಪಪಂ ಸದಸ್ಯ ಮಂಜುನಾಥ ಗಡಾದ ಮೇಲೂ ಸುಳ್ಳು ದೂರು ದಾಖಲಿಸಿದ ಬಿಜೆಪಿಯವರು ಅಧಿಕಾರಿಗಳಿಗೆ ಒತ್ತಡ ಹೇರಿ ಕೇಸ್‌ ದಾಖಲಿಸಿದ್ದಾರೆ ಎಂದು ಹೇಳಿದರು.

ಅ. 20ರಂದು ಪಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಹಿನ್ನಲೆಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಹಿಂದೂ ಲಿಂಗಾಯತ ಎಂದು ತಿಳಿದು ಬಂದಿದ್ದರಿಂದ ಚುನಾವಣಾಧಿಕಾರಿಗಳಿಗೆ ತಕರಾರು ಸಲ್ಲಿಸಲಾಗಿತ್ತು. ತಕರಾರು ಸಲ್ಲಿಸಿದ್ದೇವೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಮುಖಂಡ ಮಂಜು ಗಡಾದ ಮೇಲೆ ಸುಳ್ಳು ಕೇಸ್‌ ದಾಖಲಿಸಲಾಗಿದೆ. ಮಂಜು ಗಡಾದ ಜಾತಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿಲ್ಲ. ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದ ಮೇಲೂ ಸುಳ್ಳು ಕೇಸ್‌ ದಾಖಲಿಸಿ 420 ಸೆಕ್ಷನ್‌ ಹಾಕಿಸಿದ್ದು, ದ್ವೇಷದ ರಾಜಕಾರಣಕ್ಕೆ ಉದಾಹರಣೆಯಾಗಿದೆ. ಹೀಗೆ ಸುಳ್ಳು ಕೇಸ್‌ ದಾಖಲಿಸುವುದು ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ತಂಗಡಗಿ ಗಡಾದ ಅವರ ಮೇಲೆ ಆಗಿರುವ ಸುಳ್ಳು ಕೇಸ್‌ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ: ಬಿಜೆಪಿ ಸದಸ್ಯರ ವಿರುದ್ಧ ದೂರು

ತಾಪಂ ಅಧ್ಯಕ್ಷ ಮಮ್ಮದರಫಿ, ಪಪಂ ಸದಸ್ಯರಾದ ಪಾಷಾಸಾಬ್‌ ಮುಲ್ಲಾರ, ಖಾಜಸಾಬ್‌ ಗುರಿಕಾರ, ಶರಣಪ್ಪ ಬತ್ತದ, ಪಕ್ಷದ ಹಿರಿಯರಾದ ಅಂಬಣ್ಣ ನಾಯಕ, ರೆಡ್ಡಿ ಶ್ರೀನಿವಾಸ, ಸಿದ್ದಪ್ಪ ನಿರ್ಲೂಟಿ, ಅನಿಲ ಬಿಜ್ಜಳ, ಪ್ರಶಾಂತ ಪ್ರಭುಶೆಟ್ಟರ್‌, ದೇಸಾಯಿಗೌಡ್ರ, ಶರಣೇಗೌಡ, ವಿರೂಪಾಕ್ಷ ಆಂದ್ರ, ಗಂಗಾಧರ ಇದ್ದರು.

ಹೇಳಿಕೆ:

ಕೆಲವು ಬಿಜೆಪಿಯವರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ದಾಖಲಿಸಿ 420 ಸೆಕ್ಷನ್‌ ಹಾಕಿಸಿದ್ದು ಯಾವ ಪುರುಷಾರ್ಥಕ್ಕೆ? ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಕಾನೂನು ಹೋರಾಟ ಮಾಡುತ್ತೇವೆ. ಮುಖ್ಯೋಪಾಧ್ಯಾಯರಿಗೆ ಒತ್ತಡ ಹೇರಿ ಬಿಜೆಪಿಯವರು ಕೇಸ್‌ ದಾಖಲಿಸಿ ದ್ವೇಷದ ರಾಜಕಾರಣ ಮಾಡುತ್ತಿರುವುದು ಸಲ್ಲ ಎಂದು ಕಾಂಗ್ರೆಸ್‌ ಮುಖಂಡ ಗಂಗಾಧರಸ್ವಾಮಿ ತಿಳಿಸಿದ್ದಾರೆ.

ನಾನು ಜಾತಿ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿಲ್ಲ. ಆದರೂ ಬಿಜೆಪಿಯ ಆರೇಳು ಜನ ಸೇರಿ ನನ್ನ ಮೇಲೆ ದೌರ್ಜನ್ಯ ಮಾಡಿ, ಅಧಿಕಾರಿಗಳಿಗೆ ಒತ್ತಡ ಹಾಕಿ 420 ಕೇಸ್‌ ದಾಖಲಿಸಿದ್ದಾರೆ. ಶಾಲೆಯಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿನ ವಿಡಿಯೋ ವೀಕ್ಷಿಸಿದಾಗ ಸತ್ಯಾಂಶ ಹೊರ ಬೀಳಲಿದೆ. ಅದಕ್ಕಾಗಿ ಈ ಬಗ್ಗೆ ಎಸ್‌ಪಿ ಅವರು ಉನ್ನತ ಮಟ್ಟದ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಮಂಜು ಗಡಾದ ಹೇಳಿದ್ದಾರೆ. 
 

click me!