ಜಲಸಂಪನ್ಮೂಲ ಖಾತೆಗೆ ನಿರ್ವಹಿಸಲು ನಾನಾ ಭಾಷೆಯ ಜ್ಞಾನ ಇರಬೇಕು| ಈ ಖಾತೆ ನಿಭಾಯಿಸುವುದು ಅಷ್ಟು ಸುಲಭ ಅಲ್ಲ| ಡಿಕೆಶಿ ಮತ್ತು ರಮೇಶ ನಡುವೆ ಕುಸ್ತಿ ಇರುವುದು ನಿಜ| ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಎನ್ನುವುದು ಗೊತ್ತಿಲ್ಲ|
ಕೊಪ್ಪಳ(ಫೆ.23): ಪದೇ ಪದೆ ರಾಜೀನಾಮೆ ನೀಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರು ಮತ್ತೆ ರಾಜೀನಾಮೆ ನೀಡುವ ಮಾತನಾಡಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಬೆಳಗ್ಗೆ ಎದ್ದ ತಕ್ಷಣ ರಾಜೀನಾಮೆ ನೀಡುತ್ತೇನೆ. ನನ್ನ ಜೊತೆ ಅಷ್ಟು ಜನ ಇದ್ದಾರೆ, ಇಷ್ಟು ಜನ ಇದ್ದಾರೆ ಎನ್ನುವ ಮೂಲಕ ಬ್ಲಾಕ್ ಮೇಲ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮಹೇಶ ಕುಮಟಳ್ಳಿ ಅವರ ವಿಷಯದ ಕುರಿತು ರಾಜೀನಾಮೆ ನೀಡುತ್ತೇನೆ ಎಂದರೆ ಇದಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು. ರಮೇಶ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಬಾರದು ಎನ್ನುವುದು ಅದೇ ಪಕ್ಷದಲ್ಲಿನ ಒತ್ತಡ ಇತ್ತು. ಆದರೂ ನೀಡಲಾಗಿದ್ದು, ಹೇಗೆ ನಿಭಾಯಿಸುತ್ತಾರೆ ಎನ್ನುವುದು ಅಧಿವೇಶನದಲ್ಲಿ ಗೊತ್ತಾಗುತ್ತದೆ. ಬಿಜೆಪಿಗೆ ಹೋದ ಮೇಲೆ ಅಲ್ಲಿಯ ತತ್ವ-ಸಿದ್ಧಾಂತಕ್ಕೆ ಹೊಂದಿಕೊಳ್ಳಬೇಕು ಎಂದರು.
'ಜಲಸಂಪನ್ಮೂಲ ಖಾತೆ ನಿಭಾಯಿಸಿ ಉತ್ತರ ಕೊಡ್ತೇನೆ'
ಜಲಸಂಪನ್ಮೂಲ ಖಾತೆಗೆ ನಿರ್ವಹಿಸಲು ನಾನಾ ಭಾಷೆಯ ಜ್ಞಾನ ಇರಬೇಕು, ಕಾನೂನು ತೊಡಕು ಬರುತ್ತದೆ. ಹೀಗೆ ಅದನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ, ಡಿಕೆಶಿ ಅವರ ಜಿದ್ದಿನ ಮೇಲೆ ಖಾತೆ ಪಡೆದಿದ್ದಾರೆ ಎನ್ನುವುದು ಸರಿಯಲ್ಲ. ಆದರೆ, ಡಿಕೆಶಿ ಮತ್ತು ರಮೇಶ ನಡುವೆ ಕುಸ್ತಿ ಇರುವುದು ನಿಜ. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಎನ್ನುವುದು ಗೊತ್ತಿಲ್ಲ ಎಂದರು. ಎಸ್ಟಿ ಮೀಸಲು ಹೆಚ್ಚಳ ಮಾಡುವ ಕುರಿತು ಈ ಹಿಂದೆ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ. ಹೀಗಾಗಿ ಈಗ ಅದನ್ನು ನೀಡಬೇಕು ಎನ್ನುವುದಕ್ಕೆ ಗಡುವು ನೀಡಿದ್ದು, ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು. ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೇನೆ ಎಂದರು.
ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸುವ ವಿಚಾರ ಸರಿಯಲ್ಲ, ಹಣಕಾಸಿನ ಸಮಸ್ಯೆ ಇರುವುದರಿಂದ ಬಿಜೆಪಿ ಇಂಥದ್ದೆಲ್ಲಾ ಮಾಡಲು ಮುಂದಾ ಗುತ್ತಿದೆ. ಬಿಜೆಪಿ ಶಿಸ್ತಿನ ಪಕ್ಷವಾಗಿ ಈಗ ಉಳಿದಿಲ್ಲ ಎನ್ನುವುದಕ್ಕೆ ಇವುಗಳು ಉದಾಹರಣೆ ಎಂದರು.