ನಾನು ಮುನಿಸಿಕೊಂಡು ಬಳ್ಳಾರಿಗೆ ಬರಲಿಲ್ಲ: ಶ್ರೀರಾಮುಲು

By Kannadaprabha NewsFirst Published Jul 30, 2021, 12:00 PM IST
Highlights

* ಡಿಸಿಎಂ ಹುದ್ದೆ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ
* ಡಿಸಿಎಂ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ
* ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಪ್ರಗತಿ ಕಾಣಲಿದೆ

ಬಳ್ಳಾರಿ(ಜು.30):  ನನ್ನನ್ನು ಡಿಸಿಎಂ ಘೋಷಣೆ ಮಾಡಿಲ್ಲ ಎಂದು ಮುನಿಸಿಕೊಂಡಿಲ್ಲ. ಮನೆಯಲ್ಲಿ ಪೂರ್ವನಿಯೋಜಿತ ಪೂಜೆ ಇತ್ತು, ಬಳ್ಳಾರಿಗೆ ಬಂದೆ. ಹೀಗಾಗಿಯೇ ಸಿಎಂ ಪದಗ್ರಹಣ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಸ್ಪಷ್ಟಣೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುನಿಸಿಕೊಂಡು ಬಳ್ಳಾರಿಗೆ ಬಂದಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂಥ ಯಾವುದೇ ಮುನಿಸು ಇಲ್ಲ, ಡಿಸಿಎಂ ಹುದ್ದೆ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.
ಡಿಸಿಎಂ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿಲುವು ಹೈಕಮಾಂಡ್‌ ತೆಗೆದುಕೊಳ್ಳಲಿದೆ. ಹಿಂದುಳಿದ ಸಮುದಾಯದಿಂದ ಬಂದಿರುವ ನನಗೆ ಪಕ್ಷ ಸಾಕಷ್ಟುಸ್ಥಾನಮಾನಗಳನ್ನು ನೀಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನ್ನನ್ನು ಪಕ್ಷ ಗುರುತಿಸಲಿದೆ ಎಂಬ ವಿಶ್ವಾಸವೂ ನನಗಿದೆ. ಅಷ್ಟಕ್ಕೂ ನನ್ನನ್ನು ಡಿಸಿಎಂ ಮಾಡೋದು, ಬಿಡೋದು ಪಕ್ಷಕ್ಕೆ ಬಿಟ್ಟವಿಚಾರ. ಈ ಕುರಿತು ವೈಯಕ್ತಿಕವಾಗಿ ಏನನ್ನೂ ಹೇಳಲು ಆಗದು ಎಂದು ತಿಳಿಸಿದರು.

ಬೊಮ್ಮಾಯಿ ಪದಗ್ರಹಣಕ್ಕೆ ಗೈರು: ಶ್ರೀರಾಮುಲು ಮುನಿಸಿಗೆ ಕಾರಣವೇನು?

ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಇದ್ದಾಗ ವಿಜಯೇಂದ್ರ ಶ್ಯಾಡೋ ಸಿಎಂ ಅಂತಿದ್ರು. ಈಗ ಯಡಿಯೂರಪ್ಪ ಅವರ ಶ್ಯಾಡೋ ಸಿಎಂ ಅಂತಾರೆ. ವಿರೋಧ ಪಕ್ಷಗಳು ಸುಖಾಸುಮ್ಮನೆ ಈ ರೀತಿಯ ಆರೋಪಗಳನ್ನು ಮಾಡುತ್ತವೆ. ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರವನ್ನು ನಿಭಾಯಿಸುವ ಶಕ್ತಿ ಇದೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಹಾಗೂ ರಾಜ್ಯದ ಅಭಿವೃದ್ಧಿಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಹೀಗಾಗಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಪ್ರಗತಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2023ರಲ್ಲಿ ಜರುಗುವ ಚುನಾವಣೆಯಲ್ಲೂ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ. ಈ ನಿಟ್ಟಿನಲ್ಲಿ ಇಡೀ ರಾಜ್ಯದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಕಡೆಗೆ ಸರ್ಕಾರ ಗಮನ ಹರಿಸಲಿದೆ ಎಂದರು.
 

click me!