ಮೋದಿ ವಿರೋಧಿಸಿದರೆ ದೇಶ ವಿರೋಧಿಯೇ?: ಸಸಿಕಾಂತ ಸಿಂಥೆಲ್‌

By Kannadaprabha NewsFirst Published Jan 17, 2020, 7:31 AM IST
Highlights

ಮೋದಿಯ ಜನ ವಿರೋಧಿ ಕಾರ್ಯದ ವಿರುದ್ಧ ಜನರು ಪ್ರಶ್ನಿಸದೆ ಇರುವುದಕ್ಕೆ ದೇಶಕ್ಕೆ ಈ ಪ್ರಸಂಗ ಎದುರಾಗಿದೆ|  ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಮಾವೇಶದಲ್ಲಿ ಸಸಿಕಾಂತ ಸೆಂಥಿಲ್|  ನೋಟು ಅಪಮೌಲ್ಯ, ಜಿಎಸ್‌ಟಿ, ಸ್ವಚ್ಛ ಭಾರತ ಎಂದು ಹೇಳಿಕೊಂಡು ತಮ್ಮನ್ನು ತಾವು ಜಾಹೀರಾತುಗೊಳಿಸುತ್ತಿದ್ದಾರೆ|

ಧಾರವಾಡ(ಜ.17): ಪ್ರಧಾನಿ ನರೇಂದ್ರ ಮೋದಿ ವಿರೋಧಿಸಿದರೆ ದೇಶ ವಿರೋಧಿ ಎನ್ನುತ್ತಾರೆ. ಮೋದಿ ಅಂದರೆ ದೇಶ ಎನ್ನುವಂತೆ ಬಿಂಬಿಸಲಾಗಿದ್ದು, ಪ್ರದೇಶಕ್ಕೆ ತಕ್ಕಂತೆ ಭಾಷೆ, ವೇಷ ಬದಲಿಸಿ ಅವರು ನಾಟಕ ಮಾಡುತ್ತಿದ್ದಾರೆ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ ಸೆಂಥಿಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡ ಜನಜಾಗೃತಿ ಅಭಿಯಾನ ಗುರುವಾರ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ ಏತಕ್ಕಾಗಿ ಎಂಬ ಘೋಷವಾಕ್ಯದಡಿ ನಡೆದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೋದಿಯ ಜನ ವಿರೋಧಿ ಕಾರ್ಯದ ವಿರುದ್ಧ ಜನರು ಪ್ರಶ್ನಿಸದೆ ಇರುವುದಕ್ಕೆ ದೇಶಕ್ಕೆ ಈ ಪ್ರಸಂಗ ಎದುರಾಗಿದೆ. ಡಿ ಮಾನಿಟೈಜೇಶನ್‌ ತರದಲ್ಲಿ ಡಿ ಸಿಟಿಜನೈಜೇಶನ್‌ ಮಾಡಲಾಗುತ್ತಿದೆ ಎಂದು ಹರಿಹಾಯ್ದ ಅವರು, ನೋಟು ಅಪಮೌಲ್ಯ, ಜಿಎಸ್‌ಟಿ, ಸ್ವಚ್ಛ ಭಾರತ ಎಂದು ಹೇಳಿಕೊಂಡು ತಮ್ಮನ್ನು ತಾವು ಜಾಹೀರಾತುಗೊಳಿಸುತ್ತಿದ್ದಾರೆ. ಮೋದಿ ಮಾಡುವ ಭಾಷಣಗಳು ಸ್ಟಾಂಡ್‌ಪ್‌ ಕಾಮಿಡಿ ತರಾ ಇವೆ ಎಂದು ವ್ಯಂಗ್ಯವಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಂದ್ರಯಾನ ವಿಫಲ ವಿಚಾರದಲ್ಲಿ ಇಸ್ರೋ ವಿಫಲವಾದಾಗ ನಿರ್ದೇಶಕರನ್ನು ಸಂತೈಸಿದರು. ಆದರೆ, ಹಿಂದಿನ ದಿನ ಅವರೇ ಕೇಂದ್ರದಿಂದ ಹೊರ ಹೋಗಿ ಬೆಳಗ್ಗೆ ಬಂದು ಅಧಿಕಾರಿಯನ್ನು ಸಂತೈಸಿದರು. ಇದೆಲ್ಲ ಮೊದಲೇ ಸಿದ್ಧ ಮಾಡಿಟ್ಟುಕೊಂಡ ನಾಟಕ ಎಂದು ದೂರಿದರು.

ಹಿರಿಯ ಕಾರ್ಮಿಕ ಮುಖಂಡ ಡಾ. ಕೆ.ಎಸ್‌. ಶರ್ಮಾ ಮಾತನಾಡಿ, ಸಿಎಎ ನಾಗರಿಕತ್ವ ಕೊಡುವ ಕಾನೂನು ಹೊರತು ಕಿತ್ತುಕೊಳ್ಳುವುದು ಅಲ್ಲ ಎಂದು ಮೋದಿ ನೇತೃತ್ವದಲ್ಲಿ ಜಾಗೃತಿಗೆ ಮುಂದಾಗಿದ್ದಾರೆ. ಸರ್ಕಾರವೇ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಏಕಿದೆ ಎಂದು ಪ್ರಶ್ನಿಸಿದ ಅವರು, ಈ ಆಂದೋಲನಗಳು ಹಿಂದೂ ಮತ್ತು ಮುಸ್ಲಿಂ ವಿರುದ್ಧ ಅಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಅಂತಾಗಬಾರದು. ಇವು ಜನಾಂದೋಲನ ಆಗಬೇಕಿದೆ ಎಂದರು.

ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದ್ದರಿಂದ 19 ಲಕ್ಷ ಜನ ಪೌರತ್ವ ಕಳೆದುಕೊಂಡಿದ್ದಾರೆ. 130 ಕೊಟಿಗೂ ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಎಷ್ಟುಜನ ಪೌರತ್ವ ಕಳೆದುಕೊಳ್ಳಬಹುದು? ಜಾಗತಿಕವಾಗಿ ಸಿಎಎ ವಿರುದ್ಧ ಆಕ್ಷೇಪ ಕೇಳಿ ಬಂದಿವೆ. 86 ದೇಶಗಳು ಇದನ್ನು ವಿರೋಧಿಸಿವೆ. ಈ ಹೋರಾಟ ಸಿಎಎ ವಿರುದ್ಧಕ್ಕೆ ಸೀಮಿತವಾಗದೆ ಎಲ್ಲ ಶೋಷಿತರು ಒಗ್ಗೂಡಿಕೊಂಡು ಸಮಾನತೆ ಪಡೆಯುವ ನಿಟ್ಟಿನಲ್ಲಿ ಎರಡನೇ ಸ್ವಾತಂತ್ರ ಹೋರಾಟವಾಗಬೇಕು ಎಂದು ಶರ್ಮಾ ಹೇಳಿದರು.

ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಮಾತನಾಡಿ, ಇಂದು ಸಂವಿಧಾನಕ್ಕೆ ಗಂಡಾಂತರ ಬಂದಿದ್ದು ಸಿಎಎ ಕರಾಳ ಕಾನೂನು ಹಿಂಪಡೆಯಬೇಕು. ಎನ್‌ಪಿಆರ್‌ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರ ಧರ್ಮ-ಧರ್ಮಗಳ ನಡುವೆ ಒಡಕು ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಜಾಗೃತಿ ಅಭಿಯಾನದ ಗೌರವ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಇದು ಕೇವಲ ಮುಸ್ಲಿಂರ ಹೋರಾಟವಲ್ಲ, ಎಲ್ಲ ವಿಭಾಗದ ಜನರೂ ವಿರೋಧಿಸುತ್ತಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್‌ ಎನ್‌ಆರ್‌ಸಿ ತಂದಿತ್ತು. ಆಗ 3000 ಮುಸ್ಲಿಂರನ್ನು ಕೊಲ್ಲಲಾಯಿತು. ಆ ಪಕ್ಷ ಬೇಡ ಎಂದು ಬಿಜೆಪಿ ಬೆಂಬಲಿಸಿದ್ದಕ್ಕೆ ಇದೀಗ ಬಿಜೆಪಿ ಎಲ್ಲವನ್ನು ಮರೆತು ಈ ಕಾನೂನು ಜಾರಿಗೊಳಿಸಿದೆ ಎಂದು ದೂರಿದರು.

ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಂಜುಳಾ ಮುನವಳ್ಳಿ, ಸಂಚಾಲಕರಾದ ಬಿ. ರವಿ, ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಪೂಜಾರಿ ಮಾತನಾಡಿದರು. ಶಂಕರ ಹಲಗತ್ತಿ, ನಾಗರಾಜ ಗುರಿಕಾರ, ಗುರುನಾಥ ಉಳ್ಳಿಕಾಶಿ, ನಾಗಪ್ಪ ಉಂಡಿ, ರಸೂಲ್‌ನದಾಫ್‌, ಕೆ.ಎಚ್‌. ಪಾಟೀಲ ಇದ್ದರು.
 

click me!