
ಹಾಸನ (ನ.06): ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ದೇವಿಯ (Hasanamba Temple) ದರ್ಶನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹಾಸನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ₹1,000 ಮುಖಬೆಲೆಯ ವಿಶೇಷ ಟಿಕೆಟ್ನೊಂದಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅದ್ಧೂರಿ ಸ್ವಾಗತ ಕೋರಿದರು.
ಸಿದ್ದರಾಮಯ್ಯ ಅವರೊಂದಿಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಸಾಥ್ ನೀಡಿದರು. ಆದರೆ, ಈ ದರ್ಶನದ ವೇಳೆ ನಿಗದಿತ ಶಿಷ್ಟಾಚಾರದ (Protocol) ಸಮಯವನ್ನು ಮರೆತು ಜಿಲ್ಲಾಡಳಿತ ಮಾಜಿ ಸಿಎಂ ಅವರಿಗೆ ವಿಶೇಷ ಸೌಲಭ್ಯ ಒದಗಿಸಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹಾಸನಾಂಬ ದೇವಾಲಯದ ಮುಖ್ಯ ದ್ವಾರಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಸಿದ್ದರಾಮಯ್ಯ ಅವರು ದೇವಾಲಯದ ಆವರಣದೊಳಗೆ ಸಂಚರಿಸಲು ಸಿದ್ಧಪಡಿಸಲಾಗಿದ್ದ ವಿಶೇಷ ಬಗ್ಗೀಸ್ (Buggies) ವಾಹನದಲ್ಲಿ ಪ್ರವೇಶಿಸಿ ದೇವಿಯ ದರ್ಶನ ಪಡೆದುಕೊಂಡರು. ಸಿದ್ದರಾಮಯ್ಯ ಅವರು ಸ್ವತಃ ₹1,000 ಟಿಕೆಟ್ ಪಡೆದು ಸಾಲಿನಲ್ಲಿ ತೆರಳಿ ದರ್ಶನ ಪಡೆದರು.
ಹಾಸನಾಂಬೆ ದರ್ಶನದ ವೇಳೆ ವಿಐಪಿ ಹಾಗೂ ಗಣ್ಯರಿಗಾಗಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮಾತ್ರ ಶಿಷ್ಟಾಚಾರದ (Protocol) ಅಡಿಯಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನಿಗದಿತ ಅವಧಿ ಹೊರತುಪಡಿಸಿ ಸಂಜೆ 6.30 ಕ್ಕೆ ದರ್ಶನಕ್ಕೆ ಆಗಮಿಸಿದ್ದರು.
ಜನಸಾಮಾನ್ಯರು ಘಂಟೆಗಟ್ಟಲೆ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವಾಗ, ಶಿಷ್ಟಾಚಾರದ ಸಮಯ ಮೀರಿದ್ದರೂ ಸಹ ಸಿದ್ದರಾಮಯ್ಯ ಅವರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ನೇರ ಸೂಚನೆಯ ಮೇರೆಗೆ ಅಧಿಕಾರಿಗಳು ಎಲ್ಲಾ ನಿಯಮಗಳನ್ನು ಬದಿಗೊತ್ತಿ ಮಾಜಿ ಸಿಎಂಗಾಗಿ ಶಿಷ್ಟಾಚಾರವನ್ನೇ ಗಾಳಿಗೆ ತೂರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.