'ಅನುದಾನ ಕೊಡದ ಯಡಿಯೂರಪ್ಪನಿಗೆ ಜನತೆ ಬಾಯಿಗೆ ಬಂದಂಗೆ ಬೈಯ್ಯಬೇಕು'

By Suvarna News  |  First Published Jan 11, 2020, 10:34 AM IST

ಮಂಗಳೂರು ಗಲಭೆ ಪೊಲೀಸರ ಸೃಷ್ಟಿ ಎಂದಿದ್ದೆ: ಸಿದ್ದರಾಮಯ್ಯ| ಮಾಜಿ ಸಿಎಂ ಎಚ್‌ಡಿಕೆ ಮಂಗಳೂರು ಗಲಭೆ ಕುರಿತ ವಿಡಿಯೋಗಳಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ| 


ಬಾಗಲಕೋಟೆ(ಜ.11): ಮಂಗಳೂರು ಗಲಭೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಗಳ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾನು ಈ ಮೊದಲೇ ಮಂಗಳೂರಿನ ಘಟನೆಯನ್ನು ಪೊಲೀಸರು ಮಾಡಿರುವ ಸೃಷ್ಟಿ ಎಂದು ಹೇಳಿದ್ದೆ ಎಂದಿದ್ದಾರೆ.

ಜಿಲ್ಲೆಯ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಗಲಭೆ ಸಂಬಂಧ ನಾನು ಮಂಗಳೂರಿಗೆ ತೆರಳಿದ ಸಂದರ್ಭದಲ್ಲಿ ಪೊಲೀಸರು ಸೃಷ್ಟಿಮಾಡಿ ಅಮಾಯಕರ ಮೇಲೆ ಕೇಸ್‌ ಹಾಕಿದ್ದಾರೆ. ಅಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿಲ್ಲ. ಜೊತೆಗೆ ಅಮಾಯಕರ ಮೇಲೆ ಕೇಸ್‌ ಹಾಕಿರುವುದರ ಕುರಿತು ಸಹ ಈ ಮೊದಲೇ ಪೊಲೀಸರ ಕುರಿತು ಹೇಳಿದ್ದೆ ಎಂದು ನೆನಪಿಸಿದರು. ಅಲ್ಲದೆ, ಎಲ್ಲವನ್ನು ಸೃಷ್ಟಿ ಮಾಡಿರುವ ಪೊಲೀಸರು ತಪ್ಪು ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.

Tap to resize

Latest Videos

ನೋಟಿಸ್‌ ಬಂದಿಲ್ಲ:

ಬೆಂಗಳೂರಿನ ಕಾವೇರಿ ನಿವಾಸ ತೊರೆಯುವಂತೆ ನನಗೆ ಕೋರ್ಟ್‌ನಿಂದ ಯಾವುದೇ ನೋಟಿಸ್‌ ಬಂದಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನೆರೆ, ಮಳೆಹಾನಿಯಿಂದ ರಸ್ತೆ ರಿಪೇರಿಗೆ ಬಿಡುಗಡೆಯಾದ ಅನುದಾನವನ್ನು ಬಿಜೆಪಿ ಮುಖಂಡರ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಆ ರೀತಿ ಹಣ ಬಿಡುಗಡೆ ಮಾಡಲಿಕ್ಕೆ ಬರುವುದಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾದಾಮಿಯಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ಮತಕ್ಷೇತ್ರದ ಹಾಗನೂರು ಗ್ರಾಮದ ಸಿದ್ದಪ್ಪ ಎಂಬುವರು ಉದ್ಯೋಗ ಖಾತ್ರಿ ಕ್ರಿಯಾ ಯೋಜನೆಗೆ ಎಂಜಿನಿಯರ್‌ ರಮೇಶ ಎಂಬುವರು ಲಂಚ ಕೇಳುತ್ತಿದ್ದಾರೆ ಎಂಬುದನ್ನು ಗಮನಕ್ಕೆ ತಂದರು. ಆಗ ಆಕ್ರೋಶಗೊಂಡ ಸಿದ್ದರಾಮಯ್ಯ ಸ್ಥಳದಲ್ಲಿದ್ದ ತಾಪಂ ಇಒ ಸೂಚನೆ ನೀಡಿ ಸಂಬಂಧಿ​ಸಿದ ಅ​ಧಿಕಾರಿಯನ್ನು ಸಸ್ಪೆಂಡ್‌ ಮಾಡಲು ಸೂಚಿಸಿದರು.

ಯಡಿಯೂರಪ್ಪನಿಗೆ ಬೈಯ್ಯಬೇಕು:

ನೆರೆ ಹಾಗೂ ಪ್ರವಾಹ ಸಂದರ್ಭದಲ್ಲಿ ಹಾನಿಗೀಡಾದ ವಿವಿಧ ಗ್ರಾಮಗಳಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಪರಿಹಾರ ಧನ ನೀಡಿರುವ ಕುರಿತು ತಹಸೀಲ್ದಾರ್‌ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದರೂ ಹಣ ನೀಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಣ ಬಿಡುಗಡೆ ಮಾಡದೆ ಹೋದರೆ ಅ​ಧಿಕಾರಿಗಳಾದರೂ ಏನು ಮಾಡಬೇಕು ಎಂದು ಸಾರ್ವಜನಿಕರ ಎದುರು ಹೇಳಿದ ಸಿದ್ದರಾಮಯ್ಯ, ಅನುದಾನ ಕೊಡದ ಯಡಿಯೂರಪ್ಪನಿಗೆ ಜನತೆ ನೀವೇ ಬಾಯಿಗೆ ಬಂದಂಗೆ ಬೈಯ್ಯಬೇಕು ಎಂದು ಹೇಳಿದರು.

ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಿ:

ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಮತಕ್ಷೇತ್ರದ ಬೇಲೂರು, ಜಾಲಿಹಾಳ ಗ್ರಾಮದ ವಿಕಲಚೇತನ ಹಣಮಂತ ಎಂಬುವರು ಸಿದ್ದರಾಮಯ್ಯ ಎದುರು ಕಣ್ಣೀರು ಹಾಕಿ ವಿಕಲಚೇತನ ಸೌಲಭ್ಯ ನೀಡಲು ಅ​ಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಗೋಳು ತೋಡಿಕೊಂಡರು. ವಿಕಲಚೇತನ ಹಣಮಂತನ ಗೋಳು ಕೇಳಿದ ಸಿದ್ದರಾಮಯ್ಯ ಸ್ಥಳದಲ್ಲಿದ್ದ ತಹಸೀಲ್ದಾರರಿಗೆ ಮಾಸಾಶನ ಕಲ್ಪಿಸುವಂತೆ ಸೂಚಿಸಿದರಲ್ಲದೆ, ಶಾಸಕರ ನಿ​ಧಿಯಲ್ಲಿಯೂ ಸೌಲಭ್ಯ ಕಲ್ಪಿಸಲು ನಿರ್ದೇಶಿಸಿದರು.

ಯಡಿಯೂರಪ್ಪ ಎಷ್ಟುವರ್ಷ ಸಿಎಂ ಆಗಿರ್ತಾರೆ ನೋಡೋಣ

ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಬಾರದು ಎಂದು ರಾಜ್ಯದ ಜನ ತೀರ್ಮಾನ ಮಾಡಿದ್ದರು. ಆದರೆ, ಈಗ ಒಂದೂವರೆ ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಗಳಾದರು ಎಂದು ಹೇಳಿದರು. ಬಾದಾಮಿ ತಾಲೂಕಿನ ಮತಕ್ಷೇತ್ರ ವ್ಯಾಪ್ತಿಯ ಲಾಯದಗುಂದಿ ಗ್ರಾಮದ ನೂತನ ಗ್ರಾಪಂ ಕಚೇರಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಈ ಒಂದೂವರೆ ವರ್ಷದಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾರೆ. ಯಡಿಯೂರಪ್ಪ ಅವರು ಎಷ್ಟು ದಿನ ಮುಖ್ಯಮಂತ್ರಿಗಳಾಗಿರುತ್ತಾರೆ ನೋಡೋಣ. ಆದರೆ ಯಾರೇ ಮುಖ್ಯಮಂತ್ರಿಯಾಗಿರಲಿ ಅಭಿವೃದ್ಧಿಗೆ ಅನುದಾನ ಕೊಡಬೇಕು ಎಂದು ಹೇಳಿದರು.

ಗ್ರಾಪಂಗಳು ಬಲಿಷ್ಠವಾಗಬೇಕು. ಅಂದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ ಕನಸು ನನಸಾಗುತ್ತದೆ. ಆದರೆ ಈಗ ಅದಾಗುತ್ತಿಲ್ಲ. ಸದ್ಯ ಈ ಭಾಗದ ಜನತೆ ಕೊಟ್ನಳ್ಳಿ, ಲಾಯದಗುಂದಿ ಏತ ನೀರಾವರಿ ಮಾಡಿಕೊಟ್ಟರೆ ಸತ್ತ ಮೇಲು ನೆನಪು ಮಾಡಿಕೊಳ್ಳುತ್ತೇವೆ ಅಂದಿದ್ದಾರೆ. ಆದರೆ ಸದ್ಯ ನಮ್ಮ ಸರ್ಕಾರವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದರೆ ಮಾಡಿಕೊಟ್ಟು ಬಿಡುತ್ತಿದ್ದೆ, ಬಿಜೆಪಿ ಸರ್ಕಾರ ಇದೆ ಪ್ರಯತ್ನ ಮಾಡುತ್ತೇನೆ ಎಂದರು.

ಏತ ನೀರಾವರಿ ಯೋಜನೆಗೆ ಮಿಸ್ಟರ್‌ ಯಡಿಯೂರಪ್ಪ ದುಡ್ಡು ಕೊಡಬೇಕು ಎಂದು ಹೇಳಿ ನೆರೆಗೆ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರ ಬಗ್ಗೆ ಅಧಿ​ಕಾರಿಗಳನ್ನು ಕೇಳಿದರೆ ಯಡಿಯೂರಪ್ಪ ಒಂದು ರುಪಾಯಿ ಕೊಟ್ಟಿಲ್ಲವಂತೆ, ಬರುವ ಅ​ಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
 

click me!