ಸಿದ್ದರಾಮಯ್ಯ ಪುತ್ಥಳಿ ತೆಗೆದು ಕಸದ ಲಾರಿಗೆ ತುಂಬಿಕೊಂಡು ಹೋದ ಕಲಬುರಗಿ ಪಾಲಿಕೆ; 15 ದಿನದಲ್ಲಿ ಮರುಸ್ಥಾಪನೆಗೆ ಆಗ್ರಹ!

Sathish Kumar KH   | Kannada Prabha
Published : Sep 27, 2026, 09:37 AM IST
Kalaburagi Siddaramaiah Statue

ಸಾರಾಂಶ

ಕಲಬುರಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಕಸದ ಲಾರಿಯಲ್ಲಿ ಅಗೌರವಯುತವಾಗಿ ತೆರವುಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇನ್ನು 15 ದಿನಗಳಲ್ಲಿ ಅದೇ ಸ್ಥಳದಲ್ಲಿ ಪುತ್ಥಳಿಯನ್ನು ಮರುಸ್ಥಾಪಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ದಾವಣಗೆರೆ (ಸೆ.27): ಅಹಿಂದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿಯನ್ನು ಕಸದ ಗಾಡಿಯಲ್ಲಿ ತೆರವು ಮಾಡಿದ ಕಲಬುರಗಿ ಮಹಾನಗರ ಪಾಲಿಕೆ ಇನ್ನು 15 ದಿನದಲ್ಲಿ ಅದೇ ಸ್ಥಳದಲ್ಲಿ ಗೌರವಯುತವಾಗಿ ಸಿದ್ದರಾಮಯ್ಯ ಪುತ್ಥಳಿ ಪ್ರತಿಷ್ಟಾಪಿಸದಿದ್ದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪುತ್ಥಳಿಯನ್ನು ಅಗೌರವಯುತವಾಗಿ ತೆರವು ಮಾಡಿದ ಕಲಬುರಗಿ ಪಾಲಿಕೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅದೇ ಸ್ಥಳದಲ್ಲಿ ಗೌರವಯುತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ಥಳಿ ಪ್ರತಿಷ್ಟಾಪಿಸಬೇಕು. ಸಿದ್ದರಾಮಯ್ಯ ನಾಡು ಕಂಡ ಅಪರೂಪದ ವ್ಯಕ್ತಿತ್ವದ ನಾಯಕ. 2 ಸಲ ಮುಖ್ಯಮಂತ್ರಿಯಾಗಿ, 17 ಸಲ ದಾಖಲೆಯ ಬಜೆಟ್ ಮಂಡಿಸಿದ ಅನುಭವಿ ನಾಯಕ. ದೀರ್ಘಕಾಲದ ಮುಖ್ಯಮಂತ್ರಿ ಎಂಬ ದಾಖಲೆ ಮಾಡಿದ ಸಿದ್ದರಾಮಯ್ಯ ಅಹಿಂದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಬಂದವರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸಿದ್ದರಾಮಯ್ಯ ಅವರ 9 ಅಡಿ ಕಂಚಿನ ಪುತ್ಥಳಿಯನ್ನು ಕಲಬುರಗಿ ಹೃದಯ ಭಾಗದ ಹೈಕೋರ್ಟ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂದು ತಿಳಿಸಿದರು.

ಕಸದ ಲಾರಿಗೆ ಸಿದ್ದರಾಮಯ್ಯ ಪುತ್ಥಳಿ

ಕಲಬುರಗಿ ಹೈಕೋರ್ಟ್ ವೃತ್ತಕ್ಕೆ 2023ರಂದು ಸಿದ್ದರಾಮಯ್ಯ ವೃತ್ತವೆಂದೇ ನಾಮಕರಣ ಮಾಡಲಾಗಿದೆ. ಅದೇ ವೃತ್ತದಲ್ಲಿ ಸಿದ್ದರಾಮಯ್ಯನವರ ಕಂಚಿನ ಪುತ್ಥಳಿಯನ್ನು ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಪ್ರತಿಷ್ಟಾಪಿಸಿದ್ದರು. ಆದರೆ, ಅಲ್ಲಿನ ಪಾಲಿಕೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ, ಬೆಳಗಿನ ಜಾವ 4 ಗಂಟೆ ವೇಳೆ ಕಸ ಸಾಗಿಸುವ ಲಾರಿ ತಂದು, ಸಿದ್ದರಾಮಯ್ಯ ಪುತ್ಥಳಿಯನ್ನು ಎಳೆದಾಡಿ ತೆರವು ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ಪುತ್ಥಳಿಯನ್ನು ಕಸ ಸಾಗಿಸುವ ಲಾರಿಯನ್ನು ಎಳೆದಾಡಿ, ತೆರವುಗೊಳಿಸಿದ್ದು ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳ ನಾಯಕರಿಗೆ ಮಾಡಿದ ಘೋರ ಅವಮಾನ. ಈ ಘಟನೆಯಿಂದ ಇಡೀ ಕುರುಬ ಸಮಾಜಕ್ಕೆ ನೋವಾಗಿದೆ. ಸಿದ್ದರಾಮಯ್ಯ ವೃತ್ತವೆಂದು ನಾಮಕರಣವಾದ ವೃತ್ತದಲ್ಲಿ ಸಿದ್ದರಾಮಯ್ಯ ಪುತ್ಥಳಿ ಇರುವುದು ಒಳ್ಳೆಯದೆಂದು ಪ್ರತಿಷ್ಟಾಪಿಸಿದ್ದರು. ಪರವಾನಿಗೆ ಪಡೆದಿಲ್ಲವೆಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಅದೇ ಊರಿನಲ್ಲಿ 20ಕ್ಕೂ ಹೆಚ್ಚು ಪುತ್ಥಳಿ ಅನಧಿಕೃತ ಆಗಿರುವುದು ಅದೇ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂದು ಕಿಡಿಕಾರಿದರು.

ಸಂಘದ ಅಧ್ಯಕ್ಷ ವೈ.ವಿರುಪಾಕ್ಷಪ್ಪ, ಮುಖಂಡರಾದ ಎಚ್.ಜಿ.ಸಂಗಪ್ಪ ಪೈಲ್ವಾನ್, ದೇವನಗರಿ ಎಂ.ಮನು, ನಾಗರಾಜ, ಜಿ.ವಿ.ಮಾಲತೇಶ, ಷಣ್ಮುಖಪ್ಪ, ಶಂಕರಮೂರ್ತಿ, ಎಂ.ಬಿ.ದ್ಯಾಮಪ್ಪ, ಎನ್.ಮಾಲತೇಶ, ಭಗತ್ ಸಿಂಹ, ಜಿ.ಎನ್.ಮಾಲತೇಶ ಇತರರು ಇದ್ದರು.

ದುರುದ್ದೇಶ ಪೂರ್ವಕವಾಗಿ ಸಿದ್ದರಾಮಯ್ಯ ಪುತ್ಥಳಿ ಗುರಿಯಾಗಿಸಿಕೊಂಡು, ಅವಮಾನಕರ ರೀತಿಯಲ್ಲಿ ತೆರವು ಮಾಡಿದ ಅಧಿಕಾರಿಗಳಿಗೆ ಅದೇ ಕಲಬುರಗಿಯಲ್ಲಿರುವ 20ಕ್ಕೂ ಹೆಚ್ಚು ಪುತ್ಥಳಿಗಳು ಕಾಣುತ್ತಿಲ್ಲವೇ? ಸಿದ್ದರಾಮಯ್ಯ ಪುತ್ಥಳಿ ಇಟ್ಟಿದ್ದಕ್ಕೆ ಅನ್ವಯಿಸುವ ಪರವಾನಿಗೆ ಅಂತಹ ಅನಧಿಕೃತ ಪುತ್ಥಳಿಗಳಿಗೆ ಅನ್ವಯಿಸುವುದಿಲ್ಲವೇ? ಸಿಎಂ ಡಿ.ಕೆ.ಶಿವಕುಮಾರ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅಲ್ಲಿ ವಾಸ್ತವ್ಯ ಹೂಡಿದ್ದಾಗಲೇ ಪುತ್ಥಳಿ ತೆರವು ಮಾಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

- ಬಿ.ಬಿ.ಮಲ್ಲೇಶ, ಪ್ರಧಾನ ಕಾರ್ಯದರ್ಶಿ

PREV
Read more Articles on
click me!

Recommended Stories

ಬೆಂಗಳೂರು: 'ಗೇಟ್ ಲಾಕ್ ಮಾಡಿದ್ದರಿಂದ ಬದುಕುಳಿದೆ...'; Rapido ಡೆಲಿವರಿ ಬಾಯ್ ಕೃತ್ಯಕ್ಕೆ ಬೆಚ್ಚಿದ ಯುವತಿ!
ಬ್ಯಾಂಕ್‌ ಕೂಡ ಸೇಫ್‌ ಅಲ್ವಾ? ಸತ್ತವನ ಖಾತೆಯಿಂದ ₹61 ಲಕ್ಷ ಎಗರಿಸಿದ ಮ್ಯಾನೇಜರ್‌ಗೆ ಜೈಲೂಟ! ಏನಿದು ಪ್ರಕರಣ?