
ಮೈಸೂರು (ಸೆ.27): ಮೃತ ಗ್ರಾಹಕನ ಖಾತೆ ಮತ್ತು ಬ್ಯಾಂಕಿನ ಆಂತರಿಕ ಖಾತೆಯಿಂದ ಒಟ್ಟು ₹61.57 ಲಕ್ಷ ದುರುಪಯೋಗ ಪಡಿಸಿಕೊಂಡ ಎಸ್‌ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರೊಬ್ಬರಿಗೆ ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಎಸ್‌ಬಿಐ ಚಾಮುಂಡಿಪುರಂ ಶಾಖೆಯ ಮುಖ್ಯ ವ್ಯವಸ್ಥಾಪಕ ಎ.ವಿ.ಕುಲಕರ್ಣಿ(A.V.Kulkarni) ಶಿಕ್ಷೆಗೆ ಗುರಿ ಆದವರು. ಎ.ವಿ.ಕುಲಕರ್ಣಿ ಅವರು ಮೈಸೂರಿನ ಚಾಮುಂಡಿಪುರಂ ಶಾಖೆಯ ಎಸ್‌ಬಿಐ ಬ್ಯಾಂಕ್(Chamundipuram SBI Bank)ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದರು. ಕುಲಕರ್ಣಿ 2009ರ ಮೇ 13ರಿಂದ 2011ರ ಡಿ.23ರ ಅವಧಿಯಲ್ಲಿ ಖಾತೆದಾರ ಕೃಷ್ಣ ಅಯ್ಯರ್ ಅವರ ಖಾತೆಯಿಂದ ₹40.53 ಲಕ್ಷ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಿಂದ ₹21.04 ಲಕ್ಷ ಸೇರಿದಂತೆ ಒಟ್ಟು ₹61.57 ಲಕ್ಷವನ್ನು ತಮ್ಮ ಹಾಗೂ ತಮ್ಮ ಮಗನ ಖಾತೆಗೆ ವರ್ಗಾಯಿಸಿಕೊಂಡು ಡ್ರಾ ಮಾಡಿದ್ದರು. ವಿಶೇಷವೆಂದರೆ, ಕೃಷ್ಣ ಅಯ್ಯರ್ ಅವರು 2005ರ ಏ.7ರಂದು ಮೃತಪಟ್ಟಿದ್ದಾರೆ.
ಈ ಸಂಬಂಧ ಬ್ಯಾಂಕ್ ಮೇಲಾಧಿಕಾರಿಗಳ ವಿಚಾರಣೆಯ ನಂತರ ಕುಲಕರ್ಣಿ ತಪ್ಪು ಒಪ್ಪಿಕೊಂಡು, 62 ಲಕ್ಷ ರು.ಹಣವನ್ನು ಬ್ಯಾಂಕಿಗೆ ಪಾವತಿ ಮಾಡಿದ್ದರು. ಈ ಬಗ್ಗೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಆಗಿನ ಎಸ್ಐ ಪ್ರಶಾಂತ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಪ್ರಕಾಶ ಅವರು, ಕುಲಕರ್ಣಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ದಂಡದಲ್ಲಿ 40 ಸಾವಿರ ರೂ.ಗಳನ್ನು ಬ್ಯಾಂಕಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.