ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು. ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಸಾತ್ಯಕಿ ಯಾರು ಅವರು, ಯಾರು ಆ ಮನುಷ್ಯ. ಅವನಿಗೆ ಏನು ಗೊತ್ತಿದೆ? ಎಂದು ಪ್ರಶ್ನಿಸಿದ ಎಚ್‌ಡಿಕೆ
ಮಡಿಕೇರಿ(ಅ.24): ಒಂದು ದೇಶ ಒಂದೇ ಭಾಷೆ ಹಿಂದಿ ಆಗಿರಬೇಕು. ಹಿಂದೂ ರಾಷ್ಟ್ರವಾಗಿರಬೇಕು ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಗೆ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭಾನುವಾರ ಹೆಲಿಕಾಪ್ಟರ್ ಮೂಲಕ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು. ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಸಾತ್ಯಕಿ ಯಾರು ಅವರು, ಯಾರು ಆ ಮನುಷ್ಯ. ಅವನಿಗೆ ಏನು ಗೊತ್ತಿದೆ? ಎಂದು ಪ್ರಶ್ನಿಸಿದರು.
ಮೊದಲು ಜನರ ಬದುಕನ್ನು ಕಟ್ಟಲು ನೋಡಿ, ಕೊಡಗಿನಲ್ಲಿ ಮೂರು ವರ್ಷದಿಂದ ಭೂಕುಸಿತದಿಂದ ಮನೆ, ಬೆಳೆ ಹಾಳಾಗಿದೆ. ಅವರಿಗೆ ಏನು ಕೊಟ್ಟಿದ್ದೀರಿ ಮೊದಲು ಹೇಳಿ. ಆಮೇಲೆ ನಿಮ್ಮ ಹಿಂದಿ ಭಾಷೆ ಬಗ್ಗೆ ಚರ್ಚೆ ಮಾಡಿ ಎಂದ ಕುಮಾರಸ್ವಾಮಿ, ಸಾವರ್ಕರ್ ಮಗನೋ, ಮೊಮ್ಮಗನೋ ಇಲ್ಲಿಗೆ ಬಂದು ನಮಗೆ ಬೋಧನೆ ಮಾಡುವುದು ಏನಿದೆ? ಮೊದಲು ಜನರ ಬದುಕನ್ನು ಕಟ್ಟಲು ನೋಡಿ ಎಂದು ತಿರುಗೇಟು ನೀಡಿದರು.
undefined
ಸಾವರ್ಕರ್ ರಕ್ತ ಹಂಚಿಕೊಂಡು ಹುಟ್ಟಿದ್ದೇವೆ: ಈಶ್ವರಪ್ಪ
ಮಾಮನಿ ನಿಧನಕ್ಕೆ ಸಂತಾಪ:
ವಿಧಾನಸಭಾ ಉಪ ಸಭಾಪತಿ ಆನಂದ್ ಮಾಮನಿ ನಿಧನಕ್ಕೆ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದರು. ಅವರು ಸರಳ ಸಜ್ಜನಿಕೆ, ಸೌಮ್ಯ ವ್ಯಕ್ತಿ, ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಸಾವು ಬರಬಾರದಿತ್ತು. ಅವರು ಬಿಜೆಪಿ ಪಕ್ಷಕ್ಕೆ ಸೇರುವುದಕ್ಕೆ ಮುನ್ನ ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದರು. ಅವರ ತಂದೆ ನಮ್ಮ ಪಕ್ಷದ ವತಿಯಿಂದ 97-98ರಲ್ಲಿ ವಿಧಾನಸಭೆ ಸಭಾಪತಿ ಆಗಿದ್ದರು. ದೇವರು ಆ ಕುಟುಂಬಕ್ಕೆ ಮಾಮನಿ ಅಗಲಿಕೆಯ ನೋವನ್ನ ಭರಿಸುವ ಶಕ್ತಿ ನೀಡಲಿ ಎಂದರು.
ಸಚಿವ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸುಸಂಸ್ಕೃತಿಯ ಪಕ್ಷ ಬಿಜೆಪಿ. ಬಿಜೆಪಿ ಪಕ್ಷ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂದು ತಿಳಿಯುತ್ತದೆ. ಬಿಜೆಪಿಯ ನಡವಳಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಎರಡು ತರಹದ ಮುಖ ಹೊಂದಿದ್ದಾರೆ. ಎದುರು ಸಿಕ್ಕಾಗ ಒಂದು ರೀತಿ ಮಾತನಾಡಿಸುತ್ತಾರೆ. ಆದರೆ ಒಳಗೆ ಇರುವ ನಡವಳಿಕೆಯೇ ಬೇರೆ ಇದೆ. ಸಾರ್ವಜನಿಕರು ಅಹವಾಲು ಕೊಡಲು ಬಂದಾಗ ಅವರು ನಡೆದುಕೊಳ್ಳುವುದು ಹೇಗೆಂದು ಗೊತ್ತಿದೆ. ಅವರಿಂದ ಒಳ್ಳೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯ ಹಲವು ಸಚಿವರು ಹಿಂದೆ ಹೀಗೆ ನಡೆದುಕೊಂಡಿದ್ದು ಗೊತ್ತೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿ
ಮಡಿಕೇರಿ : ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಸಂಕೇತ್ ಪೂವಯ್ಯ ಪುತ್ರ ವಿವೇಕ್ ಪೂವಯ್ಯ ನಿಶ್ಚಿತಾರ್ಥ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು. ಭಾನುವಾರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿಗೆ ಆಗಮಿಸಿ ನಗರದ ಹೊರ ವಲಯದ ಖಾಸಗಿ ರೆಸಾಟ್ ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ತೆರಳಿದರು.