ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಅ.30) : ನಗರಾಡಳಿತದ ವೀಕೇಂದ್ರೀಕರಣ ಹಾಗೂ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಉತ್ತೇಜಿಸಲು ಆರಂಭವಾದ ವಾರ್ಡ್ ಸಮಿತಿ ರಚನೆ ಮಹಾನಗರದಲ್ಲಿ ನನೆಗುದಿಗೆ ಬಿದ್ದಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.
ಭಾರತ್ ಜೋಡೋ ಯಾತ್ರೆಯನ್ನ ಭಾರತದ ಒಳಗಡೆ ಮಾಡುವ ಅವಶ್ಯಕತೆಯಿಲ್ಲ: ಶೋಭಾ ಕರಂದ್ಲಾಜೆ
ವಾರ್ಡ್ ಸಮಿತಿ ರಚನೆಗೆ ಒಂದು ವಾರ್ಡ್‌ನಲ್ಲಿ ಸಾಮಾನ್ಯ ಹಾಗೂ ಮಹಿಳೆ ತಲಾ 3, ಸಂಘ-ಸಂಸ್ಥೆ ಮತ್ತು ಎಸ್ಸಿ-ಎಸ್ಟಿತಲಾ 2 ಸೇರಿ ಒಟ್ಟು 10 ಅರ್ಜಿ ಸಲ್ಲಿಕೆಯಾಗಿರಬೇಕು. ಆದರೆ ಕೆಲವು ವಾರ್ಡ್‌ಗಳಲ್ಲಿ ಸಂಖ್ಯೆ ಕಡಿಮೆ ಇದೆ. ಆದರೆ ಅಗತ್ಯ ಅರ್ಜಿ ಸಲ್ಲಿಕೆಯಾಗಿರುವ ಹಾಗೂ ಶೇ. 50ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ ವಾರ್ಡ್‌ಗಳಲ್ಲಿ ಸಮಿತಿ ರಚನೆ ಮಾಡಬಹುದಾಗಿದೆ. ಅದರಂತೆ ಮಂಗಳೂರು ಸೇರಿ ಹಲವೆಡೆ ಈಗಾಗಲೇ ವಾರ್ಡ್ ಸಮಿತಿ ರಚಿಸಲಾಗಿದೆ. ಆದರೆ, ಹು-ಧಾರವಾಡದಲ್ಲಿ ಮಾತ್ರ ವಾರ್ಡ್ ಸಮಿತಿ ರಚನೆ ಇನ್ನೂ ಕನಸಾಗಿದೆ.
ವಾರ್ಡ್ ಸಮಿತಿ ರಚನೆಗಾಗಿ ಪಾಲಿಕೆ ಮೂರು ಬಾರಿ ಅರ್ಜಿ ಆಹ್ವಾನಿಸಿತ್ತು. ಬಳಿಕ 82 ವಾರ್ಡ್‌ಗಳಿಂದ 627 ಅರ್ಜಿ ಸಲ್ಲಿಕೆಯಾಗಿವೆ. ಆ ನಂತರ ವಾರ್ಡ್ ಸಮಿತಿ ರಚನೆಗಾಗಿ ಸಾರ್ವಜನಿಕ ವಲಯದಿಂದ ಕೂಗು ಕೇಳಿ ಬಂದ ಹಿನ್ನೆಲೆ 2022ರ ಆ. 25ರಂದು ಇದಕ್ಕಾಗಿ ಐದು ಸದಸ್ಯರ ಸದನ ಸಮಿತಿ ರಚಿಸಲಾಗಿದೆ. ಆದರೆ ಇದು ಕೇವಲ ಪತ್ರಕ್ಕೆ ಮಾತ್ರ ಸೀಮಿತವಾಗಿದೆ. ಸದನ ಸಮಿತಿ ಇದುವರೆಗೆ ಯಾವುದೇ ಸಭೆ ನಡೆಸಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಎರಡು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಕೇವಲ ಚರ್ಚೆ ಮಾಡಿ ಪ್ರಸ್ತಾವಿಸಲಾಗಿದೆ. ಆದರೆ ವಾರ್ಡ್ ಸಮಿತಿ ರಚನೆಗಾಗಿ ಅಧಿಕೃತವಾಗಿ ಸದನ ಸಮಿತಿ ರಚಿಸಿಲ್ಲ. ಹಾಗಾಗಿ ಸಮಿತಿಯಿಂದ ಯಾವುದೇ ಕೆಲಸ ನಡೆಯುತ್ತಿಲ್ಲ. ಪಾಲಿಕೆಯಿಂದ ಅಧಿಕೃತ ಆದೇಶ ಬಂದ ಬಳಿಕ ತಮ್ಮ ನೇತೃತ್ವದ ಸಮಿತಿ ಕೆಲಸ ಆರಂಭಿಸಲಿದೆ ಎನ್ನುತ್ತಾರೆ ಸದನ ಸಮಿತಿ ಅಧ್ಯಕ್ಷ ರಾಮಪ್ಪ ಬಡಿಗೇರ.
ನಿರಾಸಕ್ತಿ:
ಸಮಿತಿ ರಚನೆಗೆ ಒತ್ತಾಯಿಸಿ ಹು-ಧಾ ನಾಗರಿಕರ ವಾರ್ಡ್ ಸಮಿತಿ ಬಳಗದ ವತಿಯಿಂದ ಈಗಾಗಲೇ ಪಾಲಿಕೆ ಮೇಯರ್, ಆಯುಕ್ತರು, ವಿರೋಧ ಪಕ್ಷದ ನಾಯಕರು, ಸಭಾ ನಾಯಕರು ಹಾಗೂ ಹಲವು ಸದಸ್ಯರಿಗೆ ಮನವಿ ಸಲ್ಲಿಸಲಾಗಿದ್ದರೂ ಆ ನಿಟ್ಟಿನಲ್ಲಿ ಯಾವುದೇ ಕಾರ್ಯವಾಗುತ್ತಿಲ್ಲ ಎನ್ನುವ ಅಸಮಾಧಾನವೂ ಸಾರ್ವಜನಿಕರಲ್ಲಿದೆ.
ವಾರ್ಡ್ ಸಮಿತಿಯಿಂದ ಸದಸ್ಯರು, ಅಧಿಕಾರಿಗಳ ಕಿಮ್ಮತ್ತು ಕಡಿಮೆಯಾಗಲಿದೆ. ಸಾಕಷ್ಟುಕಿರಿಕಿರಿ ಉಂಟಾಗಲಿದೆ ಎನ್ನುವ ಮನೋಭಾವದಿಂದಾಗಿ ಇದಕ್ಕೆ ಯಾರೂ ಆಸಕ್ತಿ ತೋರುತ್ತಿಲ್ಲ. ಆದರೆ, ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಸಮಿತಿ ರಚನೆ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
Hubballi Smart City ಸಭೆ ಅರ್ಧಕ್ಕೆ ಮೊಟಕು, ಅಧಿಕಾರಿಗಳನ್ನು ಬೆಂಡೆತ್ತಿದ ಸದಸ್ಯರು
ಈಗಾಗಲೇ ಮಹಾನಗರದ ನಾಗರಿಕರಿಂದ ಸಲ್ಲಿಸಲಾದ ಅರ್ಜಿ ಪರಿಗಣಿಸಿ, ನಾಗರಿಕರ ವಾರ್ಡ್ ಸಮಿತಿ ರಚನೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು. ಇಲ್ಲದಿದ್ದರೆ ವಾರ್ಡ್ ಸಮಿತಿ ರಚನೆ ಕುರಿತು ಜನಪ್ರತಿನಿಧಿ, ಅಧಿಕಾರಿಗಳನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
ಲಿಂಗರಾಜ ಧಾರವಾಡಶೆಟ್ಟರ ಸಂಚಾಲಕ, ಹು-ಧಾ ನಾಗರಿಕರ ವಾರ್ಡ್ ಸಮಿತಿ ಬಳಗ
ವಾರ್ಡ್ ಸಮಿತಿ ರಚನೆಗೆ ಮೊದಲು ಸಾರ್ವಜನಿಕರ ವಲಯದಲ್ಲಿ ನಿರಾಸಕ್ತಿ ಕಂಡು ಬಂದಿತ್ತು. ಮೂರು ಬಾರಿ ಅರ್ಜಿ ಕರೆಯಲಾಗಿದೆ. ದೂರು ಸಲ್ಲಿಸುವುದಷ್ಟೆಅಲ್ಲ, ಸಾರ್ವಜನಿಕರು ಆಡಳಿತದಲ್ಲಿ ಭಾಗಿಯಾಗಬೇಕು. ಸಾಕಷ್ಟುಜನರು ಸಮಿತಿ ರಚನೆಗೆ ಮನವಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ ವಾರ್ಡ್ ಸಮಿತಿ ರಚಿಸಲೇಬೇಕಾಗಿದೆ.
ಡಾ. ಗೋಪಾಲಕೃಷ್ಣ ಬಿ., ಪಾಲಿಕೆ ಆಯುಕ್ತ
ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಸದನ ಸಮಿತಿ ರಚಿಸಲಾಗಿದೆ. ಅದರ ಕಾರ್ಯ ಏನಾಗಿದೆ. ವರದಿ ಸಲ್ಲಿಸುವ ಕುರಿತು ಶೀಘ್ರದಲ್ಲಿ ಸಭೆ ನಡೆಸುವ ಮೂಲಕ ಸಮಿತಿ ರಚನೆಗೆ ಕ್ರಮಕೈಗೊಳ್ಳಲಾಗುವುದು.
ಈರೇಶ ಅಂಚಟಗೇರಿ, ಮೇಯರ್