
ಭಾರತದಲ್ಲಿ ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾದ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಆದರೆ, ಭಾರತೀಯ ಚುನಾವಣಾ ಆಯೋಗ (ECI) ಕೈಗೆತ್ತಿಕೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 'ಫಾರ್ಮ್-7' (Form-7) ಭಾರೀ ಸಂಚಲನ ಸೃಷ್ಟಿಸಿದೆ. ಮುಖ್ಯವಾಗಿ ಉತ್ತರ ಪ್ರದೇಶ, ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಲ್ಲಿ ಅಂತಿಮ ಹಂತದಲ್ಲಿರುವ ಈ ಪ್ರಕ್ರಿಯೆಯು ಅರ್ಹ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಎನ್ನುವ ಗಂಭೀರ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕರ್ನಾಟಕದ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಹಾಗೂ ಪ್ರಮುಖ ವಿರೋಧ ಪಕ್ಷಗಳು, ಫಾರ್ಮ್-7 ಮೂಲಕ ಅಹಿಂದ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸಮುದಾಯಗಳ ಮತಗಳನ್ನು ಬಲವಂತವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿವೆ. ಇದನ್ನು ಪ್ರಜಾಪ್ರಭುತ್ವಕ್ಕೆ ಒದಗಿರುವ ಗಂಭೀರ ಬೆದರಿಕೆ ಎಂದು ಬಣ್ಣಿಸಿರುವ ನಾಯಕರು, ಚುನಾವಣಾ ಆಯೋಗದಿಂದ ತಕ್ಷಣದ ಹಸ್ತಕ್ಷೇಪ ಮತ್ತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.
ಜನತಾ ಪ್ರಾತಿನಿಧ್ಯ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960 ರ ಅಡಿಯಲ್ಲಿ 'ಫಾರ್ಮ್-7' ಅನ್ನು ಮತದಾರರ ಪಟ್ಟಿಯಿಂದ ಅಸಿಂಧು ಹೆಸರುಗಳನ್ನು ತೆಗೆದುಹಾಕಲು (Deletion) ಬಳಸಲಾಗುತ್ತದೆ. ಮತದಾರನು ಮರಣ ಹೊಂದಿದ್ದರೆ, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ, ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡಿದ್ದರೆ ಅಥವಾ ಅರ್ಹತೆ ಹೊಂದಿಲ್ಲದಿದ್ದರೆ ಮಾತ್ರ ಈ ನಮೂನೆಯನ್ನು ಬಳಸಲು ಕಾನೂನಿನಲ್ಲಿ ಅವಕಾಶವಿದೆ. ಪಟ್ಟಿಯನ್ನು ನಕಲಿ ಹೆಸರುಗಳಿಂದ ಮುಕ್ತಗೊಳಿಸುವುದು ಇದರ ಅಸಲಿ ಉದ್ದೇಶ.
ವಿರೋಧ ಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿ ಹಾಗೂ ಗ್ರೌಂಡ್ ರಿಯಾಲಿಟಿ ಪರಿಶೀಲಿಸಿದಾಗ, ಫಾರ್ಮ್-7 ಪ್ರಕ್ರಿಯೆಯಲ್ಲಿ ಕೆಲವು ಗಂಭೀರ ಲೋಪಗಳು ಹಾಗೂ ದುರ್ಬಳಕೆಯ ಯತ್ನಗಳು ನಡೆದಿರುವುದು ಸ್ಪಷ್ಟವಾಗುತ್ತದೆ.
ಬಲ್ಕ್ ಅರ್ಜಿಗಳ ಸಲ್ಲಿಕೆ; ಕಾನೂನಿನ ಪ್ರಕಾರ ಪ್ರತಿಯೊಂದು ಫಾರ್ಮ್-7 ಅರ್ಜಿಯನ್ನೂ ಪ್ರತ್ಯೇಕವಾಗಿ ಪರಿಶೀಲಿಸಬೇಕು. ಆದರೆ ಒಂದೇ ಪ್ರದೇಶದಿಂದ ನೂರಾರು ಮತ್ತು ಸಾವಿರಾರು ಅರ್ಜಿಗಳು ಏಕಾಏಕಿ ಸಲ್ಲಿಕೆಯಾಗಿವೆ.
ನೋಟಿಸ್ ನೀಡದೆ ಅಳಿಸುವಿಕೆ; ನಿಯಮಾವಳಿಗಳ ಪ್ರಕಾರ, ಹೆಸರು ತೆಗೆದುಹಾಕುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ಕಡ್ಡಾಯವಾಗಿ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ ನೇರವಾಗಿ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿರುವುದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ.
ಬೂತ್ ಮಟ್ಟದ ಅಧಿಕಾರಿಗಳು ಪ್ರತ್ಯಕ್ಷವಾಗಿ ಮನೆಗೆ ಭೇಟಿ ನೀಡಿ ಭೌತಿಕ ಪರಿಶೀಲನೆ ನಡೆಸುವ ಬದಲಿಗೆ, ಆತುರದಲ್ಲಿ ಅಥವಾ ರಾಜಕೀಯ ಒತ್ತಡಗಳಿಗೆ ಮಣಿದು ಮೌಖಿಕ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು "ಸ್ಥಳಾಂತರಗೊಂಡಿದ್ದಾರೆ" ಅಥವಾ "ಸತ್ತಿದ್ದಾರೆ" ಎಂದು ಟ್ಯಾಗ್ ಮಾಡಿರುವುದು ಈ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಕಾಣಿಸುತ್ತದೆ. ಈ ಎಲ್ಲ ಅಂಶಗಳು ಇದು ಬರೀ ಕೇವಲ ರಾಜಕೀಯ ಆರೋಪವಲ್ಲ, ಬದಲಾಗಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಳಸಿಕೊಂಡು ನಡೆಸಿರುವ 'ಮತದಾರರ ನಿಗ್ರಹ' (Voter Suppression) ಎನ್ನುವ ಅನುಮಾನಗಳಿಗೆ ಪುಷ್ಟಿ ನೀಡುತ್ತಿವೆ.
ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಚುನಾವಣಾ ಆಯೋಗವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಫಾರ್ಮ್-7 ಒಂದು ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಇದು ಅತ್ಯಗತ್ಯ ಎಂದಿದೆ.
ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳಿಗೆ ಬ್ರೇಕ್ ಹಾಕಲು ಆಯೋಗವು ಕಠಿಣ ನಿಯಮವನ್ನು ನೆನಪಿಸಿದೆ!
1. ಯಾರೋ ಒಬ್ಬರ ಹೆಸರನ್ನು ಅಳಿಸಲು ಅಪರಿಚಿತರು ಅಥವಾ ಬೇರೆಯವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
2. ಒಬ್ಬರು ಭರ್ತಿ ಮಾಡಿದ ಫಾರ್ಮ್-7 ಅನ್ನು ಇನ್ನೊಬ್ಬರು ಒಯ್ದು ಬಿಎಲ್‌ಒ (BLO) ಅಥವಾ ಅಧಿಕಾರಿಗಳಿಗೆ ತಲುಪಿಸಲು ಅವಕಾಶವಿಲ್ಲ.
3. ಸುಳ್ಳು ಮಾಹಿತಿ ನೀಡಿ ಫಾರ್ಮ್-7 ಸಲ್ಲಿಸುವುದು ಕಾನೂನಿನಡಿ ಅಪರಾಧವಾಗಿದ್ದು, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.
ಒಂದು ವೇಳೆ ಫಾರ್ಮ್-7 ಎಡವಟ್ಟಿನಿಂದ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಗಾಯಬ್ ಆಗಿದ್ದರೆ ತಕ್ಷಣವೇ ಈ ಕ್ರಮಗಳನ್ನು ಕೈಗೊಳ್ಳಿ:
NVSP ಪೋರ್ಟಲ್ ಅಥವಾ Voter Helpline App ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.
ನಿಮ್ಮ ವ್ಯಾಪ್ತಿಯ BLO ಅಥವಾ ERO (ಚುನಾವಣಾ ನೋಂದಣಿ ಅಧಿಕಾರಿ) ಅವರನ್ನು ಸಂಪರ್ಕಿಸಿ.
ಫಾರ್ಮ್-8 (Form-8) ಭರ್ತಿ ಮಾಡುವ ಮೂಲಕ ತಿದ್ದುಪಡಿ ಅಥವಾ ಮರು-ಸೇರ್ಪಡೆಗೆ ತಕ್ಷಣ ಅರ್ಜಿ ಸಲ್ಲಿಸಿ.
ಮತದಾರರ ಪಟ್ಟಿಯಲ್ಲಿನ ದೋಷಗಳು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನೇ ಕುಸಿಯುವಂತೆ ಮಾಡುತ್ತವೆ. ಹೀಗಾಗಿ ಆಯೋಗವು ಫಾರ್ಮ್-7 ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು, ಪ್ರತಿಯೊಂದು ಅರ್ಜಿಯನ್ನೂ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.