
ವಿಘ್ನೇಶ್ ಎಂ.ಭೂತನಕಾಡು
ಮಡಿಕೇರಿ: ಬೇಸಿಗೆ ಅವಧಿಯಲ್ಲಿ ಕಂಡುಬರುವ ಕಾಡ್ಗಿಚ್ಚನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಿನಿಂದಲೇ ಅರಣ್ಯ ಇಲಾಖೆ ಕಾರ್ಯಪ್ರವೃತ್ತಗೊಂಡಿದ್ದು, ಬೆಂಕಿ ರೇಖೆ ನಿರ್ಮಿಸುವ ಕೆಲಸದಲ್ಲಿ ನಿರತವಾಗಿದೆ. ಕಾಡಿನ ಕಲ್ಲು ಪ್ರದೇಶಗಳ ಮೇಲೆ ಪ್ರಾಣಿಗಳು ಓಡಾಡುವಾಗ ಕಿಡಿಗಳು ಉಂಟಾಗಿ ಅಥವಾ ಇನ್ನಿತರ ಕಾರಣದಿಂದ ಬೆಂಕಿ ಹರಡಿ ಕಾಡ್ಗಿಚ್ಚು ಸೃಷ್ಟಿಯಾಗಿ ಅರಣ್ಯದ ಜತೆಗೆ ವನ್ಯಜೀವಿಗಳು ನಾಶವಾಗುವ ಸಾಧ್ಯತೆ ಇದೆ. ಇಂತಹ ಸ್ಥಳಗಳನ್ನು ಗುರುತಿಸಿ ಅಗತ್ಯ ಜಾಗಗಳಲ್ಲಿ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ಮಾಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ನಾಶ ವಾಗಿತ್ತು. ಇದರಿಂದ ಬೇಸಗೆ ಎದುರಾದರೆ ಜಿಲ್ಲೆಯಲ್ಲಿ ಕಾಡ್ಗಿಚ್ಚು ಆತಂಕ ಎದುರಾಗುತ್ತದೆ.
ಮಡಿಕೇರಿ, ವಿರಾಜಪೇಟೆ ವನ್ಯಜೀವಿ ವಲಯ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ವಲಯಗಳಲ್ಲಿ ಬೆಂಕಿಯ ಅವಘಡಗಳು ಸಂಭವಿಸದಂತೆ ಈಗಿನಿಂದಲೇ ಎಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಬೆಂಕಿ ರೇಖೆ (ಫೈರ್ ಲೈನ್) ನಿರ್ಮಾಣ ಮಾಡಲಾಗುತ್ತಿದ್ದು, ಒಂದೆಡೆ ಬೆಂಕಿ ಕಾಣಿಸಿಕೊಂಡರೇ ಅದು ಮತ್ತೊಂದು ಭಾಗಕ್ಕೆ ಹರಡದಂತೆ ಎಚ್ಚರ ವಹಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಬದಿಯ ಫೈರ್ ಲೈನ್ ಸಮೀಪದ ಕುರುಚಲು ಕಾಡುಗಳನ್ನು ಸುಟ್ಟು ಕಾಡಿಗೆ ಬೆಂಕಿ ಬೀಳದಂತೆ, ಬಿದ್ದರೂ ವ್ಯಾಪಿಸದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕ್ರಮ ವಹಿಸುತ್ತಿದ್ದಾರೆ.
ಫೈರ್ ವಾಚರ್‌ಗಳ ನೇಮಕ
ಬೇಸಿಗೆಗಾಗಿಯೇ ಫೈರ್ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆಯೂ ಒಳಗೊಂಡಂತೆ ಅಗ್ನಿ ಅಪಾಯದಿಂದ ಕಾಡನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ವಾಚ್ ಟವರ್‌ಗಳ ನಿರ್ಮಾಣ, ಫೈರ್ ವಾಚರ್‌ಗಳ ಗಸ್ತಿನ ಜತೆಗೆ, ಕ್ಯಾಮೆರಾ, ನೈಟ್ ವಿಷನ್ ಬೈನಾಕ್ಯುಲರ್, ಥರ್ಮಲ್ ಡೋನ್‌ಗಳ ಮೂಲಕವೂ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಅಗ್ನಿಶಾಮಕ ದಳದೊಂದಿಗೆ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ.
ಜಿಲ್ಲೆಯ ಅರಣ್ಯಗಳಲ್ಲಿ ಹುಲ್ಲು ಒಣಗುತ್ತಿದಂತೆ ಮತ್ತೆ ಹಸಿರು ಹುಲ್ಲು ಚಿಗುರಬೇಕೆಂಬ ಕಾರಣಕ್ಕೆ ಅಲ್ಲಲ್ಲಿ ಕುರುಚಲು ಗುಡ್ಡಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳೂ ನಡೆಯುತ್ತವೆ. ಹೀಗೆ ಬೆಂಕಿ ಹಚ್ಚುವುದರಿಂದಲೂ ಅರಣ್ಯಕ್ಕೆ ಅದು ವ್ಯಾಪಿಸಿ ಭಾರೀ ಅರಣ್ಯ ನಾಶವಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಇಂತಹವರ ಪತ್ತೆಗಾಗಿಯೂ ಫೈರ್ ವಾಚರ್‌ಗಳನ್ನು ಇಲಾಖೆ ನೇಮಿಸುತ್ತಿದೆ.
ಬೀದಿ ನಾಟಕ ಮೂಲಕ ಜಾಗೃತಿ: ಕಾಡ್ಗಿಚ್ಚಿನ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಜಿಲ್ಲೆಯ ನಾನಾ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ಕಲಾ ತಂಡದಿಂದ ಬೀದಿ ನಾಟಕಗಳ ಪ್ರದರ್ಶನ ಮಾಡುವ ಮೂಲಕ ಕಾಡ್ಗಿಚ್ಚು ಜಾಗೃತಿ ಮೂಡಿಸಲು ಮುಂದಾಗಿದೆ. ಇದಲ್ಲದೇ ಅಗ್ನಿಶಾಮಕ ದಳದ ಸಹಯೋಗದಲ್ಲಿ ಅಲ್ಲಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ.
ಈ ಬಾರಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ನೀರಿದೆ. ಇದರಿಂದ ಈ ಬಾರಿ ಅರಣ್ಯದಲ್ಲಿ ನೀರಿನ ಸಮಸ್ಯೆ ಕಂಡುಬರುವುದು ಕಡಿಮೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ: ವನ್ಯಜೀವಿಗಳು ಕಾಡಿನಲ್ಲೇ ಉಳಿಯಲು ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ
ಕುಶಾಲನಗರ -ಸುಂಟಿಕೊಪ್ಪ ರಾಷ್ಟ್ರೀಯ ಹದ್ದಾರಿಯ 275ರ ಆನೆಕಾಡು ವ್ಯಾಪ್ತಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಅಲ್ಲದೆ ರಸ್ತೆ ಮಾರ್ಗದ ಅರಣ್ಯದಲ್ಲಿ ಕಸ ಎಸೆಯದಂತೆ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಎರಡು ಕಡೆಯಲ್ಲಿ ಸಿಸಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.
ಬೇಸಗೆ ಅವಧಿಯಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ರೇಖೆಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ಕುಶಾಲನಗರ ಸೇರಿದಂತೆ ಹಲವು ಕಡೆಗಳಲ್ಲಿ ಬೀದಿ ನಾಟಕ ಮೂಲಕ ಇಲಾಖೆಯಿಂದ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎಂದು ಮಡಿಕೇರಿ ವಿಭಾಗ ಡಿಎಫ್ ಒ ಅಭಿಷೇಕ್ ಹೇಳುತ್ತಾರೆ.
ಇದನ್ನೂ ಓದಿ: '11 ಕೋಟಿ ಸಸಿ ನೆಟ್ಟಿದ್ದೀರಿ ಎಷ್ಟುಳಿದಿವೆ?..' ಅರಣ್ಯ ಪ್ರದೇಶ ಹೆಚ್ಚಾಗದ್ದಕ್ಕೆ ಸಿಎಂ ಬೇಸರ